ಕರ್ನಾಟಕ

karnataka

ಸಾಗುವಳಿ ಪತ್ರ ವಿತರಣೆಗೆ ತಿಂಗಳ ಗಡುವು: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

By

Published : Oct 19, 2022, 5:07 PM IST

ಬಗರ್ ಹುಕ್ಕುಂ ಸಮಿತಿ ಈಗಾಗಲೇ ಅರ್ಹರಿಗೆ ಭೂಮಿ ಮಂಜೂರಾತಿ ನೀಡಿದೆ. ಸ್ವಾಧೀನದಲ್ಲಿರುವವರಲ್ಲಿ ಶೋಷಿತ ಸಮುದಾಯದವರೇ ಹೆಚ್ಚು ಸಾಗುವಳಿದಾರರಾಗಿದ್ದಾರೆ. ತಿಂಗಳೊಳಗೆ ಸಾಗುವಳಿ ಪತ್ರ ವಿತರಣೆ ಮಾಡಿ ವರದಿ ಸಲ್ಲಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

Kota Srinivas Poojary meting whit Revenue Department Officers
ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು:ಬಗರ್ ಹುಕ್ಕುಂ ಸಮಿತಿ ಮಂಜೂರು ಮಾಡಿದ ಸಾಗುವಳಿದಾರರಿಗೆ ಮಂಜೂರಾತಿ ಪತ್ರವನ್ನು ತಿಂಗಳೊಳಗೆ ನೀಡುವಂತೆ ಹಾಗೂ ಸಾಗುವಳಿ ಪತ್ರ ನೀಡಿದ ಮಾಹಿತಿಯನ್ನು ವಾರದೊಳಗೆ ಇಲಾಖೆಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆನೇಕಲ್ ತಾಲೂಕು ತಹಸೀಲ್ದಾರ್ ಅವರಿಗೆ ಸೂಚಿಸಿದರು.

ವಿಧಾನಸೌಧದಲ್ಲಿ ಇಂದು ಬೆಂಗಳೂರು ನಗರ ಜಿಲ್ಲೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನೇಕಲ್ ತಾಲೂಕು ಬಗರ್ ಹುಕ್ಕುಂ ಸಮಿತಿ ಈಗಾಗಲೇ ಅರ್ಹರಿಗೆ ಭೂಮಿ ಮಂಜೂರಾತಿ ನೀಡಿದೆ. ಸ್ವಾಧೀನದಲ್ಲಿರುವವರಲ್ಲಿ ಶೋಷಿತ ಸಮುದಾಯದವರೇ ಹೆಚ್ಚು ಸಾಗುವಳಿದಾರರಾಗಿದ್ದಾರೆ. ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಮೇಲ್ವಿಚಾರಣಾ ಅಧಿಕಾರಿ ನೇಮಕ : ಆನೇಕಲ್ ತಾಲೂಕಿನಲ್ಲಿ ಒಟ್ಟು 694 ಅರ್ಜಿಗಳಲ್ಲಿ ಈವರೆಗೆ ಕೇವಲ 24 ಸಾಗುವಳಿ ಪತ್ರಗಳನ್ನು ಮಾತ್ರ ನೀಡಲಾಗಿದೆ. ಸಮಿತಿ ಮಂಜೂರು ಮಾಡಿರುವ ಎಲ್ಲ ಅರ್ಜಿಗಳ ಸಂಬಂಧ ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಂಬಂಧಿಸಿದ ಶುಲ್ಕ ಪಾವತಿಸಲಾಗಿದೆ. ತಹಸೀಲ್ದಾರ್ ಅವರು ಕೂಡಲೆ ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು. ಈ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ಮೇಲ್ಚಿಚಾರಣೆಗೆ ಇಲಾಖೆಯಿಂದ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ. ಇ. ವೆಂಕಟಯ್ಯ, ಇಲಾಖೆ ಆಯುಕ್ತ ಡಾ.ಕೆ.ರಾಕೇಶಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಬಿ. ಉದಯಕುಮಾರ್ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಶಿವಪ್ಪ ಲಮಾಣಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸದನದಲ್ಲಿ ಪ್ರಶ್ನೆ ಮಾಡಲಿ ಸೂಕ್ತ ಉತ್ತರ ನೀಡುತ್ತೇವೆ :ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಸೇ ಸಿಎಂ(SayCm) ಅಭಿಯಾನ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿವೇಶನ ನಡೆಯುತ್ತದೆ. ಅಲ್ಲಿ ಚರ್ಚೆ ಮಾಡುವ ವಸ್ತುವನ್ನು ಹಾದಿ ಬೀದಿಯಲ್ಲಿ ಕೇಳುವುದಲ್ಲ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇದರ ಬಗ್ಗೆ ಗೊತ್ತಿಲ್ಲವೇ?. ಬಜೆಟ್ ಬಗ್ಗೆ ಪ್ರಣಾಳಿಕೆ ಭರವಸೆಗಳ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಲಿ. ಅಲ್ಲಿ ಉತ್ತರ ಕೊಡುತ್ತೇವೆ, ಹೆಚ್ಚು ಕಾಲ ಸದನ ನಡೆಸಿದ್ದೇವೆ. ಸದನದಲ್ಲಿ ಪ್ರಶ್ನೆ ಮಾಡಲಿ ಸಮರ್ಥ ಉತ್ತರ ನೀಡುತ್ತೇವೆ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

ಪಡಿತರದಲ್ಲಿ ಕುಚಲಕ್ಕಿ : ಕುಚಲಕ್ಕಿ ಕೊಡುವ ಯೋಜನೆ ಈ ವರ್ಷದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ. ಬೇರೆ ಕಡೆ ಖರೀದಿಸಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅಕ್ಕಿ ಕೊಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಯೋಜನೆ ಜಾರಿಗೆ ಹೆಚ್ಚಿನ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

ABOUT THE AUTHOR

...view details