ETV Bharat / state

ಸ್ಫೋಟ ಪ್ರಕರಣ: ಯಾವ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವುದಿಲ್ಲ; ಗೃಹ ಸಚಿವ ಪರಮೇಶ್ವರ್

author img

By ETV Bharat Karnataka Team

Published : Mar 2, 2024, 11:17 AM IST

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ''ಯಾವ ಕಾರಣಕ್ಕೂ‌ ತಪ್ಪಿತಸ್ಥನನ್ನು ಬಿಡುವುದಿಲ್ಲ. ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಬಿಡಲ್ಲ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬ್ಲಾಸ್ಟ್ ವಿಚಾರವಾಗಿ ಶನಿವಾರ ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಘಟನೆ ಕುರಿತು ಬಹಳ ಸೀರಿಯಸ್ ಆಗಿ, ಆಳವಾಗಿ ತನಿಖೆ ನಡೆಯುತ್ತಿದೆ. ಸಾಕಷ್ಟು‌ ಕುರುಹುಗಳು ಸಿಕ್ಕಿವೆ. ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಸುಮಾರು ‌28 ಬಸ್​ಗಳು ಓಡಾಡಿವೆ. ಆತ ಬಸ್​ನಲ್ಲಿ‌ ಬಂದಿರುವ ಸಾಧ್ಯತೆ‌ ಇದೆ. ಬಸ್​ಗಳಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಈ ಘಟನೆ ವೈಯಕ್ತಿಕವಾಗಿ ಆಗಿದೆಯೋ? ಏನು ಅಂತಲೂ ತನಿಖೆ ನಡೆಯುತ್ತಿದೆ'' ಎಂದು ತಿಳಿಸಿದರು.

''ಹೋಟೆಲ್​ನವರು ಮೂರ್ನಾಲ್ಕು ಕಡೆ ಸಕ್ಸಸ್ ಆಗಿರುವುದರಿಂದ ಮಾಡಿರಬಹುದೇನೋ? ಎಲ್ಲಾ ಆಯಾಮದಲ್ಲೂ ತನಿಖೆ‌ ನಡೆಯುತ್ತಿದೆ. ಯಾವ ಸಂಘಟನೆ ಮಾಡಿದೆ ಅಂತಾ ಈಗಲೇ ಹೇಳಲು ಆಗುವುದಿಲ್ಲ. ಸ್ಥಳಕ್ಕೆ ‌ಹೋದಾಗ ಅಲ್ಲಿ‌ ಕೆಲವರು ಹೋಟೆಲ್​ನವರು ಸಕ್ಸಸ್ ಆಗಿದ್ದಕ್ಕೆ‌ ಹೊಟ್ಟೆ ಉರಿಯಿಂದ ಮಾಡಿರಬಹುದು ಅಂತಾ ಹೇಳಿದ್ರು. ಅದೆಲ್ಲದರ ಬಗ್ಗೆಯೂ‌ ತನಿಖೆ ಆಗ್ತಿದೆ'' ಎಂದರು.

ವಿಪಕ್ಷಗಳಿಂದ ರಾಜೀನಾಮೆಗೆ ಆಗ್ರಹ‌ ವಿಚಾರವಾಗಿ ಪ್ರತಿಕ್ರಿಯಿಸಿ, ''ಅವರು ರಾಜೀನಾಮೆ ಕೇಳ್ತಾನೇ ಇರುತ್ತಾರೆ. 2022ರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ‌ ಇವರು ರಾಜೀನಾಮೆ ಕೊಟ್ಟಿದ್ರಾ? ರಾಜೀನಾಮೆ ಕೇಳೋದು‌ ಇವರಿಗೆ ಅಭ್ಯಾಸ ಆಗಿಬಿಟ್ಟಿದೆ. ಸಿಎಂ, ಗೃಹ ಸಚಿವರು‌ ರಾಜೀನಾಮೆ ಕೊಡಿ ಅಂತಾರೆ. ನಮಗೆ‌ ಜವಬ್ದಾರಿ ಇದೆ. ನಿನ್ನೆ‌ ಕೂಡ ಅಪೀಲ್ ಮಾಡಿದ್ದೇ‌ವೆ. ಇಂತಹ ಸಂದರ್ಭದಲ್ಲಿ ‌ಸಹಕಾರ‌ ನೀಡಿ ಅಂತ ಹೇಳಿದ್ದೇವೆ. ಇದು ರಾಜ್ಯದ ಮತ್ತು ಬೆಂಗಳೂರಿನ ಸುರಕ್ಷತೆಯ ಪ್ರತಿಷ್ಠೆ. Bengaluru should be safer... ನಿಟ್ಟಿನಲ್ಲಿ‌ ಅನೇಕ ಕಾರ್ಯಕ್ರಮ ಮಾಡಿದ್ದೇವೆ'' ಎಂದು ಹೇಳಿದರು.

''ಪ್ರಕರಣದ ಭಾಗವಾಗಿ ಸ್ಥಳದಲ್ಲಿನ ಸಿಸಿಟಿವಿ‌ ದೃಶ್ಯಾವಳಿ‌ ಕಲೆಕ್ಟ್ ಮಾಡಲಾಗಿದೆ. ನಮ್ಮಲ್ಲಿ ಸಮರ್ಥರಿದ್ದಾರೆ. ಎಫ್​ಎಸ್​ಎಲ್​ ಸಿಬ್ಬಂದಿ ಮುಂದೆ ಇದೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಇಟ್ಟಿದ್ದು,‌ ಅದಕ್ಕೆ ಎಷ್ಟು‌ ಕೆಪಾಸಿಟಿ ಇತ್ತು? ಈ ರೀತಿ ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಇದೆಲ್ಲವೂ‌ ತನಿಖೆಗೆ ಸಹಕಾರ ಆಗಲಿದೆ'' ಎಂದು ತಿಳಿಸಿದರು.

ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಇದಕ್ಕೂ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ, ''ಅದೆಲ್ಲಾ ಊಹೆ‌ ಮಾಡಿ‌ ಹೇಳೋದಿಲ್ಲ. ಈ‌ ಘಟನೆ ಮಾಡಿದವರನ್ನ ಹಿಡಿತೇವೆ ಅಷ್ಟು ಮಾತ್ರ‌ ಹೇಳಬಹುದು. ಇವತ್ತು ಸಿಎಂ ಜೊತೆ ಮೀಟಿಂಗ್ ಮಾಡ್ತೇವೆ. ಚರ್ಚಿಸುತ್ತೇವೆ. ಅಲ್ಲಿ‌ ಇದರ ಬಗ್ಗೆ ‌ಕೆಲವು ಸೂಚನೆಗಳನ್ನು ಕೊಡ್ತೇವೆ'' ಎಂದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಚಹರೆ ಪತ್ತೆ, ಪೊಲೀಸ್​ ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.