ETV Bharat / state

ಕರ್ನಾಟಕಕ್ಕೆ 3,400 ಕೋಟಿ ರೂ. ಬರ ಪರಿಹಾರ ಬಿಡುಗಡೆ: ಸುಪ್ರೀಂ ಕೋರ್ಟ್​ಗೆ ಕೇಂದ್ರದ ಮಾಹಿತಿ - Drought Relief

author img

By ETV Bharat Karnataka Team

Published : Apr 29, 2024, 6:58 PM IST

Released Rs 3,400 Crore to Karnataka for Drought Relief: Centre to SC
Released Rs 3,400 Crore to Karnataka for Drought Relief: Centre to SC

ಕರ್ನಾಟಕಕ್ಕೆ 3,400 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​​ಗೆ ಮಾಹಿತಿ ನೀಡಿದೆ.

ನವದೆಹಲಿ: ರಾಜ್ಯದಲ್ಲಿನ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸುಮಾರು 3,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್​ಡಿಆರ್​ಎಫ್) ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ಕರ್ನಾಟಕ ಸರ್ಕಾರಕ್ಕೆ ಕೇಂದ್ರವು ಒಂದಿಷ್ಟಾದರೂ ಹಣ ಬಿಡುಗಡೆ ಮಾಡಿದೆಯೇ ಎಂದು ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರನ್ನು ಕೇಳಿತು. ಇದಕ್ಕುತ್ತರಿಸಿದ ಎಜಿ, 3,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯ ಸರ್ಕಾರವು 18,000 ಕೋಟಿ ರೂ. ನೀಡಬೇಕೆಂದು ಕೋರಿತ್ತು, ಆದರೆ 3,450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅಂತರ್ ಸಚಿವಾಲಯದ ತಂಡವು ಪರಿಶೀಲನೆ ನಡೆಸಿದ್ದು, ಅದು ಉಪ ಸಮಿತಿಗೆ ವರದಿಯನ್ನು ಕಳುಹಿಸಿದೆ ಎಂದು ಹೇಳಿದರು.

ಅಂತರ್​ ಸಚಿವಾಲಯದ ತಂಡ ಏನೇ ಶಿಫಾರಸು ಮಾಡಿದ್ದರೂ ಅದನ್ನು ಉಪಸಮಿತಿಯು ಗಣನೆಗೆ ತೆಗೆದುಕೊಂಡಿದೆ ಎಂದು ವೆಂಕಟರಮಣಿ ಹೇಳಿದರು.

ಬರದಿಂದಾಗಿ ಜೀವನೋಪಾಯವು ಸಂಕಷ್ಟಕ್ಕೆ ಸಿಲುಕಿರುವವರ ಕುಟುಂಬಗಳಿಗೆ ಉಚಿತ ಪರಿಹಾರಕ್ಕಾಗಿ ಈ ಮೊತ್ತವನ್ನು ಕೋರಲಾಗಿದೆ ಎಂದು ಸಿಬಲ್ ಹೇಳಿದರು. ನೀಡಿದ ಮೊತ್ತಕ್ಕೆ ನಾವು ಕೃತಜ್ಞರಾಗಿದ್ದೇವೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಿಬಲ್ ಹೇಳಿದರು.

ಅಂತರ್ ಸಚಿವಾಲಯದ ತಂಡವು ರಾಜ್ಯಕ್ಕೆ ಹೋಗಿ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಉಪ ಸಮಿತಿಗೆ ವರದಿ ನೀಡಿದೆ. ನಂತರ ವರದಿಯನ್ನು ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು ಎಂದು ಸಿಬಲ್ ಹೇಳಿದರು. ಅಂತರ್ ಸಚಿವಾಲಯದ ವರದಿ ನಮ್ಮ ಬಳಿ ಇಲ್ಲ ಮತ್ತು ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಅವರು ಒತ್ತಾಯಿಸಿದರು. ಅಲ್ಲದೆ ವರದಿಗೆ ಅನುಗುಣವಾಗಿ, ಏನೇ ನಿರ್ಧರಿಸಿದರೂ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಂಡದ ಶಿಫಾರಸುಗಳ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಕೇಳಿತು. "ಶಿಫಾರಸುಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಎಜಿ ಹೇಳಿದರು. ಅಂತರ್‌ಸಚಿವಾಲಯದ ತಂಡದ ಶಿಫಾರಸನ್ನು ತನ್ನ ಮುಂದೆ ಇಡುವಂತೆ ನ್ಯಾಯಪೀಠ ಸೂಚಿಸಿತು. ಟಿಪ್ಪಣಿ ಸಲ್ಲಿಸುವುದಾಗಿ ಎಜಿ ಹೇಳಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ನಿಗದಿಪಡಿಸಿದೆ. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯವು 2023 ರ ಸೆಪ್ಟೆಂಬರ್​ನಲ್ಲಿ ಎನ್‌ಡಿಆರ್​ಎಫ್ ಅಡಿಯಲ್ಲಿ 18,174 ಕೋಟಿ ರೂ. ನೀಡುವಂತೆ ಕೋರಿತ್ತು. 2023ರ ಸೆಪ್ಟೆಂಬರ್ 13ರಂದು ಕರ್ನಾಟಕ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಬರದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 35,162 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಇದನ್ನೂ ಓದಿ: ಸಂದೇಶಖಾಲಿ ಪ್ರಕರಣ: ಪ.ಬಂಗಾಳ ಸರ್ಕಾರ ಖಾಸಗಿ ವ್ಯಕ್ತಿಗಳ ಹಿತಾಸಕ್ತಿ ರಕ್ಷಣೆಗೆ ಮುಂದಾಗಿರುವುದೇಕೆ? ಸುಪ್ರೀಂ ಕೋರ್ಟ್​ - Sandeshkhali Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.