ಕರ್ನಾಟಕ

karnataka

ಎರಡು ವಿಧಾನಸಭಾ ಮತಕ್ಷೇತ್ರಗಳಲ್ಲಿ ಹೆಸರು: ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿಗೆ ದೆಹಲಿ ಕೋರ್ಟ್​ ಸಮನ್ಸ್​

By ETV Bharat Karnataka Team

Published : Sep 5, 2023, 6:16 PM IST

Updated : Sep 5, 2023, 6:39 PM IST

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿ ಸುನಿತಾ ಅವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಕ್ಕೆ ದೆಹಲಿ ಕೋರ್ಟ್​ ಸಮನ್ಸ್ ಜಾರಿ ಮಾಡಿದೆ.

ಅರವಿಂದ್​ ಕೇಜ್ರಿವಾಲ್​ ಪತ್ನಿಗೆ ದೆಹಲಿ ಕೋರ್ಟ್​ ಸಮನ್ಸ್​
ಅರವಿಂದ್​ ಕೇಜ್ರಿವಾಲ್​ ಪತ್ನಿಗೆ ದೆಹಲಿ ಕೋರ್ಟ್​ ಸಮನ್ಸ್​

ನವದೆಹಲಿ:ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್​ರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಸಮನ್ಸ್​ ನೀಡಿದೆ.

ಮೆಟ್ರೋಪಾಲಿಟನ್ ನ್ಯಾಯಾಧೀಶ ಅರ್ಜಿಂದರ್ ಕೌರ್ ಕೇಜ್ರಿವಾಲ್​ ಪತ್ನಿಗೆ ಸಮನ್ಸ್​ ಜಾರಿ ಮಾಡಿದ್ದಾರೆ. ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಸುನಿತಾ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ (ಆರ್‌ಪಿ) ಕಾನೂನು ಉಲ್ಲಂಘಿಸಿರುವ ಆರೋಪ ಮಾಡಿದ್ದರು.

ಈ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಕೋರ್ಟ್​, ದೂರುದಾರರು ಮತ್ತು ಇತರ ಸಾಕ್ಷ್ಯವನ್ನು ಪರಿಗಣಿಸಿದ ನಂತರ ನವೆಂಬರ್ 18 ರಂದು ಸುನೀತಾ ಕೇಜ್ರಿವಾಲ್ ಅವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೋಂದಣಿ ಮಾಡಿದ್ದನ್ನು ತಪ್ಪು, ಕೇಸ್​ನಲ್ಲಿ ಇವರು ಆರೋಪಿ ಎಂದು ಘೋಷಿಸಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯ (ಆರ್‌ಪಿ) ನಿಬಂಧನೆಗಳನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಕೋರ್ಟ್​ ಹೇಳಿತ್ತು. ಜನಪ್ರತಿನಿಧಿ ಕಾಯಿದೆ 1950ರ ಪ್ರಕಾರ ಸಮನ್ಸ್ ನೀಡಬೇಕು ಎಂದು ನ್ಯಾಯಾಧೀಶರು ಆಗಸ್ಟ್ 29ರಂದು ಆದೇಶ ನೀಡಿದ್ದರು.

ಪ್ರಜಾಪ್ರತಿನಿಧಿ ಕಾಯ್ದೆ-1950 ಸೆಕ್ಷನ್​ 17 ರ ಪ್ರಕಾರ, ಯಾವುದೇ ಮತದಾರ ಒಂದು ಕ್ಷೇತ್ರಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನ ಪಟ್ಟಿಯಲ್ಲಿ ಹೆಸರು ಹೊಂದುವಂತಿಲ್ಲ ಎಂಬ ನಿಯಮವಿದೆ. ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರ (ಉತ್ತರಪ್ರದೇಶ) ಮತ್ತು ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದು ಸೆಕ್ಷನ್ 17 ರ ಉಲ್ಲಂಘನೆಯಾಗಿದ್ದು, ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಆರ್​​ಪಿ ಕಾಯಿದೆಯ ಸೆಕ್ಷನ್ 31 ರ ಅಡಿಯಲ್ಲಿ ಈ ಅಪರಾಧಕ್ಕಾಗಿ 2 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ.

ಅಧಿಕಾರಿಯಾಗಿದ್ದರೂ ತಪ್ಪು:ಕೋರ್ಟ್​ನಲ್ಲಿ ವಾದ ಮಂಡಿಸಿದ ಅರ್ಜಿದಾರ, ಬಿಜೆಪಿ ನಾಯಕ ಹರೀಶ್ ಖುರಾನಾ ಅವರು, ನಾನು ಈ ಅರ್ಜಿಯನ್ನು 2019 ರಲ್ಲಿ ಸಲ್ಲಿಸಿದ್ದೆ. ದೆಹಲಿಯ ಚಾಂದಿನಿ ಚೌಕ್ ಮತ್ತು ಉತ್ತರಪ್ರದೇಶದ ಗಾಜಿಯಾಬಾದ್‌ನ ಸಾಹಿಬಾಬಾದ್‌ ಕ್ಷೇತ್ರದಲ್ಲಿ ಸುನಿತಾ ಕೇಜ್ರಿವಾಲ್​ ಅವರು ಮತದಾರರಾಗಿ ನೋಂದಾಯಿಸಿದ್ದು ಕಾನೂನು ಬಾಹಿರವಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಇಬ್ಬರೂ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ. ದೇಶದಲ್ಲಿ ಒಂದು ರಾಷ್ಟ್ರ ಮತ್ತು ಒಂದು ಮತದಾರರ ಗುರುತಿನ ಚೀಟಿ ಜಾರಿಯಲ್ಲಿದೆ ಎಂದು ಅವರಿಗೆ ತಿಳಿದಿದ್ದು, ಇಂತಹ ಅಪರಾಧವನ್ನು ಎಸಗಿರುವುದು ಅಕ್ಷಮ್ಯ ಎಂದು ವಾದಿಸಿದ್ದಾರೆ.

ಇದನ್ನೂ ಓದಿ:ಸಂವಿಧಾನದಲ್ಲಿನ 'ಇಂಡಿಯಾ' ಪದಕ್ಕೆ ಕೊಕ್​, 'ಭಾರತ'ಕ್ಕೆ ಮಾತ್ರ ಸ್ಥಾನ: ವಿಶೇಷ ಅಧಿವೇಶನದಲ್ಲಿ ಕೇಂದ್ರದಿಂದ ಮಸೂದೆ ಮಂಡಿಸುವ ಸಾಧ್ಯತೆ

Last Updated :Sep 5, 2023, 6:39 PM IST

ABOUT THE AUTHOR

...view details