ಕರ್ನಾಟಕ

karnataka

ತಮ್ಮ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ಕೋರಿ ಸುರ್ಜೇವಾಲ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

By ETV Bharat Karnataka Team

Published : Nov 17, 2023, 10:46 PM IST

Updated : Nov 17, 2023, 10:56 PM IST

ರಣದೀಪ್​ ಸಿಂಗ್​ ಸುರ್ಜೇವಾಲ ವಿರುದ್ದ ದಾಖಲಾಗಿರುವ ಪ್ರಕರಣದ ವಿಚಾರಣೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ.

ಸುರ್ಜೇವಾಲ ಸಲ್ಲಿಸಿದ್ದ ಅರ್ಜಿ ತಿರಸ್ಕಾರ
ಸುರ್ಜೇವಾಲ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

ಪ್ರಯಾಗರಾಜ್: ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ತಮ್ಮ ವಿರುದ್ಧ ದಾಖಲಾದ ಹಳೆಯ ಪ್ರಕರಣದ ವಿಚಾರಣೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. 23 ವರ್ಷಗಳ ಹಿಂದೆ ತಮ್ಮ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿ ಸುರ್ಜೇವಾಲ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ ವಾರಾಣಸಿ ಸೆಷನ್​ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರಂಟ್‌ಗೆ ತಡೆ ನೀಡುವಂತೆಯೂ ಸುರ್ಜೇವಾಲಾ ಅರ್ಜಿಯಲ್ಲಿ ಕೋರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜವೀರ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿತು.

ಪ್ರಕರಣದ ಹಿನ್ನೆಲೆ:ವಾರಾಣಸಿಯ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ 23 ವರ್ಷಗಳ ಹಿಂದೆ ಸುರ್ಜೆವಾಲಾ ಅವರ ವಿರುದ್ಧ ಐಪಿಸಿ ಸೆಕ್ಷನ್ 147, 332, 353, 336, 333 ಮತ್ತು 427 ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2000ದಲ್ಲಿ ನಡೆದ ಸಂವಾಸಿನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಮಾಡುತ್ತಿದ್ದ ವೇಳೆ ಹಿಂಸಾತ್ಮಕ ಘಟನೆ ನಡೆದಿತ್ತು. ಇದರಲ್ಲಿ ಅಂದಿನ ಯೂತ್​ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸುರ್ಜೆವಾಲಾ ಕೂಡ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೇ ಇವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದೀಗ ಈ ಪ್ರಕರಣದ ವಿಚಾರಣೆ ಆರಂಭವಾಗಿದೆ. ಇದನ್ನು ಪ್ರಶ್ನಿಸಿ ಸುರ್ಜೇವಾಲಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ತುಂಬಾ ಹಳೆಯದಾಗಿದ್ದು ಎಫ್‌ಐಆರ್, ಚಾರ್ಜ್ ಶೀಟ್ ಮತ್ತು ಇತರೆ ದಾಖಲೆಗಳು ಕಳೆದುಹೋಗಿವೆ ಅಥವಾ ಹಾನಿಯಾಗಿವೆ. ಹಾಗಾಗಿ ವಿಚಾರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ವಾರಾಣಸಿಯ ಸೆಷನ್​ ನ್ಯಾಯಾಲಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸುರ್ಜೇವಾಲರಿಗೆ ಒದಗಿಸುವಂತೆ ಹೈಕೋರ್ಟ್ ಆದೇಶಿಸಿತ್ತು.

ಬಳಿಕ ಅವರಿಗೆ ನೀಡಿರುವ ದಾಖಲೆಗಳು ಯೋಗ್ಯವಾಗಿಲ್ಲ. ಹಾಗಾಗಿ ಈ ಪ್ರಕರಣದ ವಿಚಾರಣೆ ಪ್ರಕ್ರಿಯೆ ರದ್ದುಗೊಳಿಸಬೇಕು. ಜತೆಗೆ ಈ ಪ್ರಕರಣದಲ್ಲಿ ಹೊರಡಿಸಿರುವ ಜಾಮೀನು ರಹಿತ ವಾರಂಟ್​ ರದ್ದುಗೊಳಿಸುವಂತೆ ಕೋರಿ ಸರ್ಜೇವಾಲಾ ಪರವಾಗಿ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿತ್ತು.

ರಣದೀಪ್ ಸಿಂಗ್ ಸುರ್ಜೆವಾಲಾ ಪರವಾಗಿ ಹಿರಿಯ ವಕೀಲ ಸೈಯದ್ ಗುಲಾಮ್ ಹಸ್ನೇನ್ ವಾದ ಮಂಡಿಸಿದರು. ಸೈಯದ್ ಗುಲಾಮ್ ಹಸ್ನೈನ್ ಪ್ರಕಾರ, ಸುರ್ಜೇವಾಲಾ ವಿರುದ್ಧ ಕೆಳ ನ್ಯಾಯಾಲಯದಿಂದ ಹೊರಡಿಸಲಾದ ಜಾಮೀನು ರಹಿತ ವಾರಂಟ್‌ಗೆ ಸುಪ್ರೀಂ ಕೋರ್ಟ್ 5 ವಾರಗಳ ಕಾಲ ತಡೆ ನೀಡಿ ಆದೇಶ ಮಾಡಿ, ಕೆಳ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ಕೇಳಿದ ಎಎಸ್​ಐ

Last Updated :Nov 17, 2023, 10:56 PM IST

ABOUT THE AUTHOR

...view details