ಕರ್ನಾಟಕ

karnataka

40% ಕಮಿಷನ್ ಆರೋಪ ಮಾಡ್ತಿದ್ದ ಕೆಂಪಣ್ಣ ಯಾವ ಮೂಲೆಯಲ್ಲಿದ್ದಾರೆ?: ಗೋವಿಂದ ಕಾರಜೋಳ

By

Published : Aug 4, 2023, 10:28 PM IST

ಇಂದಿನ ಸರ್ಕಾರ ಗುತ್ತಿಗೆದಾರರಿಗೆ ಬಿಲ್​ ಕೊಡದೆ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಮಾಜಿ ಸಚಿವ ಗೋವಿಂದ ಕಾರಜೋಳ ಹರಿಹಾಯ್ದರು.

ಮಾಜಿ ಸಚಿವ ಗೋವಿಂದ ಕಾರಜೋಳ
ಮಾಜಿ ಸಚಿವ ಗೋವಿಂದ ಕಾರಜೋಳ

ಮಾಜಿ ಸಚಿವ ಗೋವಿಂದ ಕಾರಜೋಳ ಗರಂ

ಬಾಗಲಕೋಟೆ : "ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಯಾವ ಮೂಲೆಯಲ್ಲಿ ಇದ್ದಾರೆ? ಕೆಂಪಣ್ಣನನ್ನು ಬ್ಯಾಟರಿ ಹಿಡಿದು ಹುಡಕಬೇಕಿದೆ" ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತ‌ಪಡಿಸಿದ್ದಾರೆ.

ಬಾಗಲಕೋಟೆ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದ್ದು, ಒಂದು ಅಭಿವೃದ್ದಿ ಕಾಮಗಾರಿಯೂ ಶುರುವಾಗಿಲ್ಲ. ದಯವಿಟ್ಟು ಅಭಿವೃದ್ದಿ ಕೆಲಸ ನಿಲ್ಲಿಸಬೇಡಿ. ನಿಮ್ಮ ಸರ್ಕಾರ ಆರ್ಥಿಕ‌ ದಿವಾಳಿ ಆಗಿದ್ದರೆ, ಹೊಸ ಅಭಿವೃದ್ದಿ ಕೆಲಸಗಳನ್ನು ಮಾಡಲು ನಿಮಗೆ ಶಕ್ತಿ ಇಲ್ಲದಿದ್ದರೆ, ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಬಂದ್​ ಮಾಡಿ ಕಮಿಷನ್​ ಕೇಳಬೇಡಿ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ನೀವೇ ನಮ್ಮ ಸರ್ಕಾರದ ಮೇಲೆ ಆಧಾರ ಇಲ್ಲದೇ ಸುಳ್ಳು ಆರೋಪ ಮಾಡಿದ್ದೀರಿ. ಇವತ್ತು ಏನಾಗಿದೆ? ಗುತ್ತಿಗೆದಾರರಿಗೆ ಒಂದು ರೂ. ಬಿಲ್ ಕೊಟ್ಟಿಲ್ಲ. ಕೆಂಪಣ್ಣ ಈಗ ಎಲ್ಲಿದ್ದಾನೆ.? ಬ್ಯಾಟರಿ ಹಿಡಿದು ಹುಡುಕಬೇಕು. ಸಿದ್ದರಾಮಯ್ಯನ ಮನೆ ಮೂಲ್ಯಾಗ ಅದಾನೋ.? ಡಿ.ಕೆ.ಶಿವಕುಮಾರ್​ ಮನೆ ಮೂಲ್ಯಾಗ ಇದ್ದಾನೋ.? ಅವರ ಮನೆಯಲ್ಲಿ ಕುಳಿತು ಅರ್ಜಿ ಬರೆದು 40% ಕಮಿಷನ್ ಆರೋಪ ಮಾಡಿದ್ದನಲ್ಲ. ಇವತ್ತಿಗೂ ಒಂದೇ ಒಂದು ಆರೋಪ ಸಾಬೀತು ಮಾಡಲು ಆಗಿಲ್ಲ. ಗುತ್ತಿಗೆದಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ. 6% ವರ್ಗಾವಣೆ ಎಂದು 54% ವರ್ಗಾವಣೆ ಮಾಡುತ್ತಿದ್ದಾರೆ ಎಂದು ಕಾರಜೋಳ ಕಿಡಿಕಾರಿದರು.

ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡುವ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಆಗಲೂ ಶಾಸಕರು ಅವಿಶ್ವಾಸದಿಂದ ಹೊರಬಂದರು. ಹಾಲು ಕುಡಿದು ಸಾಯೋರಿಗೆ ವಿಷ ಕೊಟ್ಟು ಸಾಯಿಸೋದು ಬೇಕಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟರು. ಒಳಮೀಸಲಾತಿಯಿಂದ ಬಿಜೆಪಿ ಪಕ್ಷ ಸೋತಿರುವ ಬಗೆಗಿನ ಆರೋಪದ ಬಗ್ಗೆ, ಅದು ಅವರ ಭ್ರಮೆ. ತಪ್ಪು ‌ಲೆಕ್ಕಾಚಾರದಿಂದ ನಾವು ಸೋತಿದ್ದೇವೆ. 72 ಹೊಸ ಮುಖಗಳನ್ನು ಜನ ಒಪ್ಪಲಿಲ್ಲ.
ಸರ್ಕಾರದ ಮೇಲಿನ ಆರೋಪಗಳಿಗೆ ಅಭಿಯಾನದ ರೂಪದಲ್ಲಿ ಉತ್ತರ ಕೊಡಬೇಕಿತ್ತು. ಆದರೆ ನಮ್ಮ ಪಕ್ಷದಿಂದ ಆಗಲಿಲ್ಲ ಎಂದರು.

ನಾರಾಯಾಸ್ವಾಮಿ ಅವರು ಸದ್ಯ ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಸಂವಿಧಾನದ ಪರಿಚ್ವೇದ 341ಕ್ಕೆ ತಿದ್ದುಪಡಿ ತಂದು ಜಾರಿ ಮಾಡಬಹುದು. ನಾವು ಅದಕ್ಕಾಗಿಯೇ ಶಿಫಾರಸು ‌ಮಾಡಿದ್ದೇವೆ. ಒಳಮೀಸಲಾತಿ ಎಂಬುದು ಅನ್ಯಾಯದ ಕೆಲಸ ಅಲ್ಲ. ಅದಕ್ಕೆ ಬಿಜೆಪಿ ಮತ್ತು ಆರ್​ಎಸ್​ಎಸ್ ಬದ್ಧ ಎಂದು ತಿಳಿಸಿದರು.

ಲೋಕಸಭೆಗೆ ಸ್ಪರ್ಧೆ ವಿಚಾರ : ನಾನು ಯಾವ ಚುನಾವಣೆಗೂ ಆಕಾಂಕ್ಷಿಯಲ್ಲ. ಬಾಗಲಕೋಟೆ, ವಿಜಯಪುರಕ್ಕೆ ಸಂಸದರು ಇದ್ದಾರೆ. ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಮಹದಾಯಿ ಹುಲಿ ಸಂರಕ್ಷಿತ ಪ್ರದೇಶ ಎಂದು ಗೋವಾದಿಂದ ಘೋಷಣೆ ವಿಚಾರವಾಗಿ ಮಾತನಾಡಿ, ಕಳಸಾ ಹಾಗೂ ಬಂಡೂರಿ ಯೋಜನೆಗೆ ಪ್ರತ್ಯೇಕಿಸಿ ಟೆಂಡರ್ ಆಗಿದೆ. ಎಲ್ಲೆಲ್ಲಿ ಕೆಲಸ ಶುರು ಮಾಡಲು ಅವಕಾಶವಿದೆಯೇ ಅಲ್ಲಿ ನಾವು ಕೆಲಸ ಮಾಡಬೇಕು. ಕಳಸಾ ಬಂಡೂರಿ ನೀರಾವರಿ ಯೋಜನೆಯಲ್ಲ, ಅದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಕಳಸ ಬಂಡೂರಿಗೆ ಇಂದಿನ ರಾಜ್ಯ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ನಾನು ನೀರಾವರಿ ಮಂತ್ರಿ‌ ಇದ್ದಾಗ ಬಾಗಲಕೋಟೆ-ವಿಜಯಪುರಕ್ಕೆ 10 ಸಾವಿರ ಕೋಟಿ ಕೊಟ್ಟಿರುವ ಹೆಮ್ಮೆ ನನಗಿದೆ‌. 50 ಸಾವಿರ ಕೋಟಿ ರೂ. ಕೃಷ್ಣ ಯೋಜನೆಗೆ ಕೊಡ್ತೀನಿ ಎಂದು ಇದೇ‌ ಸಿದ್ದರಾಮಯ್ಯ ಕೂಡಲಸಂಗಮದಲ್ಲಿ ಆಣೆ ಮಾಡಿ ಕೊಟ್ಟರಾ ಎಂದು ಪ್ರಶ್ನೆ ಮಾಡಿದ ಕಾರಜೋಳ, ಹಿಂದಿನ ಅವಧಿಯಲ್ಲಿ ಅಧಿಕಾರ ಬಿಡೋವಾಗ 1 ಲಕ್ಷ ಕೋಟಿ ಹೊರೆ ಹೊರಿಸಿ ಹೋದರು, ಆಗ ಕಮಿಷನ್ ಹೊಡೆದವರು ಯಾರು? ನಾನು ಬಾಗಲಕೋಟೆ ಜನರ ತ್ಯಾಗಕ್ಕಾಗಿ ಕೆಲಸ ಮಾಡಿದೆ‌. ಯಾರೂ ಕೇಳಿದರೂ ಉತ್ತರಿಸೋ ತಾಕತ್ತು ನನಗಿದೆ ಎತ್ತರ ಎಂದು ಸವಾಲ್ ಹಾಕಿದರು.

ಇದನ್ನೂ ಓದಿ :ಸರ್ಕಾರಿ ಭೂಮಿ ಒತ್ತುವರಿ ತೆರವು, ಆಗಸ್ಟ್​ 7ರಂದು ಉನ್ನತ ಮಟ್ಟದ ಸಭೆ: ಸಚಿವ ಕೃಷ್ಣ ಬೈರೇಗೌಡ

ABOUT THE AUTHOR

...view details