ETV Bharat / state

ಎಂಎಸ್​ಪಿ ಜಾರಿ, ಕೇಂದ್ರ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

author img

By ETV Bharat Karnataka Team

Published : Feb 22, 2024, 10:47 PM IST

ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಕೇಂದ್ರದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಬೆಂಗಳೂರು: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಎಂ.ಎಸ್. ಸ್ವಾಮಿನಾಥ್ ವರದಿ ಜಾರಿಗೆ ಒತ್ತಾಯಿಸಿ ಹಾಗೂ ಕೇಂದ್ರದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಏಕಾಏಕಿ ವಿಧಾನಸಭೆಯಲ್ಲಿ ಎರಡು ನಿರ್ಣಯಗಳನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಂಡನೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟಿತು. ಬಿಜೆಪಿ ಸದಸ್ಯರ ತೀವ್ರ ವಿರೋಧ, ಗದ್ದಲದ ಮಧ್ಯೆ ಎರಡೂ ನಿರ್ಣಯಗಳಿಗೆ ಸದನದಲ್ಲಿ ಅಂಗೀಕಾರ ಪಡೆಯಲಾಯಿತು. ನಿರ್ಣಯದ ಪ್ರತಿ ಹರಿದು ಬಿಸಾಡಿದ ಬಿಜೆಪಿ ಶಾಸಕರು, ಧರಣಿ ನಡೆಸಿದರು.

ಕೇಂದ್ರ ಅನುದಾನದಲ್ಲಿ ಅನ್ಯಾಯವಾಗದಂತೆ ಒತ್ತಾಯಿಸಿ ನಿರ್ಣಯ: ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ, ನಾಗರೀಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತು ಕರ್ನಾಟಕ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗಬಾರದೆಂದು ಈ ಸದನ ಒಕ್ಕೋರಲಿನಿಂದ ಒತ್ತಾಯಿಸಿ ಅಧಿಕೃತ ನಿರ್ಣಯವನ್ನು ಮಂಡಿಸಿದರು.

ನಿರ್ಣಯದಲ್ಲಿ ಕೇಂದ್ರದ ಪುರಸ್ಕೃತ ಯೋಜನೆಗಳಿಗೆ ದೊರಕಬೇಕಾದ ಅನುದಾನ ಕೂಡ ಗಣನೀಯವಾಗಿ ಕಡಿತಗೊಂಡಿದೆ. 2018-19ಕ್ಕೆ ಹೋಲಿಸಿದರೆ 2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರವು ದುಪ್ಪಟ್ಟಾದ್ದರೂ ಸಹ ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಸಹಾಯಾನುದಾನದಲ್ಲಿ ಪ್ರಮಾಣಾನುಗುಣವಾದ ಹೆಚ್ಚಳ ಕಂಡಿರುವುದಿಲ್ಲ. ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಶಿಫಾರಸ್ಸು ನೀಡುತ್ತದೆ. ತೆರಿಗೆಯ ಜೊತೆಗೆ ಸೆಸ್ ಮತ್ತು ಸರ್ಚಾಜ್‌ಗಳನ್ನು ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರವು ರಾಜಸ್ವ ಸಂಗ್ರಹಣೆ ಮಾಡುತ್ತದೆ.

ಕೇಂದ್ರ ಸರ್ಕಾರವು ಸಂಗ್ರಹಿಸುವ ಈ ಸೆಸ್ ಮತ್ತು ಸರ್ಚಾಜ್​ಗಳು ರಾಜ್ಯಗಳಿಗೆ ಹಂಚಿಕೆಯಾಗದ ಕಾರಣ ನಮ್ಮ ರಾಜ್ಯಕ್ಕೆ 2017-18 ರಿಂದ 2023-24 ರವರೆಗೂ ಅಂದಾಜು 45,322 ಕೋಟಿ ರೂ.ಗಳು ನಷ್ಟವಾಗಿದೆ ಎಂದು ವಿವರಿಸಲಾಗಿದೆ. ಆವೈಜ್ಞಾನಿಕ ಜಿಎಸ್‌ಟಿ ವ್ಯವಸ್ಥೆ, ಸೆಸ್ ಮತ್ತು ಸರ್ಚಾಜ್‌ಗಳನ್ನು ಹೇರಿಕೆ ಮಾಡಿ ತೆರಿಗೆ ಪಾಲಿನಲ್ಲಿ ನಷ್ಟ, 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಂತೆ ವಿಶೇಷ ಹಾಗೂ ರಾಜ್ಯ ಕೇಂದ್ರಿತ ಅನುದಾನವನ್ನು ನೀಡದಿರುವುದು ಮತ್ತು 15ನೇ ಹಣಕಾಸು ಆಯೋಗವು ಹಿಂದಿನ ಹಣಕಾಸು ಆಯೋಗಕ್ಕಿಂತ ಶೇ.23 ರಷ್ಟು ಕಡಿಮೆ ಪಾಲನ್ನು ಹಂಚಿಕೆ ಮಾಡಿದ್ದರಿಂದ 2017- 18 ರಿಂದ ನಮಗೆ 1,78,189 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಈ ಎಲ್ಲಾ ಕಾರಣಗಳಿಂದ ರಾಜ್ಯಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಹಾಗೂ ಅನ್ಯಾಯವನ್ನು ಸರ್ಕಾರ ಖಂಡಿಸುತ್ತದೆ ಎಂದು ತಿಳಿಸಿದೆ.

ಎಂಎಸ್​ಪಿಗೆ ಒತ್ತಾಯಿಸಿ ನಿರ್ಣಯ: ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಒತ್ತಾಯಿಸಿ ಎರಡನೇ ನಿರ್ಣಯ ಮಂಡಿಸಲಾಯಿತು. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒತ್ತಾಯಿಸುತ್ತದೆ ಎಂದು ನಿರ್ಣಯ ಕೈಗೊಳ್ಳಲಾಯಿತು.

ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕೆಂಬುದು ಭಾರತ ದೇಶದ ಪ್ರತಿಯೊಬ್ಬ ರೈತನ ಆಶಯ. ಈ ಸದಾಶಯವನ್ನು ಅನುಷ್ಠಾನಗೊಳಿಸಬೇಕೆಂದು ಮತ್ತು ಕೃಷಿಯನ್ನು ಲಾಭದಾಯಕ ಗೊಳಿಸಬೇಕೆಂಬುದು ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರೀಕ ಸರ್ಕಾರಗಳ ಒತ್ತಾಸೆಯಾಗಿದೆ. ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50%ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ತನ್ಮೂಲಕ ಹಸಿರು ಕ್ರಾಂತಿಯನ್ನು ಸಾಧಿಸಿ ರಾಷ್ಟ್ರದಲ್ಲಿ ಕೃಷಿಯನ್ನು ಅವಲಂಬಿತ ಉದ್ಯೋಗವನ್ನಾಗಿ ನಿರೀಕ್ಷಿಸಬಹುದೆಂಬ ನಿರೀಕ್ಷೆಯನ್ನು ಸಾಧಿಸುವಲ್ಲಿ ಪ್ರಗತಿಯನ್ನು ಸಾಧಿಸಿಲ್ಲ ಅಥವಾ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ತರುವಲ್ಲಿ ವಿಫಲವಾಗಿವೆ ಎಂದು ವಿವರಿಸಿದೆ.

ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ಸುನಿಶ್ಚಿತಗೊಳಿಸುವ (ಗ್ಯಾರಂಟಿ) ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ನಿರ್ಧರಿಸುವಂತೆ ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳವಳಿ, ಆಂದೋಲನ ಮತ್ತು ಹೋರಾಟ ಅನಿವಾರ್ಯವಾಗಿದೆ.

ರಾಷ್ಟ್ರದ ಅನ್ನದಾತರೆನ್ನಿಸಿಕೊಳ್ಳುವ ಮತ್ತು ಅರ್ಥವ್ಯವಸ್ಥೆಯ ಸರ್ವಾಂಗೀಣ ಅಭಿವೃದ್ಧಿಯ ಬೇರ್ಪಡಿಸಲಾಗದ ಭಾಗವಾಗಿರುವ ಕೃಷಿಕರ ಆದಾಯವನ್ನು ಸಂರಕ್ಷಿಸುವ ತನ್ಮೂಲಕ ಕೃಷಿಯನ್ನು ಲಾಭದಾಯಕಗೊಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಮಾನದಂಡವನ್ನು ಇತರೆ ಕೃಷಿ ಉತ್ಪನ್ನಗಳಿಗೂ ಅನುಸರಿಸುವ ಕ್ರಮಗಳನ್ನು ಕರ್ನಾಟಕ ಬೆಂಬಲಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ: ಬಿಜೆಪಿ‌ ಸಭಾತ್ಯಾಗದ ನಡುವೆ ವಿಧೇಯಕಕ್ಕೆ ಪರಿಷತ್ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.