ETV Bharat / technology

ಹೀಲಿಯಂ ಸೋರಿಕೆ: ಬೋಯಿಂಗ್​ ಸ್ಟಾರ್​ಲೈನರ್​ನ ಮಾನವಸಹಿತ ಉಡಾವಣೆ ಮತ್ತೆ ಮುಂದಕ್ಕೆ - Boeing Starliner

author img

By ETV Bharat Karnataka Team

Published : May 19, 2024, 2:49 PM IST

ಬೋಯಿಂಗ್​ ಸ್ಟಾರ್​ಲೈನರ್​ನ ಮಾನವಸಹಿತ ಬಾಹ್ಯಾಕಾಶ ನೌಕೆಯ ಉಡಾವಣೆ ಮತ್ತೆ ವಿಳಂಬವಾಗಿದೆ.

ಬೋಯಿಂಗ್​ ಸ್ಟಾರ್​ಲೈನರ್​ನ ಮಾನವಸಹಿತ ಉಡಾವಣೆ ಮತ್ತೆ ಮುಂದಕ್ಕೆ
ಬೋಯಿಂಗ್​ ಸ್ಟಾರ್​ಲೈನರ್​ನ ಮಾನವಸಹಿತ ಉಡಾವಣೆ ಮತ್ತೆ ಮುಂದಕ್ಕೆ (ians)

ನವದೆಹಲಿ : ಬೋಯಿಂಗ್​ ಸ್ಟಾರ್​ಲೈನರ್​ ನೌಕೆಯ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮತ್ತೊಮ್ಮೆ ವಿಳಂಬವಾಗಿದೆ. ಸ್ಟಾರ್​ಲೈನರ್​ ಕ್ಯಾಪ್ಸೂಲ್​ನ ಥ್ರಸ್ಟರ್ ಒಂದರಲ್ಲಿ ಹೀಲಿಯಂ ಸೋರಿಕೆಯಾದ ಕಾರಣದಿಂದ ಐತಿಹಾಸಿಕ ಉಡಾವಣೆಯನ್ನು ರದ್ದು ಮಾಡಲಾಗಿದೆ ಎಂದು ನಾಸಾ ಶನಿವಾರ ತಿಳಿಸಿದೆ. ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಗುರಿಯನ್ನು ಹೊಂದಿರುವ ಸ್ಟಾರ್​ಲೈನರ್​ ಬಾಹ್ಯಾಕಾಶ ನೌಕೆಯು ಈಗ ಮೇ 25 ರಂದು ಹಾರುವ ನಿರೀಕ್ಷೆಯಿದೆ.

ಕಳೆದ ಕೆಲ ವರ್ಷಗಳಿಂದ ಹಲವಾರು ಬಾರಿಯ ವಿಳಂಬಗಳ ನಂತರ ಸ್ಟಾರ್​ಲೈನರ್​ನ ಪ್ರಥಮ ಮಾನವ ಸಹಿತ ಉಡಾವಣೆಯನ್ನು ಮೇ 7 ರಂದು ಯೋಜಿಸಲಾಗಿತ್ತು. ಆದರೆ ಯುನೈಟೆಡ್ ಲಾಂಚ್ ಅಲೈಯನ್ಸ್ ಅಟ್ಲಾಸ್ ವಿ ರಾಕೆಟ್​ನ ಮೇಲಿನ ಹಂತದಲ್ಲಿ ವಾಲ್ವ್ ಸಮಸ್ಯೆಯಿಂದಾಗಿ ಉಡಾವಣೆಗೆ ಎರಡು ಗಂಟೆಗಳ ಮೊದಲು ಉಡಾವಣೆಯನ್ನು ರದ್ದು ಮಾಡಲಾಗಿತ್ತು. ನಂತರ ಮೇ 10ಕ್ಕೆ ಉಡಾವಣೆಯನ್ನು ನಿಯೋಜಿಸಲಾಗಿತ್ತಾದರೂ ಅವತ್ತೂ ಉಡಾವಣೆ ಸಾಧ್ಯವಾಗಲಿಲ್ಲ. ನಂತರ ಮೇ 21ಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಹೀಲಿಯಂ ಸೋರಿಕೆಯಿಂದ ಮತ್ತೊಮ್ಮೆ ನೌಕೆಯ ಉಡಾವಣೆ ವಿಳಂಬವಾಗಿದೆ.

ಏತನ್ಮಧ್ಯೆ, ಉಡಾವಣಾ ಪ್ಯಾಡ್​ನಿಂದ ಹಿಂಪಡೆಯಲಾದ ಯುಎಲ್ಎ ಅಟ್ಲಾಸ್ ವಿ ರಾಕೆಟ್ ಮತ್ತು ಬೋಯಿಂಗ್​ನ ಸ್ಟಾರ್​ಲೈನರ್ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದ ಬಾಹ್ಯಾಕಾಶ ಉಡಾವಣಾ ಸಂಕೀರ್ಣ -41 ರ ವರ್ಟಿಕಲ್ ಇಂಟಿಗ್ರೇಶನ್ ಫೆಸಿಲಿಟಿಯಲ್ಲಿ ಉಳಿದಿವೆ. ಉಡಾವಣಾ ಪೂರ್ವ ಕಾರ್ಯಾಚರಣೆಗಳು ಪ್ರಗತಿಯಾಗುತ್ತಿದ್ದಂತೆ ಗಗನಯಾತ್ರಿಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ಹೂಸ್ಟನ್​ನಲ್ಲಿ ಕ್ವಾರಂಟೈನ್ ನಲ್ಲಿರಲಿದ್ದಾರೆ. ಭವಿಷ್ಯದ ನಾಸಾ ಕಾರ್ಯಾಚರಣೆಗಳಿಗಾಗಿ ಗಗನಯಾತ್ರಿಗಳು ಮತ್ತು ಸರಕುಗಳನ್ನು ಭೂಮಿಯ ಕೆಳ ಕಕ್ಷೆಗೆ ಮತ್ತು ಅದರಾಚೆಗೆ ಸಾಗಿಸುವ ಗುರಿಯನ್ನು ಸ್ಟಾರ್​ಲೈನರ್ ಮಿಷನ್ ಹೊಂದಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿಯನ್ನು ತಲುಪಿಸಲು ಅಗತ್ಯವಾಗಿರುವ ಎರಡನೇ ವಾಣಿಜ್ಯ ವಾಹನವನ್ನು ಯಶಸ್ವಿಯಾಗಿ ಉಡಾವಣೆ ಮಾಡುವುದು ನಾಸಾಗೆ ಮಹತ್ವದ್ದಾಗಿದೆ. ಹೀಗಾಗಿ ಸ್ಟಾರ್​ಲೈನರ್ ಮಿಷನ್ ಮಹತ್ವ ಪಡೆದುಕೊಂಡಿದೆ. ಆದರೆ ಎಲೋನ್ ಮಸ್ಕ್ ಅವರ ನಾಯಕತ್ವದಲ್ಲಿ ಸ್ಪೇಸ್ಎಕ್ಸ್ 2020 ರಲ್ಲಿಯೇ ತನ್ನ ಡ್ರ್ಯಾಗನ್ ಕ್ಯಾಪ್ಸೂಲ್​ನೊಂದಿಗೆ ಈ ಮೈಲಿಗಲ್ಲನ್ನು ಸಾಧಿಸಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ಹಾರಲು ರಷ್ಯಾದ ರಾಕೆಟ್​ಗಳ ಮೇಲಿನ ಹಲವಾರು ದಶಕಗಳ ಅವಲಂಬನೆಯನ್ನು ಸ್ಪೇಸ್​ಎಕ್ಸ್​ ಕೊನೆಗೊಳಿಸಿದೆ.

ಇದನ್ನೂ ಓದಿ : ಹಣ್ಣು ಮಾಗಿಸಲು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವಂತಿಲ್ಲ: ಎಫ್ಎಸ್ಎಸ್ಎಐ ಎಚ್ಚರಿಕೆ - FRUIT RIPENING

ETV Bharat Logo

Copyright © 2024 Ushodaya Enterprises Pvt. Ltd., All Rights Reserved.