ETV Bharat / state

ಹೆಚ್ಚಿದ ಬಿರು ಬಿಸಿಲ ತಾಪ; ಹೈರಾಣಾದ ರಾಯಚೂರಿನ ಜನ - Heat Wave

author img

By ETV Bharat Karnataka Team

Published : Apr 5, 2024, 10:37 PM IST

Updated : Apr 6, 2024, 9:01 AM IST

Raichur
ರಾಯಚೂರು

ರಾಯಚೂರು ಜಿಲ್ಲೆಯ ಜನ ರಣ ಬಿಸಿಲಿಗೆ ಹೈರಾಣಾಗುತ್ತಿದ್ದಾರೆ.

ಹೆಚ್ಚಿದ ಬಿರು ಬಿಸಿಲ ತಾಪ; ಹೈರಾಣಾದ ರಾಯಚೂರಿನ ಜನ

ರಾಯಚೂರು: ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದಾಗಿ ರೈತಾಪಿ ವರ್ಗ ಕಂಗಾಲಾಗಿದೆ. ಇದೀಗ ಬೇಸಿಗೆಯಲ್ಲಿ 0.5ರಿಂದ 1 ಡಿಗ್ರಿ ಸೆಲಿಯಸ್​ ಉಷ್ಣಾಂಶ ಕೂಡಾ ಹೆಚ್ಚಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬರುವ ರಾಯಚೂರಿನ ಜನರು ಹೈರಾಣಾಗುತ್ತಿದ್ದಾರೆ.

ರಾಯಚೂರು ಕೃಷಿ ವಿವಿಯ ಹವಾಮಾನ ಇಲಾಖೆ ತಾಂತ್ರಿಕ ಸಹಾಯಕರಾದ ಡಾ.ಶಾಂತಪ್ಪ ಮಾತನಾಡಿ, ''ಕಳೆದ 30 ವರ್ಷಗಳ ಮಾರ್ಚ್ ತಿಂಗಳ ಉಷ್ಣಾಂಶ ಗಮನಿಸಿದಾಗ ಸರಾಸರಿ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪ್ರಸಕ್ತ ಮಾರ್ಚ್ ತಿಂಗಳಲ್ಲಿ ಸುಮಾರು 37.8 ಉಷ್ಣಾಂಶ ದಾಖಲಾಗಿದ್ದು, 0.4 ರಿಂದ 0.5 ಹೆಚ್ಚಳವಾಗಿದೆ. ಅಲ್ಲದೇ ಮಾರ್ಚ್ ತಿಂಗಳಲ್ಲಿ 40.6 ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ಬೇಸಿಗೆ ಆರಂಭದ ದಿನಗಳಲ್ಲಿ ಬಿಸಿಲಿನ ಶಾಕ್ ಅ​ನ್ನು ಜನ ಅನುಭವಿಸುವಂತೆ ಮಾಡಿದೆ'' ಎಂದರು.

''ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯೊಂದರಲ್ಲಿಯೇ ಮುಂಗಾರು ಮತ್ತು ಹಿಂಗಾರಿಗೆ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಈ ಭೀಕರ ಬರದ ನೇರ ಪರಿಣಾಮವಾಗಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅತೀಹೆಚ್ಚು 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿಸಿಲಿನ ಪ್ರಖರತೆ ಏಪ್ರಿಲ್-ಮೇ ತಿಂಗಳಲ್ಲೂ ಸಹ ಮುಂದುವರೆದಿದೆ. ಏಪ್ರಿಲ್ ತಿಂಗಳಲ್ಲಿ ಸರಾಸರಿ 39.8 ಹಾಗೂ ಮೇ ತಿಂಗಳಲ್ಲಿ ಸರಾಸರಿ 40.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದ್ರೆ ಪ್ರಸಕ್ತ ಏಪ್ರಿಲ್ ತಿಂಗಳಲ್ಲಿ ಮುನ್ಸೂಚನೆಯಂತೆ 0.5ನಿಂದ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಕಂಡುಬರುತ್ತಿದೆ'' ಎಂದು ಡಾ.ಶಾಂತಪ್ಪ ತಿಳಿಸಿದ್ದಾರೆ.

''2016ರಲ್ಲಿ 43.8 ಡಿಗ್ರಿ ಗರಿಷ್ಠ ಉಷ್ಣಾಂಶ, 2020ರಲ್ಲಿ 43.0 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಿಸಿಲು ಪ್ರಮಾಣ ಏರಿಕೆಯಾಗಿರಲಿಲ್ಲ. ಆದರೆ ಈ ವರ್ಷದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ'' ಎಂದಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ, ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಪೈಕಿ ಹೆಚ್ಚಿನ ಬಿಸಿಲಿನ ತಾಪಮಾನ ದಾಖಲಾಗುವುದರಲ್ಲಿ ಕಲಬುರಗಿ ಮೊದಲ ಸ್ಥಾನ ಪಡೆದುಕೊಂಡರೆ, ಎರಡನೇ ಸ್ಥಾನ ರಾಯಚೂರು ಜಿಲ್ಲೆಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ತಾಪಮಾನ ಪ್ರತಿ ತಿಂಗಳು 0.5ರಿಂದ 1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವುದರಿಂದ ಅತಿಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಬೇಡವೆಂದರೂ ಬಿಸಿ ಗಾಳಿಯನ್ನು ಅನುಭವಿಸಬೇಕಾದ ಅನಿವಾರ್ಯತೆ ಬಂದಿದೆ.

ಇದನ್ನೂ ಓದಿ: ಗಡಿ ಜಿಲ್ಲೆಯಲ್ಲಿ ಬಿಸಿಲಿನಿಂದ ಜನರು ಹೈರಾಣ: ಹವಾಮಾನ ಇಲಾಖೆಯಿಂದ ತಾಪಮಾನ ಏರಿಕೆ ಎಚ್ಚರಿಕೆ - Rising Temperature

Last Updated :Apr 6, 2024, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.