ಕರ್ನಾಟಕ

karnataka

31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಕಂಡಕ್ಟರ್‌ ಪರ ಹೈಕೋರ್ಟ್​ ತೀರ್ಪು: ಬಾಕಿ ವೇತನ ಪಾವತಿಸುವಂತೆ ಆದೇಶ

By ETV Bharat Karnataka Team

Published : Nov 14, 2023, 9:43 PM IST

31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಡಿಟಿಸಿ ಕಂಡಕ್ಟರ್​ ಪರವಾಗಿ ದೆಹಲಿ ಹೈಕೋರ್ಟ್​ ತೀರ್ಪು ನೀಡಿದೆ. ಆದರೆ ಈ ಸಂಬಂಧ ಹೋರಾಟ ನಡೆಸಿದ ಕಂಡೆಕ್ಟರ್​​ ಈಗ ಬದುಕುಳಿದಿಲ್ಲ.

ದೆಹಲಿ ಹೈಕೋರ್ಟ್​
ದೆಹಲಿ ಹೈಕೋರ್ಟ್​

ನವದೆಹಲಿ :15 ದಿನಗಳ ರಜೆ ಪಡೆದ ಕಾರಣಕ್ಕೆ 31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಡಿಟಿಸಿ ಕಂಡಕ್ಟರ್ ಪರವಾಗಿ ದೆಹಲಿ ಹೈಕೋರ್ಟ್​ ತೀರ್ಪು ನೀಡಿದೆ. ಮತ್ತೆ ಕೆಲಸಕ್ಕೆ ಮರಳಲು ಅವರು ಮತ್ತು ಅವರ ಕುಟುಂಬವು 30 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ಮಾಡಬೇಕಾಯಿತು. ಇಂದು ನಿರ್ವಾಹಕರ ಕುಟುಂಬದ ಪರವಾಗಿ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಅವರ 31 ವರ್ಷಗಳ ಬಾಕಿ ವೇತನ ಮತ್ತು ಇತರ ಬಾಕಿಗಳನ್ನು ಪಾವತಿಸುವಂತೆ ಆದೇಶಿಸಿದೆ.

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠವು ತನ್ನ ತೀರ್ಪಿನಲ್ಲಿ ಕಂಡಕ್ಟರ್ ತನ್ನ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡಿದ್ದಾರೆ ಎಂಬುದನ್ನು ಗಮನಿಸಿತು. ಈ ಸಂಬಂಧ ಹೋರಾಡಿದ್ದ ಕಂಡೆಕ್ಟರ್​ ಈಗ ಜೀವಂತವಾಗಿಲ್ಲ. ಆದರೆ ದೂರು ನೀಡಿದ ಕಂಡಕ್ಟರ್​ ಕೆಲಸದ ಸ್ಥಳದಲ್ಲಿ ಸರಿಯಾಗಿದ್ದರು ಎಂದು ದಾಖಲೆಗಳು ಸಾಬೀತುಪಡಿಸುತ್ತವೆ. ಕೇವಲ 15 ದಿನಗಳ ರಜೆ ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ 2003ರಲ್ಲಿ ಲೇಬರ್ ಕೋರ್ಟ್ ದೂರುದಾರರ ಪರವಾಗಿ ನೀಡಿದ್ದ ತೀರ್ಪನ್ನು ಪೀಠ ಎತ್ತಿ ಹಿಡಿದಿದೆ. ಈ ಅರ್ಜಿ ವಿಲೇವಾರಿ ಮಾಡುವಾಗ ದೆಹಲಿ ಸಾರಿಗೆ ನಿಗಮವು ಕಂಡಕ್ಟರ್​​​ನ ವಿಧವೆ ಹೆಂಡತಿ ಮತ್ತು ಮಕ್ಕಳಿಗೆ ಇದುವರೆಗಿನ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿದೆ.

1992ರಲ್ಲಿ ಡಿಟಿಸಿ 15 ದಿನಗಳ ರಜೆ ತೆಗೆದುಕೊಂಡಿದ್ದಕ್ಕಾಗಿ ನಿರ್ವಾಹಕರನ್ನು ಕೆಲಸದಿಂದ ವಜಾಗೊಳಿಸಿತ್ತು. ಅವರು 31 ಮಾರ್ಚ್ 1991 ರಿಂದ 14 ಏಪ್ರಿಲ್ 1991 ರವರೆಗೆ ಯಾವುದೇ ಸೂಚನೆ ನೀಡದೆ ರಜೆಯಲ್ಲಿದ್ದರು ಎಂದು ಇಲಾಖೆ ಆರೋಪಿಸಿದೆ. ಕಂಡಕ್ಟರ್ 2007ರಲ್ಲಿ ನಿಧನರಾಗಿದ್ದರು. ಇದರ ನಂತರ ಮೃತರ ವಿಧವೆ ಮತ್ತು ಮಕ್ಕಳು ಕಾನೂನು ಹೋರಾಟ ಮುಂದುವರೆಸಿದರು. 16 ವರ್ಷಗಳ ನಂತರ ಹೈಕೋರ್ಟ್ ಕುಟುಂಬದ ಪರವಾಗಿ ತೀರ್ಪು ನೀಡಿದೆ.

ಮೇ 31, 2003ರಂದು ಕಾರ್ಮಿಕ ನ್ಯಾಯಾಲಯವು ಕಂಡಕ್ಟರ್​ಗೆ ಕ್ಲೀನ್ ಚಿಟ್ ನೀಡಿತು. ಅವರನ್ನು ಮರು ನೇಮಕ ಮಾಡಿಕೊಳ್ಳಲು ಡಿಟಿಸಿಗೆ ನಿರ್ದೇಶನ ನೀಡಿತು. ಅವರ ಹಿಂದಿನ ಬಾಕಿ ಪಾವತಿಸಿ ಮತ್ತು ಉದ್ಯೋಗ ಮುಂದುವರಿಸುವಾಗ ಅವರಿಗೆ ಎಲ್ಲ ಭತ್ಯೆಗಳನ್ನು ನೀಡುವಂತೆ ಸೂಚಿಸಿತ್ತು ಎಂದು ಹೈಕೋರ್ಟ್ ಪೀಠ ಹೇಳಿದೆ. ಈ ಆದೇಶವನ್ನು ಡಿಟಿಸಿ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರು. 2007ರಲ್ಲಿ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಪೀಠ ಎತ್ತಿ ಹಿಡಿದಿತ್ತು. ಅಲ್ಲದೇ ಕಂಡಕ್ಟರ್ ಅವರನ್ನು ಮರು ನೇಮಕ ಮಾಡಿಕೊಳ್ಳಲು ಆದೇಶ ನೀಡಿದೆ.

ಇದರ ಹೊರತಾಗಿಯೂ ಡಿಟಿಸಿ ಈ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿತು. ಇದೀಗ ವಿಭಾಗೀಯ ಪೀಠವೂ ಕಂಡಕ್ಟರ್​ ಪರವಾಗಿ ನೀಡಿದ ತೀರ್ಪನ್ನು ಸರಿ ಎಂದು ಅಂಗೀಕರಿಸಿದೆ. ಇದರ ನಂತರ ಈಗ 31 ವರ್ಷಗಳವರೆಗೆ ನಿರ್ವಾಹಕರ ಬಾಕಿ ವೇತನ ಮತ್ತು ಇತರ ಭತ್ಯೆಗಳು ಸೇರಿದಂತೆ ಎಲ್ಲ ಹಣವನ್ನು ಡಿಟಿಸಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ :ಶೀಘ್ರವೇ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಪ್ರಚಾರ ನಡೆಸಲಿದ್ದಾರೆ : ವದಂತಿಗೆ ತೆರೆ ಎಳೆದ ಕಾಂಗ್ರೆಸ್​

ABOUT THE AUTHOR

...view details