ETV Bharat / state

'ಪಾತ್ರವಲ್ಲ, ಅಭಿನಯ ಮುಖ್ಯ', ಪ್ರಜ್ವಲ್ ಪ್ರಕರಣದಲ್ಲಿ ಇಡೀ ದೇವೇಗೌಡ ಕುಟುಂಬ ರಾಜಕೀಯದಿಂದ ಹೊರ ಇರಬೇಕು: ಮೊಯ್ಲಿ - HASSAN PEN DRIVE CASE

author img

By ETV Bharat Karnataka Team

Published : May 2, 2024, 4:06 PM IST

Updated : May 2, 2024, 4:35 PM IST

veerappa moily
ವೀರಪ್ಪ ಮೊಯ್ಲಿ

ಹಾಸನ ಪೆನ್​ ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ, ಕಾಂಗ್ರೆಸ್​ ಹಿರಿಯ ನಾಯಕ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದ್ದು, ಹೆಚ್​.ಡಿ. ದೇವೇಗೌಡರ ಕುಟುಂಬ ರಾಜಕೀಯದಿಂದ ಹೊರ ಇರಬೇಕು ಎಂದು ಒತ್ತಾಯಿಸಿದ್ದಾರೆ.

ವೀರಪ್ಪ ಮೊಯ್ಲಿ

ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಅಶ್ಲೀಲ ವಿಡಿಯೋ ಪ್ರಕರಣದಿಂದ ನಿಜವಾಗಿಯೂ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​.ಡಿ. ದೇವೇಗೌಡರ ಕುಟುಂಬ ತಲೆತಗ್ಗಿಸಬೇಕು. ಅವರ ಇಡೀ ಕುಟುಂಬ ರಾಜಕೀಯಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಗ್ರಹಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ದೇವೇಗೌಡರ ಮಗ, ಮೊಮ್ಮಗನಿಂದ ಒಂದಲ್ಲ 2 ಸಾವಿರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ದೇವೇಗೌಡರ ಕುಟುಂಬ ಸದಸ್ಯರು ರಾಜಕೀಯದಿಂದ ಹೊರ ಇರಬೇಕು. ಹಾಸನದಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ. ರಾಜಕೀಯದ ಹೆಸರೂ ಕೆಡಿಸಿದ್ದಾರೆ. ದೇಶದ ಎದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

''ಪ್ರಜ್ವಲ್​ ವಿರುದ್ಧದ ಲೈಂಗಿಕ ಹಗರಣದ ಎಲ್ಲ ಸೂತ್ರಧಾರರು ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ?, ಇಂಥ ಕೃತ್ಯ ಎಸಗಿ, ಹಣ ದೋಚಿಕೊಂಡು ದೇಶದಿಂದ ಪರಾರಿ ಆಗುತ್ತಿದ್ದಾರೆ. ಕೇಂದ್ರದಲ್ಲಿ ಇಂಥ ಸರ್ಕಾರ ಇದ್ದರೆ ಏನು ಪ್ರಯೋಜನ'' ಎಂದು ಹರಿಹಾಯ್ದರು.

ಪಾತ್ರವಲ್ಲ, ಅಭಿನಯಿಸಿದವರು ಮುಖ್ಯ: ಇದೇ ವೇಳೆ, ರಮೇಶ್ ಜಾರಕಿಹೊಳಿ, ಪ್ರಜ್ವಲ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್​ ಪಾತ್ರ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಮೊಯ್ಲಿ, ''ಇಲ್ಲಿ ಪಾತ್ರ ಮುಖ್ಯನಾ?, ಅಭಿನಯಿಸಿದವರು, ಅನ್ಯಾಯ ಮಾಡಿದವರು ಮುಖ್ಯನಾ? ಎಂದು ಪ್ರಶ್ನಿಸಿದರು. ಮುಂದುವರೆದು, ''ನಾನು ಮೂರು ಕಾದಂಬರಿಗಳನ್ನು ಬರೆದಿದ್ದೇನೆ, ಆ ಮೂರು ಕಥೆಗಳು ಸಿನೆಮಾಗಳಾಗಿವೆ. ಇದರಲ್ಲಿ ಪಾತ್ರಧಾರರು ತಪ್ಪು ಮಾಡಿ ಸಿನೆಮಾ ಫ್ಲಾಪ್ ಆದರೆ, ಕಥೆ ಬರೆದವರು ತಪ್ಪಿತಸ್ಥರಾ?'' ಎಂದೂ ಕುಟುಕಿದರು.

ವೀರಪ್ಪ ಮೊಯ್ಲಿ

''ದೇವೇಗೌಡರು ಮರ್ಯಾದೆಯಿಂದ ಸುಮ್ಮನಿರಬೇಕು. ಆಗ ಈ ಪ್ರಕರಣದ ವಿರುದ್ಧವಿದ್ದಾರೆ ಎಂದು ಆಗುತ್ತದೆ. ಹಾಗಾಗಿ, ಶಿವಕುಮಾರ್ ಕಾರಣ, ಮತ್ತೊಬ್ಬರು ಕಾರಣ ಎನ್ನುವುದು ಸರಿಯಲ್ಲ. ರಮೇಶ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಒಳ್ಳೆಯ ಪುರುಷಾರ್ಥದ ಕೆಲಸ ಮಾಡಿದ್ದಾರಾ?, ಅವರುವ ಮಾಡಿರುವ ಬಗ್ಗೆ ಸ್ಪಷ್ಟ ದಾಖಲೆಗಳು ಇವೆ. ತಮ್ಮ ನಾಚಿಕೆಗೇಡಿತನಕ್ಕೆ ಬೇರೆಯವರ ಹೆಸರಿಗೆ ಬಣ್ಣ ಬಳಿಯುವ ಕೆಲಸ ಮಾಡಬಾರದು'' ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 22 ಲಕ್ಷ: ''ಪ್ರಧಾನಿ ನರೇಂದ್ರ ಮೋದಿ ಅವರು ನಾರಿ ಶಕ್ತಿ, ಬೇಟಿ ಪಢಾವೋ, ಬೇಟಿ ಬಚಾವೋ ಅಂತಾರೆ. ಯುಪಿಎ ಸಮಯದಲ್ಲಿ ಮೂರು ಲಕ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳ ವರದಿ ಆಗಿತ್ತು. ಈಗ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22 ಲಕ್ಷ ದಾಟಿದೆ. ಭಾರತ ಸರ್ಕಾರದ ಬಳಿಯೇ ರಾಷ್ಟ್ರೀಯ ಅಪರಾಧ ರೆಕಾರ್ಡ್ ಮಾಹಿತಿ ಇದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಅಧಿಕವಾಗಿವೆ'' ಎಂದು ಮೊಯ್ಲಿ ಚಾಟಿ ಬೀಸಿದರು.

ಮೋದಿ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಸುಳ್ಳು: ''ನಾನು ದೇಶ-ವಿದೇಶದ ನಾಗರಿಕತೆಗಳ ಅಧ್ಯಯನ ಮಾಡಿದ್ದೇನೆ. ಆದರೆ, ಮೋದಿ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಸುಳ್ಳು ಇದೆ. ಬಿಜೆಪಿ ಪ್ರಣಾಳಿಕೆಯು ಪ್ರಜಾಪ್ರಭುತ್ವ ವಿರುದ್ಧವಾಗಿದೆ. 10 ವರ್ಷದ ಹಿಂದೆ ಭಾರತವನ್ನು ಏಷಿಯನ್ ಟೈಗರ್ ಅಂತಾ ಕರೆಯುತ್ತಿದ್ದರು. ಆದರೀಗ ಚೀಪ್ ಅಂತಿದ್ದಾರೆ. ಚೀನಾದವರು ಏಷಿಯನ್ ಲಯನ್ ಆಗುತ್ತಿದ್ದಾರೆ. ಮೋದಿ ಮೂರು‌ ಕಾರ್ಯಕ್ರಮಗಳಿಗೂ ಮೂರು ವೇಷ ಹಾಕುತ್ತಾರೆ. ಫ್ಯಾನ್ಸಿ ಡ್ರೆಸ್ ಹಾಕುವ‌ ಮೋದಿ ಜನರು ಜೀವನಮಟ್ಟ ಹಿಂದಕ್ಕೆ ತಳ್ಳಿದ್ದಾರೆ'' ಎಂದು ಮಾಜಿ ಸಿಎಂ ದೂರಿದರು.

''2ಜಿ ಹಗರಣ ಟುಸ್ ಆಯ್ತು, ಬೋಫೋರ್ಸ್​ ಹಗರಣ ಕೂಡ ಸುಳ್ಳು ಅಂತಾ ಸುಪ್ರೀಂ ಕೋರ್ಟ್​ನಲ್ಲಿ ಸಾಬೀತಾಯಿತು. ಬಿಜೆಪಿ ಜಾರಿಗೆ ತಂದ ಚುನಾವಣಾ ಬಾಂಡ್ ದೇಶದ ದೊಡ್ಡ ಹಗರಣವಾಗಿದೆ. ಸ್ವತಃ ಸುಪ್ರೀಂ ಕೋರ್ಟ್ ಕೂಡ ಈ ಚುನಾವಣಾ ಬಾಂಡ್ ಯೋಜನೆಯನ್ನು ಅತಿದೊಡ್ಡ ಹಗರಣ ಅಂತಾ ಹೇಳಿದೆ. ಡೈರೆಕ್ಟ್ ಆಗಿ ನಾಚಿಕೆ ಇಲ್ಲದೇ ಹಣ ತಗೊಂಡ ಬಿಜೆಪಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ'' ಎಂದು ಮೊಯ್ಲಿ ಹರಿಹಾಯ್ದರು.

''ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರಿಗೆ ಮತ ಕೇಳಲು ಯಾವ ನೈತಿಕ ಹಕ್ಕೂ ಇಲ್ಲ. ಭೌತಿಕ ಹಕ್ಕೂ ಇಲ್ಲ. ಮೋದಿ ಬಲಗಡೆ ಬಿಎಸ್​ವೈ, ಎಡಗಡೆ ದೇವೇಗೌಡ ಇರುತ್ತಾರೆ. ಈ ಇಬ್ಬರೂ ಬಿಜೆಪಿಗೆ ಮೈನಸ್. ಮೈನಸ್ ಯಾವತ್ತೂ ಪ್ಲಸ್ ಆಗಲ್ಲ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ‌ಗೆಲ್ಲಲಿದೆ. ಉತ್ತರ ಪ್ರದೇಶದಲ್ಲೂ ನಮ್ಮ ಪಕ್ಷ ಚೇತರಿಸಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ'' ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲುಕ್​ ಔಟ್ ನೊಟೀಸ್ ಜಾರಿ: ಪ್ರಜ್ವಲ್​​​ ರೇವಣ್ಣ ವಿಚಾರಣೆಗೆ ಗೈರಾದರೆ ಬಂಧನ ಸಾಧ್ಯತೆ

Last Updated :May 2, 2024, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.