ETV Bharat / state

ಭಕ್ತರಿಗೆ ಸೂಚನೆ: ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಇಂದು ಅವಕಾಶವಿಲ್ಲ - Savadatti Yallamma Temple

author img

By ETV Bharat Karnataka Team

Published : May 7, 2024, 7:14 AM IST

Updated : May 7, 2024, 12:37 PM IST

Savadatti Yallamma Devi Temple
ಸವದತ್ತಿ ಯಲ್ಲಮ್ಮದೇವಿ ಸನ್ನಿಧಿ (ETV Bharat)

ಲೋಕಸಭೆ ಚುನಾವಣೆಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಪ್ರಸಿದ್ಧ ಸವದತ್ತಿ ಯಲ್ಲಮ್ಮದೇವಿಯ ದರ್ಶನ ವ್ಯವಸ್ಥೆಯಲ್ಲಿ ಇಂದು ಬದಲಾವಣೆ ಮಾಡಲಾಗಿದೆ.

ಎಸ್.ಪಿ.ಬಿ ಮಹೇಶ (ETV Bharat)

ಬೆಳಗಾವಿ: ರಾಜ್ಯದಲ್ಲಿ ಇಂದು ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯಲಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಈಗಾಗಲೇ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ಜರುಗಿದೆ. ಇಂದು ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಇಂದು ಮತದಾನ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಭಕ್ತರು ಆಗಮಿಸದೇ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಯಲ್ಲಮ್ಮದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ ಮಹೇಶ ಮನವಿ ಮಾಡಿದ್ದಾರೆ.

ಧಾರ್ಮಿಕ ಆಚರಣೆ ದೇವಸ್ಥಾನಕ್ಕೆ ಮಾತ್ರ ಸೀಮಿತ: ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಂದು ಸವದತ್ತಿ ಯಲ್ಲಮ್ಮದೇವಿಯ ದರ್ಶನ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿದೆ. ದೇವಿಯ ದರ್ಶನ, ಪೂಜಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಧಾರ್ಮಿಕ ಆಚರಣೆ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿರಲಿದೆ. ಹಾಗಾಗಿ ಭಕ್ತರು ಗುಡ್ಡಕ್ಕೆ ಆಗಮಿಸಬೇಡಿ" ಎಂದು ಕೋರಿದ್ದಾರೆ. ಇದೇ ವೇಳೆ, ಚುನಾವಣೆಯ ಹಿನ್ನೆಲೆಯಲ್ಲಿ ರಜೆ ಇದೆ ಎಂದು ಯಲ್ಲಮ್ಮಗುಡ್ಡಕ್ಕೆ ಹೋದರೆ ನಿಮಗೆ ದೇವಿಯ ದರ್ಶನಕ್ಕೆ ಅವಕಾಶ ಸಿಗುವುದಿಲ್ಲ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಶಕ್ತಿದೇವಿ ಪ್ರಸಿದ್ಧಿಯ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತೀ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಅಲ್ಲದೇ ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ರಜೆ ಇರುವುದರಿಂದ ಭಕ್ತರ ದಂಡೇ ಗುಡ್ಡಕ್ಕೆ ಹರಿದು ಬರುತ್ತದೆ. ಈ ಬಾರಿ ಮಂಗಳವಾರವೇ ಮತದಾನ ನಡೆಯುತ್ತಿದ್ದು ದೇವಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ತಪ್ಪದೇ ವೋಟ್‌ ಮಾಡಿ - Lok Sabha Election

ಎಲ್ಲೆಲ್ಲಿ ಮತದಾನ?: ಬೆಳಗಾವಿ, ಚಿಕ್ಕೋಡಿ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಹಾವೇರಿ, ಧಾರವಾಡ, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗಾವಿ ನಗರದ ವನಿತಾ ವಿದ್ಯಾಲಯದಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆದಿದೆ.

ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯಲ್ಲಿ 41,05,225 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 4,524 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 26,500 ಸಿಬ್ಬಂದಿಯನ್ನು ನೇಮಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯ ಹೊಣೆ ಹೊತ್ತಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣಾ ಪ್ರಕ್ರಿಯೆ ವೀಕ್ಷಣೆ: ಬೆಳಗಾವಿಗೆ ಆಗಮಿಸಿದ 5 ದೇಶಗಳ 10 ಪ್ರತಿನಿಧಿಗಳು - 10 Delegates visit to belagavi

Last Updated :May 7, 2024, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.