ETV Bharat / state

ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

author img

By

Published : Jan 10, 2023, 11:28 AM IST

Updated : Jan 10, 2023, 12:32 PM IST

Cm Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸ್ಯಾಂಟ್ರೊ ರವಿ ವಿಚಾರದಲ್ಲಿ ಸೂಕ್ತ ತನಿಖೆ ಮಾಡಲಾಗಿದೆ. ಆತನ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: 'ಸ್ಯಾಂಟ್ರೊ ರವಿಗೆ 20 ವರ್ಷದ ಇತಿಹಾಸವಿದೆ. ಕಾಂಗ್ರೆಸ್ ಕಾಲದಲ್ಲೇ ಆತ ಜೈಲಿನಿಂದ ಹೊರಬಂದಿದ್ದಾನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ನಿವಾಸದಲ್ಲಿ ಮಾತನಾಡಿದ ಅವರು, ಆತನ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದೆ. ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಾರ ಜತೆಗೆ ನಂಟು ಹೊಂದಿದ್ದ, ಹಿನ್ನೆಲೆ ಏನು ಎಂಬುವುದೆಲ್ಲಾ ಗೊತ್ತಿದೆ ಎಂದರು.

ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, ಸಂವಿಧಾನಬದ್ದವಾಗಿ ಮೀಸಲಾತಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಬಹಳ ಮುಖ್ಯ. ಹೀಗಾಗಿ ಅವರ ವರದಿಗಾಗಿ ಕಾಯುತ್ತಿದ್ದೇವೆ ಎಂದರು. ಮಹದಾಯಿ ವಿಚಾರವಾಗಿ ಅರಣ್ಯ ಇಲಾಖೆ ಸ್ಪಷ್ಟನೆ ಕೇಳೋದು ಸಾಮಾನ್ಯ. ಈ ಹಿಂದೆ ಸಾಕಷ್ಟು ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ವಿಚಾರ. ನಾನು ವ್ಯಾಖ್ಯಾನ ಮಾಡುವುದಿಲ್ಲ. ಎಲ್ಲೆಡೆ ನಿಲ್ಲಲು ಅವರು ಸರ್ವ ಸ್ವತಂತ್ರರು. ಆದರೆ ತೀರ್ಮಾನವನ್ನು ಕೋಲಾರದ ಜನತೆ ಮಾಡುತ್ತಾರೆ ಎಂದು ಸೂಚ್ಯವಾಗಿ ನುಡಿದರು.

ಪ್ರಧಾನಿ ಹುಬ್ಬಳ್ಳಿ ಭೇಟಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಇದಕ್ಕೆ ಮಹತ್ವ ನೀಡಲಾಗಿದ್ದು ಮಾನವ ಸಂಪನ್ಮೂಲವೇ ಬಹು ದೊಡ್ಡ ಕೊಡುಗೆ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಗೃಹ ಸಚಿವರ ಹೇಳಿಕೆ: ಸ್ಯಾಂಟ್ರೊ ರವಿಯನ್ನು ವಶಕ್ಕೆ ಪಡೆಯುವಂತೆ ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ. ಸ್ಯಾಂಟ್ರೊ ರವಿ ಬಗ್ಗೆ ಮೈಸೂರಿನ ಪೊಲೀಸ್​ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಆತನ ವಶಕ್ಕೆ ಪಡೆದು ಸಮಗ್ರ ತನಿಖೆ ಮಾಡಬೇಕೆಂದು ಪೊಲೀಸ್​ ಕಮಿಷನರ್​ಗೆ ಸೂಚಿಸಿದ್ದೇನೆ ಯಾರೆಲ್ಲ ಸ್ಯಾಂಟ್ರೊ ರವಿ ಮೇಲೆ ದೂರು ದಾಖಲಿಸಿದ್ದಾರೆ ಎಂದು ಸಮಗ್ರವಾಗಿ ತನಿಖೆ ನಡೆಸಬೇಕು. ಈ ಹಿಂದೆ ಒಂದು ಬಾರಿ ಆತನ ಮೇಲೆ ಗೂಂಡಾ ಕಾಯ್ಧೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಸ್ಯಾಂಟ್ರೊ ರವಿ ರಾಜಕಾರಣಿಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ನಿಜವಾದ್ರೆ ಕುಮಾರಸ್ವಾಮಿಯೊಂದಿಗೆ ಯಾವ ರೀತಿ ಸಂಬಂಧ ಇಟ್ಟುಕೊಂಡಿದ ಎಂದು ತಿಳಿದುಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮೊದಲು ಪ್ರತಿಕ್ರಿಯಿಸಿದ್ದರು.

ಯಾರು ಈ ಸ್ಯಾಂಟ್ರೊ ರವಿ?: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಯಾಂಟ್ರೊ ರವಿ ಹೆಚ್ಚು ಸುದ್ದಿಯಾಗಿದ್ದು, ಇವರ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್‌ವೊಬ್ಬರ ಮಗನಾದ ಇವರ ಮೂಲ ಹೆಸರು ಮಂಜುನಾಥ್. ಮಂಡ್ಯದ ಪೊಲೀಸರು ಪ್ರಕರಣವೊಂದರಲ್ಲಿ ಮಂಜುನಾಥ್‌ನನ್ನು 2000ನೇ ವರ್ಷದಲ್ಲಿ ಬಂಧಿಸಿದ್ದರು. ಸ್ಯಾಂಟ್ರೊ ಕಾರು ಬಳಸಿ ರವಿ ಹೆಸರಿನಲ್ಲಿ ಅಪರಾಧ ಕೃತ್ಯ ಎಸಗಿರುವ ಆರೋಪದಿಂದಾಗಿ ಸ್ಯಾಂಟ್ರೊ ರವಿ ಅಂತ ಹೆಸರು ಬಂದಿದೆ.

ಇದನ್ನೂ ಓದಿ: ಸ್ಯಾಂಟ್ರೊ ರವಿ ಜೊತೆ ನಾನು ಚಾಟಿಂಗ್ ಮಾಡಿದ್ದೇನೆ ಎಂಬುದು ಸುಳ್ಳು: ರಾಜಕಾರಣಿಗಳ ಜತೆಗಿನ ನಂಟು ಅಲ್ಲಗಳೆದ ಸಿಎಂ

Last Updated :Jan 10, 2023, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.