ETV Bharat / state

ಸ್ಯಾಂಟ್ರೊ ರವಿ ಜೊತೆ ನಾನು ಚಾಟಿಂಗ್ ಮಾಡಿದ್ದೇನೆ ಎಂಬುದು ಸುಳ್ಳು: ರಾಜಕಾರಣಿಗಳ ಜತೆಗಿನ ನಂಟು ಅಲ್ಲಗಳೆದ ಸಿಎಂ

author img

By

Published : Jan 7, 2023, 2:25 PM IST

ರಾಜಕಾರಣಿಗಳ ಜತೆಗೆ ಸ್ಯಾಂಟ್ರೋ ರವಿ ಸಂಬಂಧ - ಅಲ್ಲಗಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಸ್ಯಾಂಟ್ರೊ ರವಿ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನನಗೇನು ಗೊತ್ತು? ಎಂದು ಪ್ರಶ್ನಿಸಿದ ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ಸ್ಯಾಂಟ್ರೊ ರವಿ ಜೊತೆ ನಾನು ಚಾಟಿಂಗ್ ಮಾಡಿದ್ದೇನೆ ಎಂಬುದು ಸುಳ್ಳು. ಇದೆಲ್ಲವನ್ನು ಅವನೇ ಸೃಷ್ಟಿಸಿದ್ದಾನೆ. ಇವತ್ತಿನ ಟೆಕ್ನಾಲಜಿಯಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಹೊಂದಿದ್ದಾನೆ ಎನ್ನಲಾದ ನಂಟನ್ನು ಅಲ್ಲಗಳೆದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಸಂದರ್ಭದಲ್ಲಿ ಕೆಲವರನ್ನು ಭೇಟಿ ಮಾಡಿರುತ್ತೇವೆ. ಅದೇ ಫೋಟೋಗಳನ್ನ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರಬಹುದು. ಈಗ ಆತನ ‌ವಿರುದ್ಧ ಸಮಗ್ರವಾಗಿ ತನಿಖೆ ಮಾಡುತ್ತಿದ್ದೇವೆ. ಅವನ ಎಲ್ಲ ಚಟುವಟಿಕೆಗಳ ಬಗ್ಗೆಯೂ ತನಿಖೆಯಿಂದ ಹೊರಬರಲಿದೆ ಎಂದರು.

ಕರಾರುವಕ್ಕಾಗಿ ತನಿಖೆ ಮಾಡುವಂತೆ ಮೈಸೂರು ಪೊಲೀಸರಿಗೂ ಈ ಬಗ್ಗೆ ಸೂಚನೆ ನೀಡಿದ್ದೇವೆ. 20 ವರ್ಷಗಳ ಅವಧಿಯಲ್ಲಿ ಆತ ಯಾವುದೇ ಕೇಸ್​ನಲ್ಲಿಯೂ ಫಿಟ್ ಆಗಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಈ ಹಿಂದಿನ ಎಲ್ಲ ಪ್ರಕರಣಗಳನ್ನ ಬಗ್ಗೆಯೂ ಸಮಗ್ರವಾಗಿ ತನಿಖೆ ಮಾಡಲು ತಿಳಿಸಿರುವೆ. ಈ ಎಲ್ಲ ತನಿಖೆಗಳು ಸಮಗ್ರವಾಗಿ ನಡೆದಾಗ ಅದರ ನಿಜ ಬಣ್ಣ ಬಯಲಾಗಲಿದೆ. ಇದರಲ್ಲಿ ಯಾರನ್ನೂ ಸಹ ಬಚಾವ್ ಮಾಡುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಸೇರಿದಂತೆ ಯಾರ್ಯಾರು ಏನೇನು ಸಾಕ್ಷಿಗಳನ್ನು ಕೊಡುತ್ತಾರೋ ಅದರ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಕ್ರಿಯೇಟ್ ಮಾಡಿರಬಹುದು: ಈಗಿರುವ ಮೊಬೈಲ್ ಮತ್ತು ತಂತ್ರಜ್ಞಾನ ಬಳಸಿಕೊಂಡು ವಾಟ್ಸಪ್​​ ಸೇರಿದಂತೆ ಜಾಲತಾಣದಲ್ಲಿ ಏನು ಬೇಕಾದರೂ ಕ್ರಿಯೇಟ್ ಮಾಡಬಹುದು. ನಾನು ನಿತ್ಯ ಹಲವರೊಂದಿಗೆ ಮಾತನಾಡುತ್ತೇನೆ. ಅವರ ಹಿನ್ನೆಲೆ ಹುಡುಕಲು ಆಗವುದಿಲ್ಲ ಎಂದರು. ಆರಂಭದಲ್ಲಿ ಸ್ಯಾಂಟ್ರೊ ರವಿ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನನಗೇನು ಗೊತ್ತು? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಆ ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಕೋಪದಲ್ಲೇ ಉತ್ತರಿಸಿದರು.

ವಿಧಾನಸೌಧದಲ್ಲಿ ಹಣ ಸಿಕ್ಕ ಬಗ್ಗೆ ಪ್ರತಿಕ್ರಿಯೆ: ವಿಧಾನಸೌಧವನ್ನ ಆಡಳಿತಾರೂಢ ಪಕ್ಷ ಶಾಪಿಂಗ್ ಮಾಲ್ ಮಾಡಿಕೊಂಡಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ, ಈ ಹಿಂದೆ ವಿಧಾನಸೌಧವು ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ‌ ಬ್ಯಾಂಕ್ ಆಗಿತ್ತು.

ಇದೇ ವಿಧಾನಸೌಧದಲ್ಲಿ ಅಂದಿನ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 22 ಲಕ್ಷ ಹಣ ಸಿಕ್ಕಿತ್ತು. ಕಾಂಗ್ರೆಸ್ ಸರ್ಕಾರ ಅಂದು ಈ ಪ್ರಕರಣದ ತನಿಖೆ ಮಾಡಲಿಲ್ಲ. ಇದರ ತನಿಖೆಯನ್ನು ಎಸಿಬಿಗೆ ಕೊಟ್ಟು ಇಡೀ ಪ್ರಕರಣವನ್ನ ಮುಚ್ಚಿ ಹಾಕಿದರು. ಆದರೆ, ನಾವು ಈಗ ಸಿಕ್ಕಿರುವ ಹಣದ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದರು.

ಕರ್ನಾಟಕದ ಟ್ಯಾಬ್ಲೊಗೆ ಅವಕಾಶ: ದೆಹಲಿಯ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವಕಾಶವನ್ನು ಕಲ್ಪಿಸಲಾಗುವುದು. ಪ್ರತಿ ವರ್ಷದಂತೆ ಈ ಬಾರಿಯೂ ಮೆರವಣಿಗೆಯಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಇರಲಿದೆ ಎಂದು ಸ್ಪಷ್ಟಪಡಿಸಿದರು.

'ನೋಡಿ ಫೋಟೋಗಳ ಆಧಾರ ಮೇಲೆ ತೀರ್ಮಾಣ ಮಾಡಲು ಆಗಲ್ಲ. ಆತನ ಫೋಟೋ ಎಲ್ಲರ ಜೊತೆಗೂ ಇದೆ. ಈಗಾಗಲೇ ಮಹಿಳೆಯೊಬ್ಬಳು ಆತನ ವಿರುದ್ಧ ದೂರು ನೀಡಿದ್ದಾರೆ. ಹಾಗಾಗಿ ನಾನು ಸಂಬಂಧಪಟ್ಟ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಇದೊಂದೇ ಕೇಸ್​ ಅಲ್ಲ. ಹಿಂದಿನ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಹೇಳಲಾರದೆ'. ಬಸವರಾಜ ಬೊಮ್ಮಾಯಿ - ಮುಖ್ಯಮಂತ್ರಿ

ಇದನ್ನೂ ಓದಿ: ಮೀಸಲಾತಿ ವಿಚಾರ: ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ಬೊಮ್ಮಾಯಿ ದೃಢ‌ ಹೆಜ್ಜೆ ಇಡುತ್ತಿದ್ದಾರೆ: ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.