ETV Bharat / state

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಸಂಚು - RAMESHWARAM CAFE BLAST CASE

author img

By ETV Bharat Karnataka Team

Published : Apr 7, 2024, 10:52 AM IST

rameswaram-cafe-blast
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಸಂಚು

ರಾಮೇಶ್ವರಂ ಕೆಫೆ ಸ್ಫೋಟ ಸಂಬಂಧ ಮಂಗಳೂರು ಗೋಡೆ ಬರಹ ಪ್ರಕರಣದ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟಕ್ಕೆ ನಗರದ ಪರಪ್ಪನ ಅಗ್ರಹಾರದಲ್ಲೇ ಕುಳಿತು ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಶಿವಮೊಗ್ಗದ ಪ್ರಾಯೋಗಿಕ ಸ್ಫೋಟ ಪ್ರಕರಣ ಹಾಗೂ ಮಂಗಳೂರು ಗೋಡೆ ಬರಹ ಪ್ರಕರಣದ ಶಂಕಿತ ಮಾಜ್ ಮುನೀರ್‌ನನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಮತ್ತು ಮಂಗಳೂರು ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜ್ ಮುನೀರ್ ಈಗಾಗಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಇತ್ತೀಚೆಗೆ ಎನ್ಐಎದಿಂದ ಬಂಧನಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್‌ನ ಹೇಳಿಕೆ ಆಧರಿಸಿ ಆತನನ್ನು ಬಾಡಿ ವಾರೆಂಟ್ ಪಡೆದು ಬಂಧಿಸಲಾಗಿದೆ. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೊಮ್ಮೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ದೇಶದ 18 ಕಡೆಗಳಲ್ಲಿ ಮಾರ್ಚ್ 5ರಂದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆಯೇ ಮಾಜ್ ಮುನೀರ್‌ನನ್ನು 8 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಆರೋಪಿ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಅದೇ ಮಾಹಿತಿಯನ್ನು ಆಧರಿಸಿದ್ದ ಎನ್ಐಎ ಅಧಿಕಾರಿಗಳು ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್‌ನನ್ನು ಬಂಧಿಸಿದ್ದರು. ಮುಜಾಮಿಲ್ ಷರೀಫ್ ವಿಚಾರಣೆಯಲ್ಲಿ ಮಾಜ್ ಮುನೀರ್ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಾಜ್ ಮುನೀರ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದುಕೊಂಡಿದ್ದ. ಬಳಿಕ ಶಿವಮೊಗ್ಗದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಈ ಪ್ರಕರಣದ ಎನ್ಐಎ ವಿಚಾರಣೆಯಲ್ಲಿ, ರಾಜ್ಯದಲ್ಲಿ ಐಸಿಸ್ ಕಾರ್ಯಚಟುವಟಿಕೆ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು.

ಮಾಜ್ ಮನೀರ್ ಹಾಗೂ ಅಬ್ದುಲ್ ಮತೀನ್ ತಾಹಾ ಐಇಡಿ ತಯಾರಿಕೆಯಲ್ಲಿ ಪರಿಣಿತರಾಗಿದ್ದು, ಇತರೆ ಆರೋಪಿಗಳಿಗೆ ತರಬೇತಿ ನೀಡುತ್ತಿದ್ದರು. ಅದೇ ಮಾದರಿಯಲ್ಲಿ ಕೆಫೆ ಸ್ಫೋಟದ ಬಾಂಬರ್ ಮುಸಾವೀರ್ ಹುಸೇನ್ ಶಾಜೀಬ್‌ಗೂ ತರಬೇತಿ ನೀಡಿದ್ದರು. ಆತ ಮುಜಾಮಿಲ್ ಷರೀಫ್‌ನ ನೆರವಿನಿಂದ ನಗರದ ಹೊರವಲಯದಲ್ಲಿ ಐಇಡಿ ತಯಾರಿಸಿ ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೆಫೆ ಸ್ಫೋಟ ಕೇಸ್: ಪ್ರಮುಖ ಆರೋಪಿ, ಸಹ ಸಂಚಕೋರ ಇಬ್ಬರೂ ಶಿವಮೊಗ್ಗದವರು; ಸ್ನೇಹಿತರು, ಪರಿಚಯಸ್ಥರ ವಿಚಾರಣೆ - Cafe Blast Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.