ETV Bharat / bharat

ಲೋಕಸಭೆ ಚುನಾವಣೆ ಮೇಲೆ ಪ್ರಭಾವ: ಜಾರ್ಖಂಡ್​ನಲ್ಲಿ ಓರ್ವ ನಕ್ಸಲ್​ ಎನ್​ಕೌಂಟರ್​, ಕಾರ್ಯಾಚರಣೆ ಮುಂದುವರಿಕೆ - maoists encounter

author img

By ETV Bharat Karnataka Team

Published : May 23, 2024, 6:24 PM IST

ಜಾರ್ಖಂಡ್​ನ 4 ಲೋಕಸಭಾ ಸ್ಥಾನಗಳಿಗೆ ಮೇ 25 ರಂದು ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ನಕ್ಸಲೀಯರ ಹತ್ಯೆಯಾಗಿದೆ.

ಜಾರ್ಖಂಡ್​ನಲ್ಲಿ ಓರ್ವ ನಕ್ಸಲ್​ ಎನ್​ಕೌಂಟರ್​
ಜಾರ್ಖಂಡ್​ನಲ್ಲಿ ಓರ್ವ ನಕ್ಸಲ್​ ಎನ್​ಕೌಂಟರ್​ (ETV Bharat)

ರಾಂಚಿ (ಜಾರ್ಖಂಡ್​): ಲೋಕಸಭೆ ಚುನಾವಣೆಯ ನಡುವೆ ಛತ್ತೀಸ್​ಗಢ ಮತ್ತು ಜಾರ್ಖಂಡ್​ನಲ್ಲಿ ನಕ್ಸಲೀಯರ ಹಾವಳಿ ಜೋರಾಗಿದೆ. ಛತ್ತೀಸ್​ಗಢದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ನಡೆದ ನಕ್ಸಲ್​ ನಿಗ್ರಹ ಕಾರ್ಯಾಚರಣೆಯಲ್ಲಿ 90ಕ್ಕೂ ಅಧಿಕ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಜಾರ್ಖಂಡ್​ನಲ್ಲೂ ಕಾರ್ಯಾಚರಣೆ ಜೋರಾಗಿದೆ.

ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಗುರುವಾರ ಎನ್​ಕೌಂಟರ್​ ನಡೆಸಲಾಗಿದ್ದು, ಓರ್ವ ನಕ್ಸಲ್ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಇಲ್ಲಿನ ಕೊಚಾಂಗ್‌ನಲ್ಲಿರುವ ಸರ್ವದಾ ಅರಣ್ಯದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ನಕ್ಸಲೀಯನೊಬ್ಬನ ಸಾವಿನ ಬಗ್ಗೆ ಮಾಹಿತಿ ಇದೆ. ಮಾವೋವಾದಿಗಳು ಅರಣ್ಯದಲ್ಲಿ ಅಡಗಿದ್ದಾರೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೋಬ್ರಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಸರ್ವದಾ ಅರಣ್ಯದಲ್ಲಿ ಎನ್​ಕೌಂಟರ್​: ಸರ್ವದಾ ಅರಣ್ಯದಲ್ಲಿ ಮಾವೋವಾದಿಗಳನ್ನು ಪೊಲೀಸರು ಬೆನ್ನಟ್ಟಿ ಎನ್​ಕೌಂಟರ್ ಮಾಡಿದ್ದಾರೆ. ಇನ್ನೂ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಒಬ್ಬ ನಕ್ಸಲ್​ ಹತ್ಯೆಯಾಗಿರುವ ಬಗ್ಗೆ ಖುಂಟಿ ಡಿಎಸ್​ಪಿ ವರುಣ್ ರಜಾಕ್ ಖಚಿತಪಡಿಸಿದ್ದಾರೆ. ಈ ಪ್ರದೇಶವು ಹೆಚ್ಚು ನಕ್ಸಲ್ ಬಾಧಿತವಾಗಿದ್ದು, ಗುಂಡಿನ ಚಕಮಕಿ ಮುಗಿದ ನಂತರವೇ ಸಾವು ನೋವುಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ ಎಂದು ಅವರು ಹೇಳಿದರು.

ಮೇ 25 ರಂದು ನಡೆಯುವ 6ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್‌ನ ನಾಲ್ಕು ಸ್ಥಾನಗಳಿಗೆ ಮತದಾನವಾಗಲಿದೆ. ರಾಂಚಿ, ಧನ್‌ಬಾದ್, ಗಿರಿದಿಹ್ ಮತ್ತು ಜಮ್‌ಶೆಡ್‌ಪುರ ಲೋಕಸಭಾ ಕ್ಷೇತ್ರಗಳು ಮತದಾನಕ್ಕೆ ಸಜ್ಜಾಗಿವೆ. ಇಂದು ಎನ್​ಕೌಂಟರ್​ ನಡೆದ ಖುಂಟಿ ಪ್ರದೇಶವು ರಾಂಚಿ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ.

ಹೀಗಾಗಿ, ರಾಂಚಿ ಪಕ್ಕದ ನಕ್ಸಲ್ ಪೀಡಿತ ಗಡಿ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ನಕ್ಸಲೀಯರು ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿವಿಧೆಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಛತ್ತೀಸ್​ಗಢದಲ್ಲಿ ಭಾರಿ ಕಾರ್ಯಾಚರಣೆ: ನಕ್ಸಲ್​ಪೀಡಿತ ರಾಜ್ಯಗಳಲ್ಲಿ ಒಂದಾದ ಛತ್ತೀಸ್​ಗಢದಲ್ಲಿ ಭದ್ರತಾ ಪಡೆಗಳು ಭಾರೀ ಯಶಸ್ಸು ಕಂಡಿವೆ. ಕೆಲ ವರ್ಷಗಳಿಂದ ನಕ್ಸಲ್​ ದಮನ ಕಾರ್ಯಾಚರಣೆಯಲ್ಲಿ ನೂರಾರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಅದರಲ್ಲೂ ಈ ವರ್ಷದ 4 ತಿಂಗಳಲ್ಲಿ ಕ್ಷಿಪ್ರಗತಿಯ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ಸಿಕ್ಕಿದೆ.

ನಕ್ಸಲರ ಹಾವಳಿಯಿಂದ ಕುಖ್ಯಾತಿಯಾಗಿರುವ ಛತ್ತೀಸ್​ಗಢದ ಬಸ್ತಾರ್​, ದಾಂತೇವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅರಣ್ಯ ಪ್ರದೇಶದೊಳಗೆ ನುಗ್ಗಿ ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಿವೆ. ಈವರೆಗೂ ನಡೆದ ಕಾರ್ಯಾಚರಣೆಯಲ್ಲಿ 500 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಅದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 91 ಜನರು ಹತ್ಯೆಯಾಗಿದ್ದರೆ, 205 ಮಂದಿಯನ್ನು ಬಂಧಿಸಲಾಗಿದೆ. 231 ಜನರು ಶರಣಾಗತರಾಗಿ ಬದುಕಿನ ಹಾದಿಯನ್ನು ಬದಲಿಸಿಕೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್​ವಾದಕ್ಕೆ ಮೂಗುದಾರ: ನಕ್ಸಲ್​​ವಾದವನ್ನು ಹತ್ತಿಕ್ಕಲು ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಶರಣಾಗತರಾಗುವ ಮಾವೋವಾದಿಗಳು ಪುನಶ್ಚೇತನ ಶಿಬಿರಗಳನ್ನು ರೂಪಿಸಿದೆ. ಬಸ್ತಾರ್​ನಲ್ಲಿ 80 ಕ್ಕೂ ಅಧಿಕ ಭದ್ರತಾ ಪಡೆಗಳ ಶಿಬಿರಗಳನ್ನು ರೂಪಿಸಿ, ಕಾವಲು ಕಾಯುತ್ತಿವೆ. ಇದರಿಂದಾಗಿ 2024 ನಕ್ಸಲರಿಗೆ ನುಂಗುಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: ತುಮಕೂರು: 7 ಪೊಲೀಸರನ್ನು ಕೊಂದ ಪ್ರಕರಣ, 19 ವಷಗಳ ಬಳಿಕ ನಕ್ಸಲ್‌ ಕೊತ್ತಗೆರೆ ಶಂಕರ ಬಂಧನ - Naxal Kottagere Shanker arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.