ETV Bharat / state

ಮನೆಯಲ್ಲಿ ಯಾರೂ ಇಲ್ಲದ ವೇಳ ಕಳ್ಳತನ: ಕುಖ್ಯಾತ ಆರೋಪಿ ಬಂಧನ

author img

By ETV Bharat Karnataka Team

Published : Feb 29, 2024, 1:35 PM IST

Arrested accused and seized gold, silver ornament
ಆರೋಪಿ ಹಾಗೂ ವಶಪಡಿಸಿಕೊಂಡ ಚಿನ್ನ ಬೆಳ್ಳಿ ಆಭರಣಗಳು

ಆರೋಪಿಯನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ಆರೋಪಿಯಿಂದ ಕದ್ದ 50 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾಂತರಾಜ ಅಲಿಯಾಸ್ ಮೋರಿಕಾಂತ ಬಂಧಿತ ಆರೋಪಿ. ಆತನಿಂದ 3.50 ಲಕ್ಷ ಬೆಲೆ ಬಾಳುವ ಸುಮಾರು 48 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 1 ಕೆಜಿ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ಯತೀಶ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು‌ ಬಂದಿದೆ.

ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ ಮಹೇಶ್ ಕುಮಾರ್ ಎಂಬವರು ನವೆಂಬರ್ 11ರಂದು ಕುಟುಂಬ ಸಮೇತವಾಗಿ ತಮ್ಮ ಸ್ವಂತ ಊರಿಗೆ ಹೋಗಿದ್ದಾಗ ಆರೋಪಿಗಳು ಮನೆ ಬಾಗಿಲನ್ನು ಒಡೆದು ಒಳನುಗ್ಗಿದ್ದರು. ಬಳಿಕ 2 ಕಬ್ಬಿಣದ ಬೀರುಗಳನ್ನು ಒಡೆದು, ಅದರಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನಾಭರಣಗಳು, 1 ಕೆಜಿ ಬೆಳ್ಳಿಯ ವಸ್ತುಗಳನ್ನು ಹಾಗೂ 35,000 ರೂ. ನಗದು ಕಳವು ಮಾಡಿ ಪರಾರಿಯಾಗಿದ್ದರು.

ನವೆಂಬರ್ 14ರಂದು ಸಂಜೆ ಮಹೇಶ್ ಕುಮಾರ್ ಅವರ ಕುಟುಂಬ ಮನೆಗೆ ವಾಪಸ್ಸು ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಬಂದಿತ್ತು. ಬಳಿಕ‌ ಮಹೇಶ್ ಕುಮಾರ್ ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಸ್ಥಳದಲ್ಲಿ ಹಳೆಯ ರೂಢೀಗತ ಕಳ್ಳ ಕಾಂತರಾಜನ ಬೆರಳು ಮುದ್ರೆ ಪತ್ತೆಯಾಗಿತ್ತು. ಆರೋಪಿ ಕಾಂತರಾಜ ಕದ್ದ ವಸ್ತುಗಳನ್ನು ಮೋರಿಗಳಲ್ಲಿ ಬಚ್ಚಿಟ್ಟು ನಂತರ ವಿಲೇವಾರಿ‌ ಮಾಡುವ ಅಭ್ಯಾಸ ಹೊಂದಿದ್ದ. ಆದ್ದರಿಂದಲೇ ಮೋರಿಕಾಂತ ಎಂಬ ಹೆಸರಿನಿಂದ ಈತ ಕುಖ್ಯಾತನಾಗಿದ್ದ.

ಘಟನಾ ಸ್ಥಳದಲ್ಲಿ ಸಿಕ್ಕ ಬೆರಳಚ್ಚಿನ ಅನ್ವಯ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆರೋಪಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಯತೀಶ್ ಜೊತೆ ಸೇರಿಕೊಂಡು ಬ್ಯಾಡರಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಎಸಗಿದ್ದ ಕಳ್ಳತನ ಪ್ರಕರಣಗಳು ಬಯಲಾಗಿವೆ.

ಇದನ್ನೂ ಓದಿ: ಬೆಂಗಳೂರು: ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳು ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.