ETV Bharat / state

ಒಬ್ಬ ಅಂಗಾಂಗ ದಾನಿ 8 ಜನರ ಜೀವ ಉಳಿಸಬಲ್ಲ: ಆರೋಗ್ಯ ಸಚಿವ ಗುಂಡೂರಾವ್

author img

By ETV Bharat Karnataka Team

Published : Mar 10, 2024, 9:58 PM IST

ಒಬ್ಬ ಅಂಗಾಂಗ ದಾನಿ ಎಂಟು ಜನರ ಜೀವ ಉಳಿಸಬಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

one organ donor can save eight lives says Health Minister Dinesh Gundurao
ಒಬ್ಬ ಅಂಗಾಂಗ ದಾನಿಯು ಎಂಟು ಜನರ ಜೀವ ಉಳಿಸಬಲ್ಲ: ಆರೋಗ್ಯ ಸಚಿವ ಗುಂಡೂರಾವ್

ಬೆಂಗಳೂರು: ಒಬ್ಬ ಅಂಗಾಂಗ ದಾನಿಯು ಎಂಟು ಜೀವಗಳನ್ನು ಉಳಿಸುವ ಮತ್ತು 75ಕ್ಕೂ ಹೆಚ್ಚು ಇತರ ಜನರ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಇದನ್ನು ಪುಷ್ಟೀಕರಿಸುವ ರೊಬೊಟಿಕ್ ಶಸ್ತ್ರಚಿಕಿತ್ಸೆಗಳ ಪರಿಚಯ ಟ್ರಾನ್ಸ್‌ಪ್ಲಾಂಟ್‌ ಕಾರ್ಯವಿಧಾನಗಳಿಗೆ ಹೊಸ ಮಾರ್ಗ ನೀಡಿದೆ. ಆ ಮೂಲಕ ಶಸ್ತ್ರಚಿಕಿತ್ಸಕರು ಅತ್ಯುತ್ತಮ ನಿಖರತೆಯೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಮಹಿಳಾ ದಿನ ಮತ್ತು ವಿಶ್ವ ಕಿಡ್ನಿ ದಿನದ ಜಂಟಿ ಆಚರಣೆ ಮತ್ತು ಕರ್ನಾಟಕದ ಮೊದಲ ಮರಣೋತ್ತರ ಕಿಡ್ನಿ ದಾನ ಮಾಡಿರುವ ದಾನಿ ಉಷಾ ಗೌರಿಯವರ ಗೌರವಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಉಷಾ ಅವರ ಕಥೆಯು ಭರವಸೆ ಮತ್ತು ಸ್ಫೂರ್ತಿಯ ಬೆಳಕಾಗಿದೆ. ಅವರ ಅಂಗಾಂಗ ದಾನದ ನಿಸ್ವಾರ್ಥ ಸೇವೆಯು ಮಾನವೀಯತೆಯ ಮೌಲ್ಯ ಮತ್ತು ಜೀವಗಳನ್ನು ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನವೀನ ಆರೋಗ್ಯ ತಂತ್ರಜ್ಞಾನವು ಕನಿಷ್ಟ ದೋಷಗಳೊಂದಿಗೆ ಅಪಾಯಕಾರಿ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುತ್ತದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಈ ಶಸ್ತ್ರ ಚಿಕಿತ್ಸೆಗಳು ಉತ್ತಮವಾಗಿವೆ. ರೊಬೊಟಿಕ್ಸ್ ಶಸ್ತ್ರಚಿಕಿತ್ಸೆಗಳು ದುಬಾರಿಯಾಗಿದ್ದು, ಹೆಲ್ತ್ ಪ್ಲಾನ್​ಗಳಲ್ಲಿ ನಗದುರಹಿತ ಪಾವತಿಗಳ ಅಡಿಯಲ್ಲಿ ಅದನ್ನು ವಿಮಾದಾರರು ಕವರ್ ಮಾಡಿದರೆ, ಜನರಿಗೆ ಆರ್ಥಿಕವಾಗಿ ತುಂಬಾ ಸಹಾಯವಾಗುತ್ತದೆ. ಸುಧಾರಿತ ಆರೋಗ್ಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

'ಉಷಾಸ್ ಡೇ': ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಸುದರ್ಶನ್ ಬಲ್ಲಾಳ್ ಮಾತನಾಡಿ, ನಮ್ಮ ಆಸ್ಪತ್ರೆಯ ಮಾಸಿಕ ಅನುದಾನಿತ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು 'ಉಷಾಸ್ ಡೇ' ಎಂದು ಘೋಷಿಸಲಾಗಿದೆ. ಉಷಾ ಅವರು ಮಾಡಿದ ದಾನವು ಅಂಗಾಂಗ ದಾನದ ಪ್ರಭಾವ, ಕರುಣೆ ಮತ್ತು ಉದಾರತೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ನಾವು ಇತರರಿಗೆ ಅಂಗಗಳನ್ನು ದಾನ ಮಾಡಲು ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ಕರ್ನಾಟಕದ ಮೊದಲ ಮರಣೋತ್ತರ ಕಿಡ್ನಿ ದಾನಿ: ಉದಯೋನ್ಮುಖ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಉಷಾ 1998ರ ಜನವರಿ 26ರಂದು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ದುಃಖದ ನಡುವೆಯೂ ಆಕೆಯ ಕುಟುಂಬ ಆಕೆಯ ಕಿಡ್ನಿ ದಾನ ಮಾಡಲು ನಿರ್ಧರಿಸಿತ್ತು. ಈ ಘಟನೆ ಮಣಿಪಾಲ್ ಆಸ್ಪತ್ರೆಯಲ್ಲಿ ಮರಣೋತ್ತರ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತ್ತು. ಅಂದಿನಿಂದ ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯ್ದೆ ಅಡಿಯಲ್ಲಿ ಉಷಾ ಅವರನ್ನು 'ಕರ್ನಾಟಕದ ಮೊದಲ ಮರಣೋತ್ತರ ಕಿಡ್ನಿ ದಾನಿ' ಎಂದು ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ಪ್ರಶಂಸನಾ ಪತ್ರ ವಿತರಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.