ETV Bharat / state

ಜಲಮಂಡಳಿಯಿಂದ ಮಾದರಿ ಕಾರ್ಯ; ಒಂದು ತಿಂಗಳಲ್ಲಿ 986 ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ - Water Board

author img

By ETV Bharat Karnataka Team

Published : May 4, 2024, 8:14 PM IST

WATER BOARD  RAIN WATER WELLS  BENGALURU
ಒಂದು ತಿಂಗಳಲ್ಲಿ 986 ಮಳೆ ನೀರು ಇಂಗುಗುಂಡಿಗಳ ನಿರ್ಮಾಣ(Etv Bharat)

ಜಲಮಂಡಳಿಯು ಒಂದು ತಿಂಗಳಲ್ಲಿ 986 ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ ಮಾಡಿ ಮಾದರಿಯಾಗಿದೆ.

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಳೆ ಪ್ರಾರಂಭವಾಗುವ ಮುನ್ನವೇ ನಗರದಾದ್ಯಂತ 986 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಾದರಿಯಾಗಿದೆ.

ಬೆಂಗಳೂರು ನಗರದಲ್ಲಿ ಎದುರಾಗಿರುವ ನೀರಿನ ಅಭಾವ ಕಾವೇರಿ ನೀರಿನ ಕೊರತೆಯಿಂದ ಅಲ್ಲ. ಅಂತರ್ಜಲದ ಮೇಲೆ ಅವಲಂಬಿತರಾಗಿದ್ದ ಲಕ್ಷಾಂತರ ಜನರಿಗೆ ನೀರು ಒದಗಿಸುತ್ತಿದ್ದ ಕೊಳವೆ ಬಾವಿಗಳು ಬತ್ತಿ ಹೋದ ಕಾರಣ ನೀರಿನ ಅಭಾವ ಕಂಡುಬಂದಿತ್ತು. ಮಳೆ ನೀರು ಕೊಯ್ಲು ಅಳವಡಿಸಿಕೊಂಡಿರುವ ಹಲವಾರು ಕಟ್ಟಡಗಳಲ್ಲಿ ಮಳೆ ನೀರಿನ ಇಂಗುಗುಂಡಿಗಳನ್ನು ರಚಿಸದೇ ಇರುವ ಕಾರಣ ಅಂತರ್ಜಲ ಮರುಪೂರಣ ಸರಿಯಾಗಿ ಆಗುತ್ತಿಲ್ಲ. ಮರುಪೂರಣ ಆಗದೇ ಇರುವ ಕಾರಣ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಮಳೆ ನೀರು ಮರುಪೂರಣದಿಂದ ದೂರ ಉಳಿಯದೇ ಇಂಗು ಗುಂಡಿಗಳನ್ನ ನಿರ್ಮಿಸಬೇಕು ಎನ್ನುವ ಜಾಗೃತಿ ಮೂಡಿಸಲು ಜಲಮಂಡಳಿ ಮುಂದಾಗಿದೆ.

ನಗರದಲ್ಲಿ ಜಲಮಂಡಳಿಯ ಅಧೀನದಲ್ಲಿರುವ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂದು ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಒಂದು ತಿಂಗಳ ಅವಧಿಯಲ್ಲಿ 986 ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ವಲಯವಾರು ನಿರ್ಮಿಸಲಾಗುವ ಇಂಗುಗುಂಡಿಗಳ ಮೂಲಕ ಮಳೆಯ ನೀರು ಯಾವುದೇ ಕಲ್ಮಶವಿಲ್ಲದೇ ನೆಲದಡಿಗೆ ಇಳಿಯುವಂತೆ ಮಾಡಲಾಗಿದೆ. ಹಾಗೆಯೇ, ರಸ್ತೆಗಳಲ್ಲಿನ ನೀರು ಹರಿದು ಒಳಚರಂಡಿಗೆ ಸೇರ್ಪಡೆ ಆಗಿ ತೊಂದರೆ ಆಗದಂತೆ ತಡೆಯಲು ಇದು ಸಹಕಾರಿಯಾಗಲಿದೆ.

ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ 74 ಪ್ರಸ್ತಾವನೆ: ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಸಮುದಾಯ ಮಳೆ ಕೋಯ್ಲು (ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌) ಗೂ ಬಹಳಷ್ಟು ಒಲವು ವ್ಯಕ್ತವಾಗಿದೆ. ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಅಳವಡಿಸುವ 74 ಪ್ರಸ್ತಾವನೆಗಳ ಬಗ್ಗೆ ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯದಲ್ಲೇ ಮೊದಲ ಯೋಜನೆಗೆ ಚಾಲನೆ ದೊರೆಯಲಿದೆ.

ಇಂಗುಗುಂಡಿಗಳ ನಿರ್ಮಾಣ ಕಡ್ಡಾಯ: ಇತರರಿಗೆ ಮಾದರಿಯಾಗುವ ಮೂಲಕ ಬದಲಾವಣೆಯನ್ನು ತರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ, ಸಾರ್ವಜನಿಕರು ಮಳೆ ನೀರು ಇಂಗುಗುಂಡಿಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಿ ಎಂದು ಹೇಳುವ ಮುನ್ನವೇ ಜಲಮಂಡಳಿಯ ವತಿಯಿಂದ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಕಡಿಮೆ ಸಮಯದಲ್ಲಿ 986 ಇಂಗುಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ನಮ್ಮ ಅಂತರ್ಜಲವನ್ನು ಸಮೃದ್ಧಗೊಳಿಸಲು ಅನುವು ಮಾಡಿಕೊಡಲಾಗುವುದು. ಸಾರ್ವಜನಿಕರು ತಮ್ಮ ಕಟ್ಟಡಗಳಲ್ಲಿ ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಸಮೃದ್ಧ ಬೆಂಗಳೂರಿಗೆ ಕೊಡುಗೆ ನೀಡುವಂತೆ ಮನವೊಲಿಸುವುದು ನಮ್ಮ ಗುರಿಯಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ಓದಿ: ಜಲಮಂಡಳಿಯ ಗ್ರೀನ್‌ ಸ್ಟಾರ್‌ ಚಾಲೆಂಜ್​​ಗೆ ಉತ್ತಮ ಪ್ರತಿಕ್ರಿಯೆ: 2 ವಾರದಲ್ಲಿ 629ಕ್ಕೂ ಹೆಚ್ಚು ಗ್ರಾಹಕರ ನೋಂದಣಿ - Green Star Challenge

ETV Bharat Logo

Copyright © 2024 Ushodaya Enterprises Pvt. Ltd., All Rights Reserved.