ETV Bharat / state

ಬಿಸಿಲ ತಾಪ : ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ - bus glass breaks

author img

By ETV Bharat Karnataka Team

Published : May 5, 2024, 11:00 PM IST

Bantwala
ಬಂಟ್ವಾಳ (ETV Bharath)

ಬಂಟ್ವಾಳ ತಾಲೂಕಿನ ಉರಿಮಜಲು ಎಂಬಲ್ಲಿ ಬಸ್​ನ ಗಾಜು ಒಡೆದು ಮೂವರಿಗೆ ಗಾಯವಾಗಿದೆ.

ಬಂಟ್ವಾಳ : ಬಿಸಿಲಿನ ತಾಪದಿಂದ ಕೇರಳ ರಾಜ್ಯ ರಸ್ತೆ ನಿಗಮದ ಮಲಬಾರ್ ಬಸ್ಸಿನ ಮುಂಭಾಗದ ಗಾಜು ಒಡೆದ ಪರಿಣಾಮ, ಇಬ್ಬರು ಮಕ್ಕಳು ಸೇರಿ ಚಾಲಕ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉರಿಮಜಲು ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ. ಬಸ್​ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡವರು. ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಕಾಸರಗೋಡು ನೆಲ್ಲಿಕಟ್ಟೆಯವನು ಎಂದು ತಿಳಿದುಬಂದಿದೆ.

ಇತ್ತೀಚಿನ ಘಟನೆಗಳು : ಕಬಕ ಹೊರವಲಯದ ಉರಿಮಜಲು ಎಂಬಲ್ಲಿ ಆಟೋ ಚಾಲಕರೊಬ್ಬರು ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇ 3ರಂದು ಮಧ್ಯಾಹ್ನ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ಬಂದಿದ್ದ ಅಶ್ರಫ್ (38) ವಿಶ್ರಾಂತಿಗಾಗಿ ಬಾಗಿಲು ಹಾಕಿಕೊಂಡು ಮಲಗಿದ್ದರು. ಸಂಜೆ ಅವರ ಪತ್ನಿ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಇತರರಿಗೆ ವಿಷಯ ತಿಳಿಸಿ ಬಾಗಿಲು ತೆರೆದಾಗ ಅಶ್ರಫ್ ಮಲಗಿದ್ದಲ್ಲೇ ಮೃತಪಟ್ಟಿದ್ದರು.

ಮನೆಯಲ್ಲಿ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ ಏತಡ್ಕ ಕುಬ್ಡಾಜೆ ನಿವಾಸಿ ರಾಧಾಕೃಷ್ಣ ಭಟ್ ಮತ್ತು ಪ್ರೇಮಲತಾ ದಂಪತಿ ಪುತ್ರ ಪ್ರಜ್ವಲ್ (26) ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ಮನೆಯಲ್ಲಿ ಕುಸಿದುಬಿದ್ದಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದರು.

ಕಾಸರಗೋಡು ಜಿಲ್ಲೆಯ ಪೆರ್ಲ ಪೇಟೆ ವ್ಯಾಪಾರಿ ಸಾದಿಕ್ (35) ಮನೆಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ 9.30ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಅವರು, ಅಂದು ರಾತ್ರಿ 10.30ಕ್ಕೆ ಹೃದಯಾಘಾತವಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಕಾಸರಗೋಡಿಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದರು. ಇವರು ಸ್ಥಳೀಯವಾಗಿ ವ್ಯಾಪಾರಿಯಾಗಿ ಜನಪ್ರಿಯರಾಗಿದ್ದರು.

ಇದನ್ನೂ ಓದಿ : ಹೆಚ್ಚಿದ ಬಿರು ಬಿಸಿಲ ತಾಪ; ಹೈರಾಣಾದ ರಾಯಚೂರಿನ ಜನ - Heat Wave

ETV Bharat Logo

Copyright © 2024 Ushodaya Enterprises Pvt. Ltd., All Rights Reserved.