ETV Bharat / state

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕಾಫಿ ನಾಡು, ಕೃಷ್ಣನೂರಿನಲ್ಲಿ‌ ಕೈ-ಕಮಲದ ನಡುವೆ ಹೋರಾಟ - Udupi Chikkamagaluru Profile

author img

By ETV Bharat Karnataka Team

Published : Apr 23, 2024, 6:02 PM IST

UDUPI CHIKKAMAGALURU PROFILE
UDUPI CHIKKAMAGALURU PROFILE

Udupi-Chikkamagaluru Constituency, Karnataka Lok Sabha Election 2024: ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅಖಾಡ ರಂಗೇರುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಇತಿಹಾಸ ಇಲ್ಲಿದೆ.

ಉಡುಪಿ: ಮಹಿಳಾ ಮತದಾರರೇ ಹೆಚ್ಚಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಬೇಕಾದರೆ ಮಹಿಳೆಯರ ಶ್ರೀರಕ್ಷೆ ಬಹುಮುಖ್ಯ. ಇತರೆ ಕ್ಷೇತ್ರಗಳಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ನಿರೀಕ್ಷೆಯಂತೆ ಈ ಬಾರಿ ಬಿಜೆಪಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್‌ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟ ನಡೆಸುತ್ತಿದೆ.

ಕ್ಷೇತ್ರದ ವಿಶೇಷತೆಗಳು:

  • ಇಂದಿರಾ ಗಾಂಧಿಗೆ ಮರುಜನ್ಮ ನೀಡಿದ್ದ ಲೋಕಸಭಾ ಕ್ಷೇತ್ರ ಚಿಕ್ಕಮಗಳೂರು.
  • ಅತೀ ಹೆಚ್ಚು ಕಾಫಿಯ ಸ್ವಾದವನ್ನು ವಿಶ್ವಕ್ಕೆ ಪಸರಿಸಿದ ಜಿಲ್ಲೆ ಚಿಕ್ಕಮಗಳೂರು.
  • ಗಿರಿಶ್ರೇಣಿ, ಪ್ರವಾಸಿಸ್ಥಳ, ಧಾರ್ಮಿಕ ಸ್ಥಳವಿರುವ ಜಿಲ್ಲೆ ಚಿಕ್ಕಮಗಳೂರು.
  • ಮೀನುಗಾರಿಕೆಯಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಸ್ಥಳ ಉಡುಪಿ
  • ಕಡಲ ತೀರದ ಸೌಂದರ್ಯವನ್ನು ಸವಿಯೋಕೆ ಸಾವಿರಾರು ಜನರು ಆಗಮಿಸುವ ಸ್ಥಳ.
  • ಮಲೆನಾಡು, ಕರಾವಳಿ ಎರಡೂ ಹೊಂದಿಕೊಂಡಿರುವ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು.
    UDUPI CHIKKAMAGALURU PROFILE
    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಕ್ಷೇತ್ರ ರಚನೆ: 2002ರಲ್ಲಿ ಡಿಲಿಮಿಟೇಷನ್ ಕಮಿಷನ್ ಅಫ್ ಇಂಡಿಯಾ ಶಿಫಾರಸಿನಂತೆ 2008ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ರಚನೆಯಾಯಿತು. ಈ ಕ್ಷೇತ್ರದಿಂದ 2009ರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡ ಆಯ್ಕೆಯಾದ ನಂತರ ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2012ರ ಉಪಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿದರು. 2014 ಹಾಗೂ 2019 ಸತತವಾಗಿ ಪ್ರಸ್ತುತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸಿ ಬಿಜೆಪಿಯಿಂದ ಎರಡು ಬಾರಿಯೂ ದಾಖಲೆಯ ಗೆಲುವು ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಲಾ 4 ಸ್ಥಾನ ಪಡೆದು ಕಾಂಗ್ರೆಸ್, ಬಿಜೆಪಿ ಶಾಸಕರ ಸಮಬಲ ಹೊಂದಿದ್ದಾರೆ.

UDUPI CHIKKAMAGALURU PROFILE
ನಾಮಪತ್ರ ಸಲ್ಲಿಕೆ

ಜಾತಿವಾರು ವಿವರ: ಮೊಗವೀರ 1,14,000, ಬಿಲ್ಲವ ಈಡಿಗರು, 1,90,000, ಲಿಂಗಾಯಿತ 1,02,000, ಬಂಟರು-ಶೆಟ್ಟಿ-ಒಕ್ಕಲಿಗ 1,80,000, ಬ್ರಾಹ್ಮಣ 1,18,454, ಮುಸ್ಲಿಂ 1,45,250, ಕ್ರಿಶ್ಚಿಯನ್ 80,500, ಪರಿಶಿಷ್ಟಜಾತಿ 2,10,580, ಪರಿಶಿಷ್ಟ ಪಂಗಡ 55,067, ಜೈನ 9,650, ಕೊಂಕಣಿ 10,240, ದೇವಾಡಿಗ 28,000, ಗಾಣಿಗ 14,570, ಕೊಂಕಣಿ ಖಾರ್ವಿ 67,345, ಕುರುಬರು 67,345, ಇತರೆ 68,700 ಸಂಖ್ಯಾಬಲ ಹೊಂದಿದೆ.

ಮೊಗವೀರ1,14,000
ಬಿಲ್ಲವ ಈಡಿಗರು1,90,000
ಲಿಂಗಾಯಿತ1,02,000
ಬಂಟರು-ಶೆಟ್ಟಿ-ಒಕ್ಕಲಿಗ1,80,000
ಬ್ರಾಹ್ಮಣ1,18,454
ಮುಸ್ಲಿಂ1,45,250
ಕ್ರಿಶ್ಚಿಯನ್80,500
ಪರಿಶಿಷ್ಟಜಾತಿ2,10,580
ಪರಿಶಿಷ್ಟ ಪಂಗಡ55,067
ಜೈನ9,650
ಕೊಂಕಣಿ10,240
ದೇವಾಡಿಗ28,000
ಗಾಣಿಗ14,570
ಕೊಂಕಣಿ ಖಾರ್ವಿ 67,345
ಕುರುಬರು67,345
ಇತರೆ68,700

ಕಳೆದ ನಾಲ್ಕು ಚುನಾವಣೆಯ ವಿವರ: 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೋಭಾ ಕರಂದ್ಲಾಜೆ 7,18,916 ಪಡೆದು ಗೆಲುವು ಕಂಡರು. ಜೆಡಿಎಸ್​ನಿಂದ ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ 3,69,317 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. ಸೋಲಿನ ಅಂತರ 3,49,599 ಮತಗಳು.

2014ರ ಚುನಾವಣೆಯಲ್ಲಿ ಎರಡನೇ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಶೋಭಾ ಕರಂದ್ಲಾಜೆ 5,81,168 ಮತಗಳೊಂದಿಗೆ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 5,81,168 ಮತ ಪಡೆದು ಸೋಲನುಭವಿಸಿದರು. ಸೋಲಿನ ಅಂತರ 1,81,643.

2012ರ ಉಪಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ನಿಂದ ಕಣಕ್ಕಿಳಿದ ಜಯಪ್ರಕಾಶ್ ಹೆಗ್ಡೆ 3,98,723 ಮತಗಳೊಂದಿಗೆ ಜಯದ ನಗೆ ಬೀರಿದರು. ಬಿಜೆಪಿಯ ಸುನೀಲ್ ಕುಮಾರ್ 3,52,999 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. ಸೋಲಿನ ಅಂತರ- 45,724

UDUPI CHIKKAMAGALURU PROFILE
ನಾಮಪತ್ರ ಸಲ್ಲಿಕೆ

2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸದಾನಂದ ಗೌಡ 4,01,441 ಮತ ಪಡೆದು ಗೆಲುವು ಕಂಡರೆ, ಕಾಂಗ್ರೆಸ್​ನ ಜಯಪ್ರಕಾಶ್ ಹೆಗ್ಡೆ 3,74,423 ಮತ ಪಡೆದು ಮತ್ತೆ ಸೋಲನುಭವಿಸಿದರು. ಸೋಲಿನ ಅಂತರ 27,018 ಮತಗಳು.

ಉಡುಪಿ-ಚಿಕ್ಕಮಗಳೂರು ಒಟ್ಟು ಮತದಾರರು: ಈ ಕ್ಷೇತ್ರವು ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರಿಕೆರೆ ಉಡುಪಿ, ಕುಂದಾಪುರ, ಕಾಪು, ಕಾರ್ಕಳ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. 1,576,264 ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯಾಗಿದೆ. 8,11,981 ಮಹಿಳಾ ಮತದಾರರು, 7,64,246 ಪುರುಷ ಮತದಾರರು, 37 ತೃತೀಯ ಲಿಂಗ ಮತದಾರರಿದ್ದಾರೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಭ್ಯರ್ಥಿಗಳ ಗೆಲುವಿನಲ್ಲಿ ಇವರ ಪಾತ್ರ ಮಹತ್ವದಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಹೊಸ ಮುಖ ಸಂಸತ್ತಿಗೆ; ಕೈ-ಕಮಲದ ನಡುವೆ ಸಮಬಲದ ಪೈಪೋಟಿ - Dakshina Kannada

ETV Bharat Logo

Copyright © 2024 Ushodaya Enterprises Pvt. Ltd., All Rights Reserved.