ಕರ್ನಾಟಕ

karnataka

ವಿಮಾನ ತಪ್ಪುವುದನ್ನು ತಡೆಯಲು ಬಾಂಬ್​ ಕರೆ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ: ಹೈದರಾಬಾದ್​ ನಿಲ್ದಾಣದಲ್ಲಿ ಆತಂಕ

By

Published : Feb 21, 2023, 11:21 AM IST

Updated : Feb 21, 2023, 1:12 PM IST

ವಿಮಾನದಲ್ಲಿ ಬಾಂಬ್​ ಬೆದರಿಕೆ- ಹೈದರಾಬಾದ್​ ನಿಲ್ದಾಣದಲ್ಲಿ ಬಾಂಬ್​ ಆತಂಕ- ಪ್ರಯಾಣಿಕನಿಂದ ಬಾಂಬ್​ ಬೆದರಿಕೆ- ವಿಮಾನ ತಪ್ಪದಂತೆ ತಡೆಯಲು ಹುಸಿ ಬಾಂಬ್​ ಕರೆ- ಚೆನ್ನೈಗೆ ಹೊರಟಿದ್ದ ಇಂಡಿಗೋ ಏರ್​ಲೈನ್ಸ್​​ ವಿಮಾನ

ಹೈದರಾಬಾದ್​ ನಿಲ್ದಾಣದಲ್ಲಿ ಆತಂಕ
ಹೈದರಾಬಾದ್​ ನಿಲ್ದಾಣದಲ್ಲಿ ಆತಂಕ

ಹೈದರಾಬಾದ್:ನಿಲ್ದಾಣಕ್ಕೆ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿ ಹೋಗುವುದನ್ನು ತಡೆಯಲು ಪ್ರಯಾಣಿಕನೊಬ್ಬ ಅದರಲ್ಲಿ ಬಾಂಬ್​ ಇದೆ ಎಂದು ಕರೆ ಮಾಡಿ ಆತಂಕ ಸೃಷ್ಟಿಸಿದ್ದ. ತಪಾಸಣೆಯ ಬಳಿಕ ಹುಸಿ ಬಾಂಬ್​ ಕರೆ ಎಂದು ತಿಳಿದ ಅಧಿಕಾರಿಗಳು ತನಿಖೆ ನಡೆಸಿ ಪ್ರಯಾಣಿಕನನ್ನು ನಿಲ್ದಾಣದಲ್ಲೇ ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಹೈದರಾಬಾದ್​ನಿಂದ ಚೆನ್ನೈಗೆ ಹೊರಟಿದ್ದ ವಿಮಾನ.. ಇಂಡಿಗೋ ಏರ್​ಲೈನ್ಸ್​ನ ವಿಮಾನ ಸೋಮವಾರ ಬೆಳಗ್ಗೆ 10:15 ಕ್ಕೆ ಹೈದರಾಬಾದ್​ನಿಂದ ಚೆನ್ನೈಗೆ ಹೊರಡಬೇಕಿತ್ತು. ವಿಮಾನದಲ್ಲಿ 118 ಜನರಿದ್ದರು. ಎಲ್ಲ ಭದ್ರತಾ ತಪಾಸಣೆಯ ನಂತರ ಅವರೆಲ್ಲರೂ ವಿಮಾನವನ್ನು ಹತ್ತುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕರೆಯೊಂದು ಬಂದು ವಿಮಾನದಲ್ಲಿ ಬಾಂಬ್​ ಇದೆ ಎಂದು ಆಗಂತುಕ ಹೇಳಿದ್ದಾನೆ. ಇದರಿಂದ ಆತಂಕಕ್ಕೀಡಾದ ಸಿಬ್ಬಂದಿ ಇಡೀ ವಿಮಾನವನ್ನು ಜಾಲಾಡಿದ್ದಾರೆ.

ಬಾಂಬ್​ ಕರೆಯಿಂದಾಗಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಬಾಂಬ್ ಪತ್ತೆ ದಳವನ್ನು ತಕ್ಷಣವಏ ವಿಮಾನ ನಿಲ್ದಾಣಕ್ಕೆ ಕರೆಸಿ, ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ತಪಾಸಣೆ ನಡೆಸಲಾಯಿತು. ಆದರೆ, ವಿಮಾನದಲ್ಲಿ ಬಾಂಬ್ ಇರಲಿಲ್ಲ. ಇದು ಹುಸಿ ಕರೆ ಎಂದು ತಿಳಿದ ಪೊಲೀಸರು ಬಾಂಬ್​ ಕರೆ ಮಾಡಿದ ಸಂಖ್ಯೆಯನ್ನು ಪತ್ತೆ ಮಾಡಿದ್ದಾರೆ.

ಕರೆ ಬಂದ ಮೊಬೈಲ್​ ಸಂಖ್ಯೆಯ ಸಿಗ್ನಲ್​ ಟ್ರ್ಯಾಕ್​ ಮಾಡಿದಾಗ ಅದು ಹೈದರಾಬಾದ್​ ವಿಮಾನ ನಿಲ್ದಾಣದಲ್ಲೇ ಇರುವುದು ತೋರಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಚೆನ್ನೈಗೆ ಹೊರಡಲು ಸಜ್ಜಾಗಿದ್ದ ವಿಮಾನವನ್ನು ಹತ್ತುತ್ತಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಚೆನ್ನೈಗೆ ಹೊರಟಿದ್ದ ಆಗಂತುಕ:ವಿಮಾನದಲ್ಲಿ ಬಾಂಬ್​ ಆತಂಕ ಸೃಷ್ಟಿಸಿದ ವ್ಯಕ್ತಿ ಅದೇ ವಿಮಾನವನ್ನು ಹತ್ತಲು ಮುಂದಾಗಿದ್ದಾಗ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ಚೆನ್ನೈಗೆ ಹೊರಡಬೇಕಿತ್ತು. ವಿಮಾನ ನಿಲ್ದಾಣಕ್ಕೆ ಬರಲು ತಡವಾದ ಕಾರಣ ಈ ರೀತಿ ಕರೆ ಮಾಡಿದೆ. ತಪಾಸಣೆ ನಡೆಸುವ ಸಮಯದಲ್ಲಿ ತಾನು ವಿಮಾನ ನಿಲ್ದಾಣವನ್ನು ತಲುಪಬಹುದು ಎಂದು ಹೀಗೆ ಮಾಡಿದೆ ಎಂದು ಬಾಯ್ಬಿಟ್ಟಿದ್ದಾನೆ.

ಅಂದಹಾಗೇ ಆತನನ್ನು ಪತಿರೈಯ ಎಂದು ಗುರುತಿಸಲಾಗಿದೆ. ಈತ ಮೂಲತಃ ತೆಲಂಗಾಣದವರಾಗಿದ್ದು, ತಮಿಳುನಾಡಿನ ಚೆನ್ನೈನಲ್ಲಿರುವ ಆರ್ಮಿ ಇಂಜಿನಿಯರಿಂಗ್ ಸರ್ವೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಶನಿವಾರ ಮತ್ತು ಭಾನುವಾರ ರಜೆಯ ಕಾರಣ ಹೈದರಾಬಾದ್​ಗೆ ಬಂದಿದ್ದ. ಇಂದು ವಾಪಸ್​ ಚೆನ್ನೈಗೆ ಹಿಂದಿರುಗಬೇಕಿತ್ತು.

ಹುಸಿ ಬಾಂಬ್​ ಕರೆ ಮಾಡಿ ಆತಂಕ ಸೃಷ್ಟಿಸಿದ್ದಲ್ಲದೇ ವಿಮಾನ ಹಾರಾಟವನ್ನು ತಡೆ ಮಾಡಿದ್ದಕ್ಕೆ ಹೈದರಾಬಾದ್ ಪೊಲೀಸರು ಪತಿರೈಯನನ್ನು ಬಂಧಿಸಿದ್ದಾರೆ. ಆತನ ಮೊಬೈಲ್​ ಕೂಡ ಜಪ್ತಿ ಮಾಡಲಾಗಿದೆ. ಬಳಿಕ ಈತನನ್ನು ಹೊರತುಪಡಿಸಿ ಉಳಿದ 117 ಪ್ರಯಾಣಿಕರೊಂದಿಗೆ ಹೈದರಾಬಾದ್‌ನಿಂದ ವಿಮಾನ ಹೊರಟು ಬೆಳಗ್ಗೆ 11:30ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಈ ವ್ಯಕ್ತಿಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಓದಿ:ವಿಮಾನಯಾನ ವಲಯಕ್ಕೆ ಸಿಕ್ಕಿತು ಬೂಸ್ಟ್​.. ದೇಶೀಯ ಪ್ರಯಾಣಿಕರ ದಟ್ಟಣೆ ದ್ವಿಗುಣ

Last Updated :Feb 21, 2023, 1:12 PM IST

ABOUT THE AUTHOR

...view details