ETV Bharat / state

ಬೆಂಗಳೂರು: ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳು ಸೆರೆ

author img

By ETV Bharat Karnataka Team

Published : Feb 27, 2024, 4:18 PM IST

ಮೊಬೈಲ್ ಫೋನ್‌ಗಳನ್ನು​ ಕಸಿದುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

mobile-phone-thieves-arrested
ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳು ಸೆರೆ

ಬೆಂಗಳೂರು: ಮೊಬೈಲ್ ಫೋನ್‌ಗಳನ್ನು ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಗಿರೀಶ್ ಕುಮಾರ್ (22) ಹಾಗೂ ರಂಗನಾಥ್ (32) ಬಂಧಿತ‌ರು. ಇವರಿಂದ 20 ಲಕ್ಷ ರೂಪಾಯಿ ಬೆಲೆ ಬಾಳುವ ವಿವಿಧ ಕಂಪನಿಗಳ 68 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ನಗರದ ಜನನಿಬಿಡ ಪ್ರದೇಶಗಳಾದ ಟಿನ್ ಫ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್ ಮುಂತಾದೆಡೆ ರಸ್ತೆಬದಿ ನಡೆದುಕೊಂಡು ಹೋಗುವ ಒಂಟಿ ವ್ಯಕ್ತಿಗಳನ್ನು ಗುರಿಯಾಗಿಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಬಳಿಕ ಅವುಗಳನ್ನು ತಮ್ಮ ಸ್ವಂತ ಊರು ಹಿರಿಯೂರಿನಲ್ಲಿ ಮಾರಾಟ ಮಾಡಿ, ಬಂದ ಹಣವನ್ನು ದುಶ್ಚಟಗಳ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 9 ಮೊಬೈಲ್ ದೋಚಿದ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಫೋನ್ ಸುಲಿಗೆ, ಇಬ್ಬರ ಬಂಧನ: ಮೊಬೈಲ್ ಫೋನ್, ಹಣ ಸುಲಿಗೆ ಮಾಡಿ ದ್ವಿಚಕ್ರ ವಾಹನಗಳಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಆರೋಪಿಗಳು ಹಲ್ಲೆ ಮಾಡಿ, ಹೆದರಿಸಿ ಮೊಬೈಲ್ ಮತ್ತು 2,300 ರೂಪಾಯಿ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗುವ ಯತ್ನದಲ್ಲಿದ್ದರು. ಸುಲಿಗೆಗೊಳಗಾದ ವ್ಯಕ್ತಿ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಇಂದಿರಾನಗರ ಪೊಲೀಸ್ ಠಾಣೆಯ 1 ಸುಲಿಗೆ, ಹಲಸೂರು ಪೊಲೀಸ್ ಠಾಣೆಯ 1 ಸುಲಿಗೆ, ಹೆಣ್ಣೂರು ಪೊಲೀಸ್ ಠಾಣೆಯ 3 ದರೋಡೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಳ್ಳತನ, 4 ಲ್ಯಾಪ್ ಟಾಪ್ ಕದ್ದು ಕಳ್ಳರು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.