ಕರ್ನಾಟಕ

karnataka

ಸ್ಯಾಂಟ್ರೊ ರವಿ ಎಲ್ಲೇ ತಲೆಮರೆಸಿಕೊಂಡಿದ್ದರೂ ಶೀಘ್ರ ಬಂಧನ.. ಸಚಿವ ಆರಗ ಜ್ಞಾನೇಂದ್ರ

By

Published : Jan 10, 2023, 1:06 PM IST

ಸ್ಯಾಂಟ್ರೋ ರವಿ ಬಂಧನಕ್ಕೆ ಮುಂದುವರಿದ ಹುಡುಕಾಟ - ವಿಶೇಷ ತಂಡಗಳಿಂದ ರವಿಯ ಚಲನವಲನ‌ ವೀಕ್ಷಣೆ - ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ

Araga Jnanendra
ಆರಗ ಜ್ಞಾನೇಂದ್ರ

ಬೆಂಗಳೂರು:ಅತ್ಯಾಚಾರ ಮತ್ತು ಹೆಂಡ್ತಿ ಮೇಲೆ ನಡೆಸಿರುವ ಪ್ರಕರಣದ ಆರೋಪಿಸ್ಯಾಂಟ್ರೊ ರವಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಆದಷ್ಟು ಬೇಗ ಆತನನ್ನು ಬಂಧಿಸಲಾಗುವುದು. ಆತ ಎಲ್ಲಿಯೇ ತಲೆ ಮರೆಸಿಕೊಂಡಿದ್ದರೂ ನಮ್ಮ ಪೊಲೀಸರು ಬಂಧಿಸಿ ಕರೆತರಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿಶೇಷವಾದ ತಂಡಗಳನ್ನು ರಚನೆ ಮಾಡಿ ರವಿಯ ಚಲನವಲನ‌ ವೀಕ್ಷಣೆ ಮಾಡಲಾಗುತ್ತಿದೆ. ಆರೋಪಿ ಸ್ಯಾಂಟ್ರೊ ರವಿ ಹಿಂಬಾಲಕರನ್ನು ವಿಶೇಷ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಸ್ಯಾಂಟ್ರೊ ರವಿಗಾಗಿ ಹುಡುಕಾಟ ನಡೆಯುತ್ತಿದೆ. ಅವನು ಎಲ್ಲಿದ್ದರೂ ನಮ್ಮ ಪೊಲೀಸರು ಆತನನ್ನು ಹುಡುಕಿಕೊಂಡು ಬರುತ್ತಾರೆ. ಎಲ್ಲವನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದರು.

ಗೃಹ ಸಚಿವರ ಮನೆಯಲ್ಲಿ ಸ್ಯಾಂಟ್ರೊ ರವಿ ಸಿಗಬಹುದು ಎನ್ನುವ ಪ್ರತಿಪಕ್ಷಗಳ ಹೇಳಿಕೆಗೆ ಕೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮನೆಯಲ್ಲೂ ಸ್ಯಾಂಟ್ರೊ ರವಿ ಸಿಗಬಹುದಲ್ವಾ? ಎಂದು ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಿ ಈ ರೀತಿ ಅರೋಪ ಮಾಡುತ್ತಾರೆ. ಇಂತಹ ಹೇಳಿಕೆಯಿಂದ ಏನೂ ಪ್ರಯೋಜನ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ತಪಾತ ಸಹಿಸಲ್ಲ..ಸಾಗರದಲ್ಲಿ ಹಿಂದೂ ಸಂಘಟನೆಯ ಸದಸ್ಯನ ಮೇಲೆ ನಡೆದ ಹಲ್ಲೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು ಆರಗ ಜ್ಞಾನೇಂದ್ರ, ಸಾಗರದಲ್ಲಿ ಒಬ್ಬ ವ್ಯಕ್ತಿ ದ್ವಿಚಕ್ರ ವಾಹನದ ಮೇಲೆ ಹೋಗುವಾಗ ಮಚ್ಚು ಬೀಸಿದ್ದಾನೆ. ಯಾವ ಧರ್ಮದವರಾದರೂ ಆರೋಪಿಯನ್ನು ಬಂಧಿಸಲಾಗುತ್ತದೆ. ಪ್ರಕರಣದ ವಿಚಾರಣೆ ನಡೆಯುತ್ತದೆ. ರಕ್ತಪಾತ ಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಕಾಪಾಡಲು ಬೇಕಾದ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದರು‌.

ಸಿದ್ದರಾಮಯ್ಯಗೆ ಸ್ಥಿರವಾದ ನೆಲೆ ಇಲ್ಲ..ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಆದರೆ ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಸ್ಥಿರವಾದ ನೆಲೆ ಇಲ್ಲ. ಕ್ಷೇತ್ರ ಬದಲಾಯಿಸುವುದಕ್ಕೆ ಕಾರಣ ಏನು ಅಂತಾ ಅವರೇ ತಿಳಿಸಬೇಕು ಎಂದು ವ್ಯಂಗ್ಯವಾಡಿದರು. ಇದೇ ವೇಳೆ 'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಪ್ರಜಾಪ್ರಭುತ್ವದಲ್ಲಿ ಪುಸ್ತಕ ಬಿಡುಗಡೆ, ಪ್ರಕಟಣೆ ಮಾಡಲು ಅವಕಾಶವಿದೆ. ಹಿಂದೆಲ್ಲ ಪ್ರಕಟಣೆ ಆಗಿದೆ. ಭಯಕ್ಕಾಗಿ ಈ ರೀತಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.

3 ದಿನಗಳ ಕಾಲ ಗುಜರಾತ್ ಪ್ರವಾಸ..ರಾಜ್ಯದಲ್ಲಿ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಗುಜರಾತ್ ರಾಜ್ಯಕ್ಕೆ ತೆರಳುತ್ತಿದ್ದೇನೆ. ಸೈಬರ್​ಗೆ ಸಂಬಂಧಪಟ್ಟಂತೆ ತರಬೇತಿ ಅಲ್ಲಿ ನಡೆಯುತ್ತಿದೆ. ಅದರಲ್ಲಿ ಭಾಗಿಯಾದ ನಂತರ ಅಹಮದಾಬಾದ್ ನಗರಕ್ಕೆ ಭೇಟಿ ನೀಡಿ ಅಲ್ಲಿನ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಇತರೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದೇನೆ. ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು, ಎಂಓಯು ಮಾಡಿಕೊಳ್ಳುವ ಚಿಂತನೆ ಇದೆ. ಮೂರು ದಿನಗಳ ಈ ಪ್ರವಾಸದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯ್ ಪಾಟೀಲ್ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಲಿದ್ದು, ಗುರುವಾರ ರಾಜ್ಯಕ್ಕೆ ವಾಪಸ್​​ ಆಗಲಿದ್ದೇನೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

ABOUT THE AUTHOR

...view details