ETV Bharat / state

ಲೋಕಾಯುಕ್ತ ಬಲವೃದ್ಧಿಸುವ ತಿದ್ದುಪಡಿ ಬಿಲ್: ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಅಸ್ತು

author img

By

Published : Sep 14, 2022, 9:47 PM IST

state-cabinet-approves-karnataka-lokayukta-amendment-bill-2022
ಲೋಕಾಯುಕ್ತ ಬಲವೃದ್ಧಿಸುವ ತಿದ್ದುಪಡಿ ಬಿಲ್, ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಅಸ್ತು

ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಇರುವ ಹಿನ್ನೆಲೆ ಮತಾಂತರ ನಿಷೇಧ ಕಾಯ್ದೆ ಬಿಲ್ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು: ಲೋಕಾಯುಕ್ತ ಬಲ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ 2022ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಲೋಕಾಯುಕ್ತಕ್ಕೆ ಹೆಚ್ಚುವರಿ ರಿಜಿಸ್ಟ್ರಾರ್ ನೇಮಕ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜೊತೆಗೆ ಲೋಕಾಯುಕ್ತದಲ್ಲಿದ್ದ ಖಾಲಿ ಹುದ್ದೆ ಭರ್ತಿ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಅದೇ ರೀತಿ ವೇತನ ಭತ್ಯೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸರಿ ಸಮವಾಗಿ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ವಾರ ಸಭಾಪತಿ ಚುನಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಚುನಾವಣೆ ಅನುಮತಿ ಕೋರಿ ನಾಳೆ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂದಿನ ಬುಧವಾರ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಬಿಲ್ ಮಂಡಿಸಲು ಕೂಡ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಿಲ್ ಪರಿಷತ್​ನಲ್ಲಿ ಮಂಡನೆ ಆಗಿರಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲಾಗಿತ್ತು. ಈಗ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಇರುವ ಹಿನ್ನೆಲೆ ಮತ್ತೆ ಮಂಡನೆ ಮಾಡಲಿದೆ.

ಸಂಪುಟದ ಪ್ರಮುಖ ತೀರ್ಮಾನಗಳೇನು?:

  • ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೈಗೆತ್ತಿಕೊಂಡಿರುವ ಅಪೂರ್ಣಗೊಂಡಿರುವ ಉಗ್ರಾಣಗಳ ಮತ್ತು ಮೂಲ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೂ.662.37 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ
  • ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್, ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಕಟ್ಟಡಗಳಿಗೆ ಒಳಾಂಗಣ ವಿನ್ಯಾಸವನ್ನು ವಿಶ್ವವಿದ್ಯಾಲಯದಲ್ಲಿ 30 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ- 2022ಗೆ ಅನುಮೋದನೆ
  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ವಿಮಾದಾರರಿಗೆ 2015-16ರ ದ್ವಿ ವಾರ್ಷಿಕ ಅವಧಿಗೆ ಅಧಿಲಾಭಾಂಶ (Bonus) ಅನ್ನು ಘೋಷಿಸಲು ಒಪ್ಪಿಗೆ
  • ಹುಬ್ಬಳ್ಳಿ-ಬಳ್ಳಾರಿ ರೈಲ್ವೆ ಮಾರ್ಗದ ಹೊಸಪೇಟೆ - ಕಾರಿಗನೂರು ರೈಲ್ವೆ ನಿಲ್ದಾಣಗಳ ನಡುವಿನ ಕಿ.ಮೀ. 145/400-500ನಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ: 85ರ ಬದಲಿಗೆ ರಸ್ತೆ ಮೇಲ್ಸೇತುವೆ (Rob) ಹಾಗೂ ಕೂಡು ರಸ್ತೆಯ ನಿರ್ಮಾಣ ಕಾಮಗಾರಿಗಳನ್ನು 26.21 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • ಹುಬ್ಬಳ್ಳಿ - ಲೋಂಡಾ ರೈಲ್ವೆ ವಿಭಾಗದಲ್ಲಿನ ಧಾರವಾಡ - ಕ್ಯಾರಕೊಪ್ಪ ರೈಲ್ವೆ ನಿಲ್ದಾಣಗಳ ನಡುವಿನ ಕಿ.ಮೀ. 491/400-500ನಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್‌ ಗೇಟ್ ಸಂಖ್ಯೆ: 299ರ ಬದಲಿಗೆ ರಸ್ತೆ ಕೆಳಸೇತುವೆಯನ್ನು (RuB) 41.59 ಕೋಟಿ ರೂ.ಗಳಿಗೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಪ್ರವಾಸೋದ್ಯಮ ನೀತಿ 2020-25ರ ಕೆಲವು ತಿದ್ದುಪಡಿಗಳನ್ನು ಮಾಡಿ 2021ರ ಸೆಪ್ಟೆಂಬರ್​ 26ರಂದು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ
  • ಬೆಂಗಳೂರಿನ ಜೆ.ಪಿ. ನಗರ 2ನೇ ಹಂತದಲ್ಲಿರುವ ತಿರುಮಲ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಸಂಸ್ಥೆಗೆ ನೀಡಿರುವ 31,215 ಚ.ಅಡಿ ಮಹಾನಗರ ಪಾಲಿಕೆ ಜಾಗದ ಗುತ್ತಿಗೆ ಅವಧಿಯನ್ನು2001ರ ಏಪ್ರಿಲ್​ 1ರಿಂದ ಅನ್ವಯವಾಗುವಂತೆ 30 ವರ್ಷಗಳ ಅವಧಿಗೆ ನವೀಕರಿಸಲು ಒಪ್ಪಿಗೆ
  • ಹೆಚ್​ಡಿ ಕೋಟೆ ತಾಲೂಕಿನ ಮುಳ್ಳೂರು ಬಳಿ ನುಗು ನದಿಯಿಂದ 0.108 ಟಿಎಂಸಿ ನೀರನ್ನು ಎತ್ತಿ ನಂಜನಗೂಡು ಮತ್ತು ಹೆಚ್​ಡಿ ಕೋಟೆ ತಾಲೂಕಗಳಲ್ಲಿ ಇರುವ ಹೆಡಿಯಾಲ ಮತ್ತು ಇತರ 12 ಕೆರೆಗಳಿಗೆ ನೀರನ್ನು ತುಂಬಿಸುವ 30.50 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
  • ಹೇಮಾವತಿ ಎಡದಂಡೆ ನಾಲೆಯ 54ನೇ ವಿತರಣಾ ನಾಲೆ ಹಾಗೂ ಮೈನರ್‌ಗಳ ಅಧುನೀಕರಣ ಕಾಮಗಾರಿಯ 55 ಕೋಟಿ ರೂ.ಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಿಸುವ 129.89 ಕೋಟಿ ರೂ.ಗಳ ಕಾಮಗಾರಿ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) (ಎರಡನೇ ತಿದ್ದುಪಡಿ) ನಿಯಮಗಳು, 2022 ಅನುಮೋದನೆ
  • ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಬರುವ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಪಿ.ಕೆ.ಟಿ.ಬಿ., ಆಸ್ಪತ್ರೆ ಕಟ್ಟಡಗಳ 14 ನವೀಕರಣ ಕಾಮಗಾರಿಗಳನ್ನು 89 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ 250 ಕೋಟಿಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
  • ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ-ಮೂಡಹಡು ಮತ್ತು ಬಾರ್ಕೂರು-ಬೆಣ್ಣೆಕುದ್ರು, ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ 151 ಕೋಟಿ ರೂ. ಗಳ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

ಇದನ್ನೂ ಓದಿ: ಟೋಯಿಂಗ್​ಗೆ ಅನುಮತಿ ಕೊಡುವ ಸಂಬಂಧ ಆರು ವಾರಗಳಲ್ಲಿ ಪರಿಗಣಿಸಿ: ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.