ETV Bharat / state

ಮಂಗಳೂರು ಕುಕ್ಕರ್ ಬ್ಲಾಸ್ಟ್​ಗೂ ಬೆಂಗಳೂರು ಸ್ಫೋಟಕ್ಕೂ ಸಾಮ್ಯತೆ ಕಾಣುತ್ತಿದೆ: ಡಿ ಕೆ ಶಿವಕುಮಾರ್​

author img

By ETV Bharat Karnataka Team

Published : Mar 2, 2024, 1:00 PM IST

Updated : Mar 2, 2024, 1:15 PM IST

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​

ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಸಂದರ್ಭ ಬರುವುದಿಲ್ಲ. ಎಲ್ಲಾ ರೀತಿಯಲ್ಲ ಪ್ರಕರಣದ ತನಿಖೆ ನಡೆಸಿ, ಕ್ಲೀನ್​ ರಿಪೋರ್ಟ್​ ನೀಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ತಿಳಿಸಿದರು.

ಡಿ ಕೆ ಶಿವಕುಮಾರ್​

ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಘಟನೆಗೂ ಮಂಗಳೂರು ಕುಕರ್​ ಬ್ಲಾಸ್ಟ್ ಪ್ರಕರಣಕ್ಕೂ ಸಾಮ್ಯತೆ ಕಾಣುತ್ತಿದೆ. ಮಂಗಳೂರು ಮತ್ತು ಶಿವಮೊಗ್ಗ ಪೊಲೀಸರನ್ನೂ ಕರೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, "ನಮ್ಮ ಪೊಲೀಸ್​ ಅಧಿಕಾರಿಗಳು ಹೇಳುವ ಪ್ರಕಾರ ಮಂಗಳೂರು ಕುಕ್ಕರ್​ ಸ್ಫೋಟ ಹಾಗೂ ಈ ಕೆಫೆ ಸ್ಫೋಟಕ್ಕೂ ಲಿಂಕ್​ ಕಾಣ್ತಿದೆ. ಕೆಫೆಯಲ್ಲಿ ದೊರೆತಿರುವ ವಸ್ತುಗಳಿಗೂ, ಟೈಮರ್​ಗೆ ಬಳಸಿರುವ ವಸ್ತುಗಳಿಗೂ ಸಾಮ್ಯತೆ ಇರುವಂತೆ ಕಾಣುತ್ತಿದೆ. ಮಂಗಳೂರು ಹಾಗೂ ಶಿವಮೊಗ್ಗದ ಪೊಲೀಸ್​ ಅಧಿಕಾರಿಗಳು ಕೂಡ ಈಗ ಬೆಂಗಳೂರಿಗೆ ಬಂದು, ತನಿಖೆಯಲ್ಲಿ ಸಹಕರಿಸುತ್ತಿದ್ದಾರೆ." ಎಂದು ತಿಳಿಸಿದರು.

"ಪ್ರಕರಣವನ್ನು ನಾನು, ಸಿಎಂ, ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರನ್ನೂ ರಕ್ಷಣೆ ಮಾಡುವ ಸಂದರ್ಭ ಬರುವುದಿಲ್ಲ. ನಮ್ಮ ರಾಜ್ಯದ ಗೌರವ ಕಾಪಾಡಬೇಕು. ಬಿಜೆಪಿಯವರು ಸಹಕಾರ ಕೊಡುವುದಾದರೆಓಒಕೆ. ರಾಜಕಾರಣ ಮಾಡಿದ್ರೆ ಮಾಡಿಕೊಳ್ಳಲಿ. ನಾವು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಾತ್ರ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದೇವೆ. ಅದರಲ್ಲಿ ಮತ್ತೆ ಮಧ್ಯಪ್ರವೇಶ ಮಾಡುವುದಿಲ್ಲ. ಸಿಸಿಬಿಯವರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಇಲಾಖೆಯವರು ಸಂಪೂರ್ಣವಾಗಿ ಎಂಟು ತಂಡಗಳನ್ನು ರಚಿಸಿದ್ದಾರೆ. ಆ ಎಂಟೂ ತಂಡಗಳು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ " ಎಂದರು.

"ಇಡೀ ಬೆಂಗಳೂರಲ್ಲಿ ಸಿಸಿಟಿವಿ ಕ್ಯಾಮರಾಗಳಿವೆ. ಶಂಕಿತ ವ್ಯಕ್ತಿ ಬಸ್​ಗೆ ಹತ್ತಿರುವುದು, ಇಳಿದು ಕೆಫೆಗೆ ಬಂದಿರುವುದು ತಿಳಿದಿದೆ. ವಾಪಸ್​ ಹೋಗುವಾಗ ಹೇಗೆ ಹೋದ ಎನ್ನುವುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ. ಶಂಕಿತ ವ್ಯಕ್ತಿ ಸೆರೆಯಾಗಿರುವ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ವ್ಯಕ್ತಿಯ ಚಹರೆ ಈಗಾಗಲೇ ಗೊತ್ತಾಗಿದೆ. ಆ ಬಗ್ಗೆ ಮಾಹಿತಿಯನ್ನು ನಾನು ಮಾಹಿತಿ ನೀಡುವುದಿಲ್ಲ. ಎಲ್ಲಾದಕ್ಕೂ ನಾವು ಪೊಲೀಸ್​ ಇಲಾಖೆಯವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಅದರಲ್ಲಿ ಮತ್ತೆ ನಾವು ಮಧ್ಯಪ್ರವೇಶಿಸಲ್ಲ. ಇದು ಏಕವ್ಯಕ್ತಿಯಾ?. ಸಂಘಟನೆಯಾ ನೋಡಬೇಕು" ಎಂದು ಡಿಸಿಎಂ ತಿಳಿಸಿದರು.

"ಬೆಂಗಳೂರಿಗರು ಗಾಬರಿ ಪಡುವ ಅವಶ್ಯಕತೆ ಇಲ್ಲ. ಅದೃಷ್ಟವಶಾತ್​ ದೊಡ್ಡ ಮಟ್ಟದ ಅಪಾಯ ಸಂಭವಿಸಿಲ್ಲ. ಇದು ಕಡಿಮೆ ತೀವ್ರತೆಯ ಸ್ಫೋಟ ಆಗಿದೆ, ಲೋಕಲ್​ ಆಗಿ ತಯಾರು ಮಾಡಿದ್ದಾರೆ. ಹಾಗಾಗಿ ಶಬ್ದ ಮಾತ್ರ ಜೋರಾಗಿ ಬಂದಿದ್ದು, 8-10 ಅಡಿ ವ್ಯಾಪ್ತಿಯಲ್ಲಿ ಪರಿಣಾಮ ಬೀರಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಮುಖ ಎಲ್ಲಾ ಕಡೆಯಿಂದಲೂ ಸರಿಯಾಗಿ ಕಾಣಿಸುತ್ತಿದೆ. ಅವನು ಮುಖ ಗೊತ್ತಾಗದಂತೆ ಏನನ್ನು ಧರಿಸಿದ್ದರೂ, ಅವನ ಚಹರೆ ಗೊತ್ತಾಗುತ್ತಿದೆ. ಹಲವು ಸಿಸಿಟಿವಿ ಕ್ಯಾಮರಾ ಫೂಟೇಜ್​ಗಳೂ ಸಿಕ್ಕಿವೆ." ಎಂದರು.

ಬಿಜೆಪಿಯವರ ಸಹಕಾರ ನೀಡುತ್ತೇವೆ. ಆದರೆ ಉಳಿದ ಪ್ರಕರಣಗಳಂತೆ ಇದನ್ನು ಮುಚ್ಚಿಹಾಕಬೇಡಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, "ನಮಗೆ ಬಿಜೆಪಿಯವರ ಸಹಕಾರ ಏನೂ ಬೇಡ. ಅವರ ಯಾವ ರೀತಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಬೆಂಗಳೂರಿನ ಹೆಸರನ್ನು ಹಾಳು ಮಾಡಲು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ಕಾಣಿಸುತ್ತಿದೆ. ಏನು ಮಾಡಬೇಕೋ ಅದನ್ನು ಮಾಡಲಿ." ಎಂದು ಹೇಳಿದರು.

ಸರ್ಕಾರದ ನಿರ್ಲಕ್ಷ್ಯ ಕಾಣ್ತಿದೆಯಾ ಎಂಬ ಪ್ರಶ್ನೆಗೆ, "ಬೆಂಗಳೂರು ದೊಡ್ಡ ನಗರ. ಬಿಜೆಪಿ ಸರ್ಕಾರದಲ್ಲಿ ಮಂಗಳೂರು, ಶಿವಮೊಗ್ಗದಲ್ಲಿ ಇಂತಹ ಪ್ರಕರಣ ನಡೆದಿತ್ತು. ಪಾರ್ಲಿಮೆಂಟ್​ನಲ್ಲೂ ಆಗಿತ್ತು. ಕೆಲವು ವೇಳೆ ಯಾರನ್ನು ದೂರೋಕೆ ಆಗುವುದಿಲ್ಲ. ಕಾಮನ್ ಮ್ಯಾನ್ ರೀತಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾನೆ. ಇಂತಹದೇ ವ್ಯಕ್ತಿ ಕ್ರಿಮಿನಲ್ ಆ್ಯಕ್ಟಿವಿಟಿ ಮಾಡುತ್ತಾನೆ ಅಂತ ಹೇಳೋದು ಕೂಡ ಕಷ್ಟ ಆಗತ್ತೆ. ಹಾಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡ್ತಿದ್ದೇವೆ" ಎಂದರು.

"ಗಾಯಾಳುಗಳ ಚಿಕಿತ್ಸೆ ಬಗ್ಗೆ ಈಗಾಗಲೇ ನಾವು ಸೂಚನೆ ನೀಡಿದ್ದೇವೆ. ಒಬ್ಬ ಮಹಿಳೆ ಹೊರತುಪಡಿಸಿ, ಉಳಿದೆಲ್ಲಾ ಗಾಯಾಳುಗಳು ಆರಾಮವಾಗಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತರಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಸ್ಫೋಟ ಪ್ರಕರಣ: ಯಾವ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವುದಿಲ್ಲ; ಗೃಹ ಸಚಿವ ಪರಮೇಶ್ವರ್

Last Updated :Mar 2, 2024, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.