ಕರ್ನಾಟಕ

karnataka

ವಿಶ್ವಕಪ್​ನಲ್ಲಿ ಜಡೇಜಾ ಅಲಭ್ಯತೆ ಭಾರತಕ್ಕೆ ನಷ್ಟ ತರಲಿದೆ: ಶ್ರೀಲಂಕಾ ಕ್ರಿಕೆಟರ್​ ಭವಿಷ್ಯ

By

Published : Sep 17, 2022, 6:07 PM IST

ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯದ ಆಲ್​ರೌಂಡರ್​ ರವೀಂದ್ರ ಜಡೇಜಾ ಅಲಭ್ಯತೆ ಭಾರತವನ್ನು ಕಾಡಲಿದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಹೇಳಿದ್ದಾರೆ.

mahela-jayawarden
ಶ್ರೀಲಂಕಾ ಕ್ರಿಕೆಟರ್​ ಭವಿಷ್ಯ

ದುಬೈ:ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್​ನಿಂದ ಹೊರಬಿದ್ದಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಅವರ ಅಲಭ್ಯತೆ ತಂಡದ ಸಮತೋಲನ ಕೆಡಿಸಲಿದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಭವಿಷ್ಯ ನುಡಿದಿದ್ದಾರೆ.

ಕಾಂಗರೂ ನಾಡಿನಲ್ಲಿ ಮುಂದಿನ ತಿಂಗಳಿನಿಂದ ಟಿ20 ವಿಶ್ವಕಪ್​ ನಡೆಯಲಿದೆ. ಯಎಇನಲ್ಲಿ ನಡೆದ ಏಷ್ಯಾ ಕಪ್​ ವೇಳೆ ಜಡೇಜಾ ಗಾಯ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಜಡೇಜಾ ಚೇತರಿಕೆಗೆ ಸಮಯ ಬೇಕಿರುವ ಕಾರಣ ಅವರನ್ನು ಭಾರತ ವಿಶ್ವಕಪ್​ ತಂಡದಲ್ಲಿ ಪರಿಗಣಿಸಲಾಗಿಲ್ಲ. ಇದು ತಂಡಕ್ಕೆ ಹೊರೆಯಾಗುವ ಸಾಧ್ಯತೆ ಇದೆ ಎಂದು ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ರಿವ್ಯೂಗೆ ನೀಡಿದ ಸಂದರ್ಶನದಲ್ಲಿ ಭಾರತ ತಂಡದ ಬಗ್ಗೆ ಮಾತನಾಡಿದ ಮುಂಬೈ ಇಂಡಿಯನ್ಸ್​ ತಂಡದ ಜಾಗತಿಕ ಕೋಚ್​ ಆಗಿರುವ ಜಯವರ್ಧನೆ, ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯು ಭಾರತಕ್ಕೆ ನಷ್ಟ ತರಲಿದೆ. ಜಡೇಜಾ 5ನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದರು. ಬೌಲರ್​ ಆಗಿಯೂ ಯಶಸ್ವಿಯಾಗಿದ್ದಾರೆ. ಇದು ತಂಡದ ಸಮತೋಲನ ಕಾಪಾಡಿತ್ತು. ಆದರೆ, ಅವರ ಅಲಭ್ಯತೆ ತಂಡಕ್ಕೆ ಅಲ್ಪ ಹಿನ್ನಡೆ ಉಂಟು ಮಾಡಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಮತ್ತೊಬ್ಬ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅಗ್ರ ಆಲ್​ರೌಂಡರ್​, ಫಿನಿಷರ್​ ಆಗಿದ್ದಾರೆ. ಹಾರ್ದಿಕ್​- ಜಡೇಜಾ ಇದ್ದರೆ ತಂಡದ ಬ್ಯಾಟಿಂಗ್​, ಬೌಲಿಂಗ್​ ಸದೃಢವಾಗಿರುತ್ತಿತ್ತು. ಜಡ್ಡು ಗಾಯಗೊಂಡಿರುವುದು ಕಠಿಣ ಪರಿಸ್ಥಿತಿ ತಂದೊಡ್ಡಲಿದೆ. ಜಡ್ಡು ಜಾಗದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್​ರನ್ನು 5ನೇ ಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಏನೇ ಆದರೂ ಜಡೇಜಾ ಅಲಭ್ಯತೆ ತಂಡವನ್ನು ಕಾಡುವುದು ನಿಜ. ಅವರ ಆಟ ಇಲ್ಲದೇ ಇರುವುದು ಭಾರತಕ್ಕೆ ದೊಡ್ಡ ನಷ್ಟ ತರಲಿದೆ ಎಂದರು.

ಕೊಹ್ಲಿ ಬೂಮ್ರಾ ತಂಡದ ಶಕ್ತಿ:3 ವರ್ಷಗಳ ಬಳಿಕ ಶತಕ ಬಾರಿಸಿ ಹಳೆ ಖದರ್​ ಮೆರೆದ ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ ಮತ್ತು ಡೆತ್​ ಓವರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ ತಂಡಕ್ಕೆ ಸೇರಿರುವುದು ತಂಡದ ಪ್ಲಸ್​ ಪಾಯಿಂಟ್​ ಆಗಲಿದೆ ಎಂದು ಮಹೇಲಾ ಜಯವರ್ಧನೆ ಇದೇ ವೇಳೆ ಹೇಳಿದ್ದಾರೆ.

ಏಷ್ಯಾಕಪ್‌ನಲ್ಲಿ ಸಿಡಿದ ವಿರಾಟ್​ ಕೊಹ್ಲಿ ಆಟ ನಿಜಕ್ಕೂ ರಂಜನೀಯ. 1020 ದಿನಗಳ ಬಳಿಕ ಸ್ಟಾರ್ ಬ್ಯಾಟರ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಶಕ್ತಿ ತುಂಬಲಿದೆ. ಕೊಹ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಸಂತೋಷ. ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್‌ ಕಳೆಕಟ್ಟಲಿದೆ. ಹಾಗಾಗಿ ಎಲ್ಲ ಆಟಗಾರರು ಫಾರ್ಮ್‌ಗೆ ಬರಬೇಕು. ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್ ಆಕರ್ಷಕವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಹ್ಲಿ ಆಡುವ ರೀತಿ, ಕೌಶಲ್ಯ, ಪ್ರತಿಭೆ ಎಲ್ಲವೂ ಪ್ರಶಂಸನೀಯ. ಬ್ಯಾಟ್ ಬೀಸಲು ಮೈದಾನದಲ್ಲಿ ಅವರಿಗೆ ಸ್ವಲ್ಪ ಆತ್ಮವಿಶ್ವಾಸ ಬೇಕಿದೆ. ಅದು ಸುಧಾರಿಸಿದಲ್ಲಿ ಮತ್ತೆ ನಾವು ಹಳೆಯ ವಿರಾಟ್​ ರೂಪದ ವಿರಾಟ್​ ಅವರನ್ನು ಕಾಣಬಹುದು.

ಬೌಲಿಂಗ್​ ವಿಭಾಗ ಸುಧಾರಿಸಬೇಕು:ಭಾರತ ತಂಡ ಸಮತೋಲನವಾಗಿದ್ದರೂ ಬೌಲಿಂಗ್ ವಿಭಾಗ ಸ್ವಲ್ಪ ಸುಧಾರಿಸಬೇಕಿದೆ. ಬೌಲರ್‌ಗಳು ಅಗತ್ಯ ಸಮಯದಲ್ಲಿ ವಿಕೆಟ್‌ ಪಡೆಯುವುದನ್ನು ರೂಢಿಸಿಕೊಳ್ಳಬೇಕು. ಅವರ ಕೌಶಲ್ಯಗಳನ್ನು ಪ್ರದರ್ಶಿಸಿ ತಂಡಕ್ಕೆ ನೆರವಾಗಬೇಕಿದೆ ಎಂದು ಸಲಹೆ ಮಾಡಿದರು.

ಓದಿ:ಯುಎಇ ಟಿ20 ಲೀಗ್​: ಎಂಐ ಎಮಿರೇಟ್ಸ್​ಗೆ ಶೇನ್​ ಬಾಂಡ್​ ಪ್ರಧಾನ ಕೋಚ್​

ABOUT THE AUTHOR

...view details