ಕರ್ನಾಟಕ

karnataka

ಬೆಂಗಳೂರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ಬಲೆಗೆ ಕೆಡವಲು ಮುಂದುವರಿದ ಕಾರ್ಯಾಚರಣೆ

By ETV Bharat Karnataka Team

Published : Nov 1, 2023, 12:53 PM IST

Updated : Nov 1, 2023, 4:07 PM IST

Leopard attack on forest department staff: ಮತ್ತೆ ಚಿರತೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಿರುವ ಹಿನ್ನೆಲೆ ಸಾರ್ವಜನಿಕರು ಸ್ಥಳಕ್ಕೆ ಬಾರದಂತೆ ಬಂಡೆಪಾಳ್ಯ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ.

Leopard attack on forest department personnel
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ಮುಂದುವರಿದ ಚಿರತೆ ಸೆರೆ ಕಾರ್ಯಾಚರಣೆ

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ಮುಂದುವರಿದ ಚಿರತೆ ಸೆರೆ ಕಾರ್ಯಾಚರಣೆ

ಬೆಂಗಳೂರು: ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ನಡೆದಿದೆ. ಟಾಸ್ಕ್​ ಫೋರ್ಸ್​ ಸಿಬ್ಬಂದಿ ಧನರಾಜ್​ ಎಂಬುವರು ಗಾಯಗೊಂಡಿದ್ದಾರೆ. ಧನರಾಜ್​ ಅವರ ಕಾಲು, ಹೊಟ್ಟೆ ಭಾಗಕ್ಕೆ ಗಾಯವಾಗಿದ್ದು, ಅವರನ್ನು ತಕ್ಷಣವೇ ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕತ್ತಿನ ಭಾಗಕ್ಕೂ ಚಿರತೆ ಪರಚಿದೆ ಎಂದು ಹೇಳಲಾಗುತ್ತಿದೆ.

ಅರವಳಿಕೆ ನೀಡಲು ಬಂದಿದ್ದ ವೈದ್ಯರ ಮೇಲೂ ಚಿರತೆ ದಾಳಿ ಮಾಡಿದ್ದು, ಸದ್ಯ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಎರಡು ಬಾರಿ ಚಿರತೆಗೆ ಅರವಳಿಕೆ ಮದ್ದು ಫೈರ್​ ಮಾಡಿದ್ದು, ಎರಡು ಬಾರಿಯೂ ಮಿಸ್​ಫೈರ್​ ಆಗಿತ್ತು. ಮೂರನೇ ಬಾರಿ ಸರಿಯಾಗಿ ಫೈರ್​ ಆಗಿದ್ದು, ಚಿರತೆ ಪ್ರಜ್ಞೆ ತಪ್ಪಲು 20 ನಿಮಿಷ ಬೇಕಾಗಿದ್ದು, ಈ ಗ್ಯಾಪ್​ನಲ್ಲಿ ಚಿರತೆ ಸಿಬ್ಬಂದಿ ಕಣ್ಣಿನಿಂದ ತಪ್ಪಿಸಿಕೊಂಡಿದೆ. ಸದ್ಯ ಹಳೇ ಕಟ್ಟಡದ ಒಳಹೋಗಿ ಮತ್ತೆ ನಾಪತ್ತೆಯಾಗಿರುವ ಚಿರತೆಯ ಕಣ್ಣಾಮುಚ್ಚಾಲೆ ಆಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಮತ್ತೆ ಚಿರತೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಿರುವ ಹಿನ್ನೆಲೆ ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಬಂಡೆಪಾಳ್ಯ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.

ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿನ್ನೆ ರಾತ್ರಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಕಾಂಪೌಂಡ್​ ಜಿಗಿದು ಒಡಾಡುತ್ತಿದ್ದುದನ್ನು ಅಲ್ಲಿನ ನಿವಾಸಿಗಳು ನೋಡಿದ್ದಾರೆ. ಆತಂಕಗೊಂಡ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಾಂಪೌಂಡ್​ ಮೇಲೆ ಜಿಗಿದು ಓಡಾಡುತ್ತಿದ್ದ ಚಿರತೆ ಪಾಳು ಬಿದ್ದ ಕಟ್ಟಡದ ಒಳಗೆ ಹೋಗಿ ಮರೆಯಾಗಿತ್ತು.

ಬಳಿಕ ಪಾಳು ಕಟ್ಟಡದ ಒಳಗೆ ಓಡಿದ್ದ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿದ್ದು, ಕೂಡಲೇ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು. ಥರ್ಮಲ್ ಡ್ರೋಣ್​ ಕ್ಯಾಮರಾದಲ್ಲೂ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಇರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆ ಇಡೀ ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ನಂತರ ಇಂದು ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಗಿತ್ತು.

ಇದನ್ನೂ ಓದಿ:ಬೆಂಗಳೂರು: ಅರಣ್ಯ ಇಲಾಖೆಯ ಬೋನಿಗೆ ಬೀಳದ ಚಿರತೆ, ಮುಂದುವರೆದ ಕಾರ್ಯಾಚರಣೆ

Last Updated :Nov 1, 2023, 4:07 PM IST

ABOUT THE AUTHOR

...view details