ಕರ್ನಾಟಕ

karnataka

ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ವಿರೋಧ, ಕೇಶವಕೃಪಾ ಅಂಗಳ ತಲುಪಿದ ವಿವಾದ: ಚುನಾವಣೆ ಮುಂದೂಡಿಕೆ?

By

Published : Sep 18, 2022, 4:12 PM IST

ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ವಲಸಿಗರಿಗೆ ಅವಕಾಶ ಕೊಡುವ ಪರಂಪರೆ ಮಾಡಿದರೆ ಹೇಗೆ?. ನಿಷ್ಠಾವಂತರಿಗೆ ಅಧಿಕಾರ ಬೇಡವೇ ಎಂದು ವಿಧಾನ ಪರಿಷತ್​​ನ ಬಿಜೆಪಿಯ ಕೆಲ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗ್ತಿದೆ.

some-bjp-mlcs-upset-over-election-for-chairman-of-legislative-council
ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ವಿರೋಧ, ಕೇಶವಕೃಪಾ ಅಂಗಳ ತಲುಪಿದ ವಿವಾದ: ಚುನಾವಣೆ ಮುಂದೂಡಿಕೆ

ಬೆಂಗಳೂರು:ಸಭಾಪತಿ, ಉಪ ಸಭಾಪತಿ ಚುನಾವಣೆ ನಡೆಸಲು ಮುಂದಾಗಿರುವ ಬಿಜೆಪಿಗೆ ಹೊಸ ಸಂಕಷ್ಟ ಎದುರಾಗಿದೆ. ಸಭಾಪತಿ ಸ್ಥಾನದ ಭರವಸೆ ನೀಡಿ ಬಿಜೆಪಿಗೆ ಕರೆತಂದಿರುವ ಬಸವರಾಜ ಹೊರಟ್ಟಿ ಅವರಿಗೆ ಅವಕಾಶ ನೀಡುವುದಕ್ಕೆ ಬಿಜೆಪಿಯ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಘದ ಕಚೇರಿ ಬಾಗಿಲು ತಟ್ಟಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡುವ ಚಿಂತನೆ ನಡೆಸಲಾಗಿದೆ ಎನ್ನಲಾಗ್ತಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸೆಳೆದು ಟಿಕೆಟ್ ನೀಡಿದ್ದ ಬಿಜೆಪಿ ಪರಿಷತ್​ನಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪುವಲ್ಲಿ ಸಫಲವಾಗಿದೆ. ಅಲ್ಲದೇ, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ 8 ನೇ ಬಾರಿ ಹೊರಟ್ಟಿ ಆಯ್ಕೆಯೂ ಆಗಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್​ನಿಂದ ಸಭಾಪತಿಯಾಗಿದ್ದ ಹೊರಟ್ಟಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮಾತುಕತೆ ನಡೆಸಿ ಸಭಾಪತಿಯಾಗಿ ಮುಂದುವರೆಸುವ ಭರವಸೆ ನೀಡಿಯೇ ಕರೆತರಲಾಗಿದೆ.

ಕೊಟ್ಟ ಮಾತಿನಂತೆ ಈಗ ಬಿಜೆಪಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಬೇಕಿದೆ. ಇದಕ್ಕಾಗಿಯೇ ಸಚಿವ ಸಂಪುಟ ಸಭೆಯಲ್ಲಿ ಸಭಾಪತಿ, ಉಪ ಸಭಾಪತಿ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಪರಿಷತ್​ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾಗ ಬಸವರಾಜ ಹೊರಟ್ಟಿ ಸಭಾಪತಿ, ಪ್ರಾಣೇಶ ಉಪ ಸಭಾಪತಿ ಆಗಿದ್ದರು. ಈಗಲೂ ಇದೇ ಆಯ್ಕೆಯನ್ನು ಮಾಡಬೇಕು ಎಂದು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಕೇಶವಕೃಪಾಗೆ ಅಸಮಾಧಾನಿತರ ದೂರು:ರಾಜ್ಯ ಬಿಜೆಪಿ ನಾಯಕರ ಈ ನಿರ್ಧಾರಕ್ಕೆ ಪರಿಷತ್​​ನ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇಶವಕೃಪಾಗೆ ದೂರು ಕೊಂಡೊಯ್ದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ವಲಸಿಗರಿಗೆ ಅವಕಾಶ ಕೊಡುವ ಪರಂಪರೆ ಮಾಡಿದರೆ ಹೇಗೆ?. ನಿಷ್ಠಾವಂತರಿಗೆ ಅಧಿಕಾರ ಬೇಡವೇ ಎಂದು ಅಸಮಧಾನ ಹೊರ ಹಾಕಿದ್ದಾರೆ.

ಸಭಾಪತಿ ಸ್ಥಾನದ ಅವಕಾಶ ಮತ್ತೆ ಬಿಜೆಪಿಗೆ ಸಿಕ್ಕಿದೆ. ಈಗ ಹಿರಿಯ ಸದಸ್ಯರಿಗೆ ಅವಕಾಶ ಕೊಡುವ ಬದಲು ಹೊರಟ್ಟಿ ಅವರಿಗೆ ಅವಕಾಶ ಕೊಟ್ಟರೆ ಪಕ್ಷ ನಿಷ್ಠರಿಗೆ ಯಾವ ಸಂದೇಶ ಕೊಟ್ಟಂತಾಗಲಿದೆ ಎಂದು ಸಂಘದ ಪ್ರಮುಖರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷ ನಿಷ್ಠ ಸದಸ್ಯರ ಅಸಮಧಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕೇಶವಕೃಪಾಗೆ ಕರೆಸಿಕೊಂಡ ಸಂಘದ ಪ್ರಮುಖರು ಹಲವು ವಿಷಯಗಳ ಜೊತೆ ಸಭಾಪತಿ ಆಯ್ಕೆ ಕುರಿತೂ ಮಾತುಕತೆ ನಡೆಸಿದ್ದಾರೆ. ಸದಸ್ಯರ ಅಭಿಪ್ರಾಯ ಕುರಿತು ತಿಳಿಸಿದ್ದಾರೆ. ಇದಕ್ಕೆ ಸಿಎಂ ಹಾಗೂ ರಾಜ್ಯಾಧ್ಯಕ್ಷರು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ:ಸಂಪುಟ ವಿಸ್ತರಣೆ ವಿಳಂಬಕ್ಕೆ ಬಿಜೆಪಿಯಲ್ಲಿ ಬೇಗುದಿ: ಅಧಿವೇಶನಕ್ಕೆ ಆಕಾಂಕ್ಷಿತರು ಗೈರು, ಕಲಾಪದಲ್ಲಿ ನಿರಾಸಕ್ತಿ

ಬಹುಮತವಿಲ್ಲದ ಕಾರಣ ಪರಿಷತ್​ನಲ್ಲಿ ನಮ್ಮ ಪ್ರಮುಖ ಬಿಲ್​ಗಳಿಗೆ ಸಮಸ್ಯೆಯಾಗಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಪಾಸ್ ಮಾಡಿಸಿಕೊಳ್ಳಲು ಪ್ರಯಾಸ ಪಡಬೇಕಾಯಿತು. ಇದರ ಅನಿವಾರ್ಯತೆಗೆ ಸಿಲುಕಿದ್ದರಿಂದ ಗೆದ್ದೇ ಗೆಲ್ಲುವ ಖಚಿತತೆ ಇದ್ದ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನದ ಭರವಸೆ ನೀಡಿ ಪಕ್ಷಕ್ಕೆ ಕರೆತರಲಾಗಿದೆ. ಇದರಿಂದಾಗಿ ಇದೀಗ ನಮಗೆ ಬಹುಮತ ಬಂದಿದ್ದು, ವಿಧಾನಸಭೆಯಲ್ಲಿ ಅಂಗೀಕಾರಗೊಂಡು ವಿಧಾನ ಪರಿಷತ್ ಅಂಗೀಕಾರಕ್ಕೆ ಕಾದಿದ್ದ ಮತಾಂತರ ನಿಷೇಧ ಕಾಯ್ದೆಗೆ ಈಗ ಅಂಗೀಕಾರ ಸಿಕ್ಕಿದೆ. ಬಿಲ್​ಗಳಿಗೆ ಸರಳವಾಗಿ ಅಂಗೀಕಾರ ಪಡೆದುಕೊಳ್ಳಬಹುದಾಗಿದೆ ಎಂದು ಹೊರಟ್ಟಿಗೆ ಅವಕಾಶ ನೀಡಲು ನಿರ್ಧರಿಸಿದ್ದ ನಿಲುವನ್ನು ಸಮರ್ಥಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಸಿಎಂ ಹೇಳಿಕೆಗೆ ಕಟೀಲ್ ಹಾಗು ಕೋಟ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದರು. ಈ ಕುರಿತು ಸಾಕಷ್ಟು ಚರ್ಚೆ ನಂತರ ನಿರ್ಧಾರವನ್ನು ಪುನರ್ ಪರಾಮರ್ಶೆ ಮಾಡಿ ನಿರ್ಧಾರ ಕೈಗೊಳ್ಳಿ ಎಂದು ಸಂಘದ ಪ್ರಮುಖರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸೇರಿ ರಾಜ್ಯ ನಾಯಕರು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಸಭಾಪತಿ ಚುನಾವಣೆಗೆ ಮೂಡಿದ ಗೊಂದಲ: ಸದ್ಯ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿಯೇ ಸಭಾಪತಿ, ಉಪ ಸಭಾಪತಿ ಆಯ್ಕೆಗೆ ಸೆ.21ರಂದು ಚುನಾವಣೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಇದೀಗ ಸಂಘ ಪರಿವಾರದ ಪ್ರಮುಖರು ನಿರ್ಧಾರ ಮರು ಪರಾಮರ್ಶೆ ಮಾಡುವಂತೆ ಸೂಚಿಸಿರುವುದು ಗೊಂದಲ ಸೃಷ್ಟಿಸಿದೆ. ಹಾಗಾಗಿ ಈ ಅಧಿವೇಶನದಲ್ಲೇ ಚುನಾವಣೆ ನಡೆಸಬೇಕಾ ಅಥವಾ ಚಳಿಗಾಲದ ಅಧಿವೇಶನದಲ್ಲಿ ಚುನಾವಣೆಗೆ ಮುಂದೂಡಬೇಕಾ ಎನ್ನುವ ಗೊಂದಲಕ್ಕೆ ನಾಯಕರು ಸಿಲುಕಿದ್ದಾರೆ. ಈ ಕುರಿತು ಮತ್ತೊಮ್ಮೆ ಆಂತರಿಕ ಸಭೆ ನಡೆಸಿ ಹಿರಿಯ ನಾಯಕ ಯಡಿಯೂರಪ್ಪ ಅವರ ಸಲಹೆಯನ್ನೂ ಪಡೆದು ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಪೈಪೋಟಿಯಲ್ಲಿ ಯಾರು?:ಹಾಲಿ ಹಂಗಾಮಿ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಘುನಾಥ್ ರಾವ್ ಮಲ್ಕಾಪುರೆ, ಹಿರಿಯ ಸದಸ್ಯ ಆಯನೂರು ಮಂಜುನಾಥ್ ಸಭಾಪತಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಮಾಜಿ ಉಪ ಸಭಾಪತಿ ಪ್ರಾಣೇಶ್ ಸಭಾಪತಿ ಸ್ಥಾನಕ್ಕೆ ಕಣ್ಣಿಟ್ಟಿದ್ದರೂ ಉಪ ಸಭಾಪತಿ ಸ್ಥಾನ ಅವರಿಗೆ ಲಭ್ಯವಾಗುವ ಕಾರಣಕ್ಕೆ ಅವರು ಸಮಾಧಾನಿತರಾಗಿದ್ದಾರೆ. ಆದರೆ, ಮಲ್ಕಾಪುರೆ ಮತ್ತು ಆಯನೂರು ಸಭಾಪತಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಆದರೆ ಸಭಾಪತಿ‌ ಸ್ಥಾನ ಫಿಕ್ಸ್ ಎಂದುಕೊಂಡಿರುವ ಬಸವರಾಜ ಹೊರಟ್ಟಿ ಮಾತ್ರ ಬಿಜೆಪಿ ನಾಯಕರು ಮಾತಿಗೆ ತಪ್ಪಲ್ಲ ಎನ್ನುವ ಲೆಕ್ಕಾಚಾರದಲ್ಲಿ ಚುನಾವಣೆ ಘೋಷಣೆಯನ್ನೇ ಎದುರು ನೋಡುತ್ತಿದ್ದಾರೆ.

ಆದರೆ ಈ ಕುರಿತು ಮಾಹಿತಿ ನೀಡಲು ಬಿಜೆಪಿ ನಾಯಕರು ನಿರಾಕರಿಸಿದ್ದಾರೆ. ಕೆಲವೊಂದು ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಪಕ್ಷದ ವೇದಿಕೆಯಲ್ಲಿಯೇ ಈ ಬಗ್ಗೆ ಚರ್ಚೆ ನಡೆಯಲಿದೆ. ಯಾವಾಗಲೇ ಚುನಾವಣೆ ನಡೆದರೂ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದಷ್ಟೇ ತಿಳಿಸುವ ಮೂಲಕ ಸಭಾಪತಿ ಆಯ್ಕೆ ವಿಷಯದಲ್ಲಿ ಪಕ್ಷದಲ್ಲಿ ಗೊಂದಲ ಇರುವುದನ್ನು ಪಕ್ಷದ ನಾಯಕರೊಬ್ಬರು ಪರೋಕ್ಷವಾಗಿ ಒಪ್ಪಿಕೊಂಡರು.

ಇದನ್ನೂ ಓದಿ:ಲೋಕಾಯುಕ್ತ ಬಲವೃದ್ಧಿಸುವ ತಿದ್ದುಪಡಿ ಬಿಲ್: ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಅಸ್ತು

ABOUT THE AUTHOR

...view details