ETV Bharat / state

ಕಾಡನೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ: ಕಟಿಂಗ್ ಶಾಪ್​ಗೆ ಮುತ್ತಿಗೆ ಹಾಕಿದ ದಲಿತ ಸಂಘಟನೆ

author img

By ETV Bharat Karnataka Team

Published : Feb 19, 2024, 1:18 PM IST

Updated : Feb 19, 2024, 1:43 PM IST

Refusal to do haircuts to Dalits in Kadanur village: Dalit organization laid siege to cutting shop
ಕಾಡನೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ: ಕಟಿಂಗ್ ಶಾಪ್​ಗೆ ಮುತ್ತಿಗೆ ಹಾಕಿದ ದಲಿತ ಸಂಘಟನೆ

ಕಟಿಂಗ್​ ಶಾಪ್​ಗಳಿಗೆ ಮುತ್ತಿಗೆ ಹಾಕಿರುವ ದಲಿತ ಸಂಘಟನೆಗಳು ಸಾಂಕೇತಿಕವಾಗಿ ಕ್ಷೌರ ಮಾಡಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದರು.

ದೊಡ್ಡಬಳ್ಳಾಪುರ: ತಾಲೂಕಿನ ಕಾಡನೂರು ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದಲಿತರಿಗೆ ಕ್ಷೌರ ಮಾಡದೇ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ಇದರ ವಿರುದ್ಧ ಸಿಡಿದೆದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆಗೆ ಕಟಿಂಗ್ ಶಾಪ್​ಗೆ ಮುತ್ತಿಗೆ ಹಾಕಿ, ದಲಿತರು ಕ್ಷೌರ ಮಾಡಿಸಿಕೊಳ್ಳುವ ಮೂಲಕ ಅನಿಷ್ಠ ಪದ್ಧತಿಗೆ ಅಂತ್ಯ ಹಾಡಿದ್ದಾರೆ.

ಕಾಡನೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ: ಕಟಿಂಗ್ ಶಾಪ್​ಗೆ ಮುತ್ತಿಗೆ ಹಾಕಿದ ದಲಿತ ಸಂಘಟನೆ

ಈ ವೇಳೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ರಾಮು ನೇರಳೆಘಟ್ಟ, "ಕ್ಷೌರ ಅಂಗಡಿಗೆ ಮುತ್ತಿಗೆ ಹಾಕಿದ್ದು, ಸಾಂಕೇತಿಕವಾಗಿ ನಮ್ಮ ದಲಿತ ಮುಖಂಡರೇ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ಅಂತ್ಯಗಳಿಸಿದ್ದೇವೆ. 21ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದರೂ ನಮ್ಮ ಮಧ್ಯೆ ಈ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿರುವುದು ವಿಪರ್ಯಾಸವೇ ಸರಿ. ಮಾನವೀಯತೆ ಮರೆತು ಮೇಲು ಕೀಳು ಎಂಬ ಭಾವನೆಯಲ್ಲಿ ಜೀವನ ಸಾಗಿಸುತ್ತಿರುವ ಮೌಢ್ಯ ಸಮಾಜ ಬದಲಾಗಬೇಕಿದೆ. ಇಂತಹ ಸಮಸ್ಯೆಗಳ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟ ಸದಾ ಜಾಗೃತ" ಎಂದು ತಿಳಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಎಂ.ಪಿ. ಗಂಗಾಧರ್ ಮಾತನಾಡಿ, "ಸ್ಥಳೀಯ ದಲಿತರ ಮನೆಗಳಿಗೆ ಭೇಟಿಕೊಟ್ಟ ನಮಗೆ ಇಲ್ಲಿನ ಸಮಸ್ಯೆ ಅರಿವಾಯಿತು. ಸಮಾಜದಲ್ಲಿ ಇನ್ನೂ ಜಾತಿ ಭೇದ ಭಾವ ಜೀವಂತವಾಗಿರುವುದು ನಾಚಿಕೆಯ ವಿಷಯ. ನಾವು ಎಲ್ಲರಂತೆ ಮನುಷ್ಯರಲ್ಲವೇ ನಮಗೆ ಯಾಕೆ ಈ ಅನ್ಯ ದೋರಣೆ? ವೇದಿಕೆಗಳ ಮೇಲೆ ಮಾತುಗಳಲ್ಲಿ ಹೇಳುವ ಸಮಾನತೆ ಇಲ್ಲಿ ಸತ್ತುಹೋಯಿತೇ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಬರೀ ಮಾತಿಗೆ ಸೀಮಿತವಾಯಿತೇ? ಈ ಧೋರಣೆ ನಿಲ್ಲಬೇಕಿದೆ ನಮ್ಮ ಹೋರಾಟ ನಿರಂತರ ನಡೆಯುವುದು" ಎಂದು ಹೇಳಿದರು.

ಜಿಲ್ಲಾ ಘಟಕದ ದೊಡ್ಡಯ್ಯ ಲಿಂಗಾಪುರ ಮಾತನಾಡಿ, "ಕೇವಲ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅಷ್ಟೇ ಅಲ್ಲ, ರಾಜ್ಯದ ಹಲವು ಭಾಗಗಳಲ್ಲಿ ಈ ಅಸ್ಪೃಶ್ಯತೆಯ ಸಮಸ್ಯೆ ಇನ್ನೂ ಜೀವಂತವಾಗಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಸರ್ಕಾರ ಹಾಗೂ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ್ಮೆಯಿಂದ ವರ್ತಿಸುತ್ತಿದ್ದಾರೆ. ದಲಿತಪರ ಚಿಂತಕರು ಅಥವಾ ಮುಖಂಡರು ಪ್ರತಿಭಟಿಸಿದಾಗ ಮಾತ್ರ ಮುಂದೆ ಬಂದು ಕ್ರಮ ಕೈಗೊಳ್ಳುವ ನಟನೆ ಮಾಡುತ್ತಾರೆ. ಈ ವರ್ತನೆ ಬದಲಾಗಬೇಕಿದೆ. ನಮ್ಮ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕಿದೆ" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ದಲಿತ ಮುಖಂಡ ಆನಂದ್ ಮಾತನಾಡಿ, "ಇಂತಹ ಸಮಸ್ಯೆಗಳಿಗೆ ಸ್ಥಳೀಯ ಮುಖಂಡರು ಪರಿಹಾರ ನೀಡಿದ್ದಾರೆ. ನಾವು ಪ್ರತಿಭಟಿಸಿ ನ್ಯಾಯ ಪಡೆಯುವ ಅವಶ್ಯಕತೆ ಇರಲಿಲ್ಲ. ಆದರೆ, ನಮ್ಮ ಮತಗಳಿಗೆ ಇಲ್ಲದ ಅಸ್ಪೃಶ್ಯತೆ ನಮ್ಮ ಜನರನ್ನು ಮುಟ್ಟಿದರೆ ಬರುತ್ತದೆ ಎಂಬುದು ಶೋಚನೀಯ ಸಂಗತಿ. ಇಂದು ಸಾಂಕೇತಿಕವಾಗಿ ದಲಿತ ವ್ಯಕ್ತಿಗೆ ಕ್ಷೌರ ಮಾಡಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿದ್ದೇವೆ. ಈ ಸಮಸ್ಯೆ ಮತ್ತೆ ಮರುಕಳಿಸಿದಂತೆ ಜಾಗೃತಿ ವಹಿಸಬೇಕಿದೆ. ಮುಂದೆ ಈ ಸಮಸ್ಯೆ ಎದುರಾದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ" ಎಂದು ಎಚ್ಚರಿಸಿದರು.

ಈ ವೇಳೆ ಮುಖಂಡರಾದ ದೊಡ್ಡಯ್ಯ, ನರೇಂದ್ರ ಮೂರ್ತಿ, ಸಕ್ಕರೆ ಗೊಲ್ಲಹಳ್ಳಿ ಆನಂದ್, ಕುಮಾರ್ ದೊಡ್ಡಬೆಳವಂಗಲ, ಶಂಕರ್ ಮೂರ್ತಿ, ನಾಗರತ್ನಮ್ಮ ಸೇರಿದಂತೆ ನೂರಾರು ದಲಿತ ಮುಖಂಡರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು: ಸಿಎಂ

Last Updated :Feb 19, 2024, 1:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.