ETV Bharat / state

ಚಿಟ್ ಚಾಟ್: ಬೆಂಗಳೂರು ಉತ್ತರ ನನಗೆ ಹೊಸದಲ್ಲ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಶೋಭಾ ಕರಂದ್ಲಾಜೆ - SHOBHA KARANDLAJE bengaluru north

author img

By ETV Bharat Karnataka Team

Published : Apr 17, 2024, 2:09 PM IST

Updated : Apr 17, 2024, 5:30 PM IST

shobha-karandlaje-says-people-of-bengaluru-north-definitely-bless-her
shobha-karandlaje-says-people-of-bengaluru-north-definitely-bless-her

ಕ್ಷೇತ್ರ ಬದಲಾಯಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜೊತೆಗೆ ನಮ್ಮ ಪ್ರತಿನಿಧಿ ನಡೆಸಿರುವ ಸಂದರ್ಶನ ಇಲ್ಲಿದೆ.

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಶೋಭಾ ಕರಂದ್ಲಾಜೆ

ಬೆಂಗಳೂರು: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಮೂರನೇ ಬಾರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಹೊಸ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮೋದಿ ಬಲ ಹೆಚ್ಚಿಸಲು ಬೆಂಗಳೂರು ಉತ್ತರ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ. ಈ ಕುರಿತು ಅಭ್ಯರ್ಥಿ ಶೋಭಾ ಕರಂದ್ಲಾಜೆ ಜೊತೆ ನಮ್ಮ ಪ್ರತಿನಿಧಿ ಪ್ರಶಾಂತ್ ಬಸವಾಪಟ್ಟಣ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ಬೆಂಗಳೂರು ಉತ್ತರದಲ್ಲಿ ಪ್ರಚಾರ ಯಾವ ರೀತಿ ನಡೆಯುತ್ತಿದೆ?: ಉತ್ತರ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿಯೂ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ. ಖುಷಿಯಾಗಿದ್ದು, ಎನೆರ್ಜಿಟಿಕ್ ಆಗಿದ್ದಾರೆ. ಕ್ಷೇತ್ರದಲ್ಲಿ ತುಂಬಾ ಚನ್ನಾಗಿ ಪ್ರಚಾರ ನಡೆಯುತ್ತಿದೆ. ನಾವು ನಮ್ಮ ಬೂತ್​​ಗಳನ್ನು ಕೇಂದ್ರೀಕರಿಸಿ ಪ್ರಚಾರ ಮಾಡುತ್ತಿದ್ದೇವೆ. ಬೂತ್​ ಮಟ್ಟದಲ್ಲಿ ಮನೆ ಮನೆಗೆ ಮೋದಿ ಸಂದೇಶ ತಲುಪಿಸಿ, ಮೋದಿ ಯೋಜನೆ, ಅಭಿವೃದ್ಧಿ ಕಾರ್ಯಗಳು, 10 ವರ್ಷದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಟ್ಟಾಗುತ್ತಿದ್ದಾರೆ. ವಾರ್ಡ್ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದೇವೆ.

ಪ್ರಚಾರಕ್ಕೆ ಜನತೆಯಿಂದ ಪ್ರತಿಕ್ರಿಯೆ?: ಕ್ಷೇತ್ರದ ಜನತೆ ತುಂಬಾ ಉತ್ಸಾಹದಲ್ಲಿದ್ದಾರೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಹಂಬಲ ಹೊಂದಿದ್ದಾರೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು ಮೋದಿಗೆ ಶಕ್ತಿ ತುಂಬಲು ಅಭ್ಯರ್ಥಿಗಳನ್ನು ಸಂಸತ್​​ಗೆ ಕಳಿಸಬೇಕು ಎನ್ನುವ ಉತ್ಸಾಹದಲ್ಲಿ ಕ್ಷೇತ್ರದ ಜನರಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರ ಬದಲಾವಣೆ ಪರಿಣಾಮ?: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ನನಗೆ ಹೊಸತಲ್ಲ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುವ ಯಶವಂತಪುರ ವಿಧಾನ ಸಭಾ ಕ್ಷೇತ್ರದಿಂದ ಶಾಸಕಿಯಾಗಿ, ಸಚಿವೆಯಾಗಿಯೂ ಕೆಲಸ ಮಾಡಿದ್ದೇನೆ. ಕಳೆದ 30 ವರ್ಷದಿಂದ ನಾನು ಪೂರ್ಣ ಕಾಲಿಕ ಕಾರ್ಯಕರ್ತೆಯಾಗಿ ಈ ಭಾಗದಲ್ಲಿ ಸಂಚಾರ ಮಾಡಿದ್ದೇನೆ. ನನಗೆ ಈ ಲೋಕಸಭಾ ಕ್ಷೇತ್ರದ ಪರಿಚಯ ಇದೆ. ಹಾಗಾಗಿ ಕಾರ್ಯಕರ್ತರು ಕೂಡ ನನ್ನನ್ನು ಒಪ್ಪಿಕೊಂಡಿದ್ದಾರೆ. ಎಲ್ಲ ಕಡೆ ಓಡಾಡುತ್ತಿದ್ದೇವೆ. ಆದರೂ ಹೋಗಿರದ ಕೆಲವು ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಆ ಸಮಸ್ಯೆಗಳಲ್ಲಿ ಕೇಂದ್ರದಿಂದ ಯಾವುದನ್ನು ಮಾಡಿ ಪರಿಹರಿಸಬಹುದೋ ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಆರಂಭಿಕ ಅಡ್ಡಿ ನಿವಾರಣೆಯಾಗಿದೆಯಾ?: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದಾಗ ಕ್ಷೇತ್ರದಲ್ಲಿ ನನಗೆ ವಿರೋಧ ವ್ಯಕ್ತವಾಗಿರಲಿಲ್ಲ. ಯಾವುದೆ ಅಡ್ಡಿ ಆತಂಕ ಇರಲಿಲ್ಲ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಇದನ್ನು ಹಬ್ಬಿಸಿದ್ದವು. ಆದರೆ, ನಮ್ಮ ಕಾರ್ಯಕರ್ತರ ಮನಸ್ಸಿನಲ್ಲಿ ಯಾವುದೇ ಗೊಂದಲ ಇರಲಿಲ್ಲ, ಆರಂಭದಿಂದಲೇ ನನ್ನನ್ನು ಅವರ ಅಭ್ಯರ್ಥಿಯನ್ನಾಗಿ ಸ್ವೀಕಾರ ಮಾಡಿ, ಸ್ವಾಗತ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಖಂಡ ಶ್ರೀನಿವಾಸಮೂರ್ತಿ ಸೇರ್ಪಡೆಯಿಂದ ಆಗುವ ಲಾಭವೇನು?: ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ಬಿಜೆಪಿ ಅತ್ಯಂತ ದುರ್ಬಲವಾಗಿರುವ ಕ್ಷೇತ್ರವಾಗಿದೆ. ಅಲ್ಲಿ ನಮ್ಮ ಜನಸಂಖ್ಯೆಯೂ ಕಡಿಮೆ ಇದೆ. ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಕಾಂಗ್ರೆಸ್​ ಶಾಸಕರಾಗಿದ್ದಾಗ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯಲ್ಲಿ ಅವರ ಮನೆ ಸುಟ್ಟು ಹಾಕಲಾಗಿತ್ತು, ಅವರು ಕಾಂಗ್ರೆಸ್ ಎಂದು ನೋಡದೇ ನಾನು ಆಗ ಅವರ ಮನೆಗೆ ಹೋಗಿದ್ದೆ. ಇಂದು ಅವರು ಮೋದಿಯನ್ನು ಗೆಲ್ಲಿಸಬೇಕು. ಮೋದಿಗೆ ಶಕ್ತಿ ತುಂಬಬೇಕು ಎಂದು ಬಿಜೆಪಿಗೆ ಬಂದಿರುವುದು ತುಂಬಾ ಆನಂದವಾಗಿದೆ. ಅವರ ಕಾರ್ಯಕರ್ತರೂ ಬಂದದ್ದಾರೆ ಹಾಗಾಗಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ಇಮ್ಮಡಿಯಾಗಿದೆ.

ಪ್ರಚಾರಕ್ಕೆ ಬರಲಿರುವ ರಾಷ್ಟ್ರೀಯ ನಾಯಕರು: ಪ್ರಧಾನಿ ನರೇಂದ್ರ ಮೋದಿ ಅರಮನೆ ಮೈದಾನದಲ್ಲಿ ಏಪ್ರಿಲ್ 20 ರಂದು ಸಂಜೆ 5.30ಕ್ಕೆ ಬರಲಿದ್ದಾರೆ. ಇದರ ಜೊತೆ ಕೆಲವೇ ದಿನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬ್ಯಾಟರಾಯನಪುರಕ್ಕೆ ಬರಲಿದ್ದಾರೆ. ಈ ಇಬ್ಬರು ನಾಯಕರು ಬಂದು ಬೆಂಗಳೂರಿನಲ್ಲಿ ನಮ್ಮ ಪರ ಪ್ರಚಾರ ಮಾಡಲಿದ್ದಾರೆ.

ಮತದಾರರಿಗೆ ಏನು ಹೇಳುತ್ತೀರಿ?: ಪ್ರಧಾನಿ ನರೇಂದ್ರ ಮೋದಿ ಮೇಲೆ ನಂಬಿಕೆ ಇಡಿ ಎಂದು ಕ್ಷೇತ್ರದ ಜನತೆಗೆ ಮನವಿ ಮಾಡುತ್ತೇನೆ. ದೇಶದ ರಕ್ಷಣೆ ಮತ್ತು ದೇಶದ ಅಭಿವೃದ್ಧಿ ಮೋದಿಯಿಂದ ಮಾತ್ರ ಸಾಧ್ಯ ಎನ್ನುವುದು ಈಗಾಗಲೇ ಸಾಬೀತಾಗಿದೆ, ಬೆಂಗಳೂರು ಉತ್ತರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮೂಲಭೂತ ಸೌಕರ್ಯಗಳ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಕೆಲವು ಕಡೆ ರೈಲ್ವೆ ಕೆಳಸೇತುವೆ, ಮೇಲ್ಸೇತುವೆ ಆಗಬೇಕಾಗಿದೆ. ಇದೆಲ್ಲವನ್ನೂ ಬರುವ ದಿನದಲ್ಲಿ ಕೇಂದ್ರದಿಂದ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡಲು ನಾನು ನಮ್ಮ ಶಾಸಕರು, ಕಾರ್ಯಕರ್ತರ ಜೊತೆ ಸೇರಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ: ಕರಡಿ ಸಂಗಣ್ಣ ಕಾಂಗ್ರೆಸ್​ ಸೇರ್ಪಡೆಗೆ ಬಿಎಸ್​ವೈ ಅಸಮಾಧಾನ

Last Updated :Apr 17, 2024, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.