ETV Bharat / state

ಕುಂದುಕೊರತೆ ಇಲ್ಲದ ಊರು ಈ ಕುಂದೂರು; ಲಂಡನ್​ನಲ್ಲಿವೆ ಇಲ್ಲಿನ ಆಂಜನೇಯ ಸ್ವಾಮಿಯ ಪಾದುಕೆಗಳು - Kunduru Anjaneya Swami

author img

By ETV Bharat Karnataka Team

Published : Apr 17, 2024, 2:03 PM IST

Updated : Apr 17, 2024, 2:46 PM IST

ಲಂಡನ್​ನಲ್ಲಿವೆ ಕುಂದೂರು ಆಂಜನೇಯ ಸ್ವಾಮಿಯ ಪಾದುಕೆಗಳು
ಲಂಡನ್​ನಲ್ಲಿವೆ ಕುಂದೂರು ಆಂಜನೇಯ ಸ್ವಾಮಿಯ ಪಾದುಕೆಗಳು

ಶ್ರೀ ಆಂಜನೇಯ ಸ್ವಾಮಿಯು ಕುಂದೂರು ಗ್ರಾಮದ ಕುಂದುಕೊರತೆಗಳನ್ನು ನಿವಾರಿಸುತ್ತ ಆ ಭಾಗದ ಜನರನ್ನು ಕಾಯುತ್ತಿದ್ದಾ‌ನೆ. ಈ ಆಂಜನೇಯ ಸ್ವಾಮಿಯ ಪಾದುಕೆಗಳನ್ನು ಲಂಡನ್​ನಲ್ಲಿ ನಡೆದ ಭಾರತ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇಂದಿಗೂ ಆ ಪಾದುಕೆಗಳು ಲಂಡನ್​ನಲ್ಲಿವೆ ಎಂಬುದು ಕುಂದೂರು ಗ್ರಾಮಸ್ಥರ ನಂಬಿಕೆ.

ಶ್ರೀ ಆಂಜನೇಯ ಸ್ವಾಮಿ ದೇವಾಲಯ ಕುಂದೂರು

ದಾವಣಗೆರೆ: 16ನೇ ಶತಮಾನದಲ್ಲಿ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಿರ್ಮಾಣವಾದ ದೇವಾಲಯದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿ ಗ್ರಾಮದ ಕುಂದುಕೊರತೆಗಳನ್ನು ನಿವಾರಿಸುತ್ತಿದ್ದಾ‌ನೆ. ಕಷ್ಟ ಎಂದು ಬರುವ ಭಕ್ತರ ಪಾಲಿಗೆ ಆರಾಧ್ಯ ದೈವನಾಗಿದ್ದಾನೆ. ಬೇಡಿಕೊಂಡ ಹರಕೆಗಳನ್ನು ಈಡೇರಿಸುತ್ತ ಆಂಜನೇಯ ಸ್ವಾಮಿ ಭಕ್ತರನ್ನು ಕಾಯುತ್ತಿದ್ದಾ‌ನೆ.

ಇನ್ನು, ಇಲ್ಲಿರುವ ಸ್ವಾಮಿಯ ಪಾದುಕೆಗಳನ್ನು ಮೆಟ್ಟಿ ಆಂಜನೇಯ ಸ್ವಾಮಿ ಗ್ರಾಮದ ಸುತ್ತ ಸಂಚರಿಸುತ್ತಿದ್ದನು ಎಂಬುದು ಭಕ್ತರ ನಂಬಿಕೆಯಾಗಿದೆ. ಹಿಂದುಳಿದ ಸಮುದಾಯದವರು ಚರ್ಮದಲ್ಲಿ ತಯಾರು ಮಾಡುತ್ತಿದ್ದ ಪಾದುಕೆಗಳನ್ನು ರಾತ್ರಿ ಆಂಜನೇಸ್ವಾಮಿ ಮೆಟ್ಟಿಕೊಂಡು ಸಂಚರಿಸುತ್ತಿದ್ದನು. ಬೆಳಗ್ಗೆ ಆ ಪಾದುಕೆಗಳನ್ನು ನೋಡಿದಾಗ ಅದರಲ್ಲಿ ಮುಳ್ಳುಗಳು ಕಂಡು ಬಂದಿರುವ ಉದಾಹರಣೆಗಳಿವೆ. ಅಲ್ಲದೆ ಇದ್ದ ಸ್ಥಳದಲ್ಲೇ ಆ ಪಾದುಕೆಗಳನ್ನು ಇರಿಸಿದ್ದರೂ ಕೂಡ ಸವಿಯುತ್ತಿದ್ದವು ಎಂಬುದು ಭಕ್ತರ ನಂಬಿಕೆಯ ಮಾತಾಗಿದೆ.

ಪ್ರಾಚೀನ ಕಾಲದ ಒಟ್ಟು ಮೂರು ಜತೆ ಪಾದುಕೆಗಳಿದ್ದು, ಒಂದು ಜೊತೆ ದೇವಾಲಯದಲ್ಲಿ ಇರಿಸಿ ಪೂಜಿಸಲಾಗುತ್ತಿದೆ, ಮತ್ತೊಂದು ಜೊತೆ ಧರ್ಮಸ್ಥಳದಲ್ಲಿದ್ದು, 1974 ರಲ್ಲಿ ತಯಾರಿಸಿದ ಪಾದುಕೆಗಳನ್ನು ಲಂಡನ್​ನಲ್ಲಿ ನಡೆದ ಭಾರತ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಲಂಡನ್​ ಮ್ಯೂಜಿಯಂನಲ್ಲಿವೆಯಂತೆ ಪಾದುಕೆಗಳು: ಮೈಸೂರು ಮೂಲದ ಜಾನಪದ ತಜ್ಞ ಡಾ. ತಿಪ್ಪೇಸ್ವಾಮಿಯವರು ಕುಂದೂರಿಗೆ ಭೇಟಿ ಕೊಟ್ಟು ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಪಾದರಕ್ಷೆಗಳಲ್ಲಿ ಒಂದು ಜೊತೆ ಪಾದುಕೆಗಳನ್ನು ತೆಗೆದುಕೊಂಡು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.

ಬಳಿಕ ಅದೇ ಪಾದುಕೆಗಳನ್ನು ಲಂಡನ್‌ನಲ್ಲಿ ನಡೆದ ಭಾರತ ಉತ್ಸವದಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ನಂತರ ಪ್ರಸಿದ್ಧಿ ಪಡೆದ ಈ ಪಾದುಕೆಗಳನ್ನು ಮ್ಯೂಜಿಯಂನಲ್ಲಿ ಪ್ರದರ್ಶನಕ್ಕಿಟ್ಟಿದ್ದರು ಎಂದು ದೇವಾಲಯದಲ್ಲಿರುವ ದಾಖಲೆಗಳು ಹೇಳುತ್ತಿವೆ. ಸ್ವಾಮಿಯ ಈ ಪಾದರಕ್ಷೆಯನ್ನು ಲಂಡನ್‌ಗೆ ಭೇಟಿ ನೀಡುವ ವಿದೇಶಿಗರು ಈಗಲೂ ನೋಡಬಹುದಾಗಿದೆ‌. ಇಂದಿಗೂ ಈ ಪಾದರಕ್ಷೆಗೆ ಪೂರ್ವದಿಂದ 'ಶಾಸ' ಎಂದು ಹೆಸರಿಟ್ಟು ಭಯ, ಭಕ್ತಿಯಿಂದ ಪೂಜಿಸುತ್ತಾರೆ.

ಇದ್ದ ಸ್ಥಳದಲ್ಲೇ ಇದ್ದು ಸವೆಯುವ ಪಾದುಕೆಗಳು: ಆಂಜನೇಯ ಸ್ವಾಮಿಗೆ ಪ್ರತಿ 23 ವರ್ಷಗಳಿಗೊಮ್ಮೆ ಪಾದುಕೆಗಳನ್ನು ಹೊಸದಾಗಿ ಮಾಡಿಸಿ ಅವುಗಳನ್ನು ಗುಡಿಯ ಒಂದು ಭಾಗದಲ್ಲಿ ಇರಿಸಲಾಗುತ್ತದೆ. ವಿಶೇಷವೇನೆಂದರೆ ಈ ಪಾದುಕೆಗಳನ್ನು ಉಪಯೋಗಿಸದಿದ್ದರೂ ಅವುಗಳು ದಿನೇ ದಿನೇ ಸವೆಯುತ್ತವೆ ಎನ್ನುವ ಪ್ರತೀತಿ ಇದೆ.

ಗ್ರಾಮದ ಯಾವುದೇ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಸ್ವಾಮಿಯನ್ನು ಕುದುರೆ ಉತ್ಸವದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಕಾರ್ಯಗಳನ್ನು ನಡೆಸುವ ರೂಢಿ ಇದೆ. ಇನ್ನು ಇಲ್ಲಿ ಮಾಡಿಕೊಳ್ಳುವ ಹರಕೆಗಳು ಪೂರ್ಣಗೊಂಡಿಡುವ ಉದಾಹರಣೆಗಳಿವೆ. 2014-15 ರಲ್ಲಿ ತಯಾರಾದ ಹಿತ್ತಾಳೆ ಪಾದುಕೆಗಳನ್ನು ಆಂಜನೇಯ ಸ್ವಾಮಿ ದೇವಾಲಯದಲ್ಲಿಟ್ಟು ಪೂಜಿಸಲಾಗುತ್ತಿದೆ. ಪಾದುಕೆಗಳು 33.5 ಇಂಚು ಉದ್ದ 28.5 ಎತ್ತರ, ಅಗಲ 18.5 ಇಂಚುಗಳಿಂದ ಕೂಡಿದೆ.

ದೇವಾಲಯದ ಧರ್ಮದರ್ಶಿ ಬಸಲಿಂಗಪ್ಪ ಈ ಬಗ್ಗೆ ಮಾತನಾಡಿ, "ಪಾದುಕೆಗಳನ್ನು ಹಿಂದುಳಿದ ಸಮುದಾಯದ ಜನ ನಿರ್ಮಾಣ ಮಾಡುತ್ತಿದ್ದರು. ಅಲಂಕಾರ ಮಾಡಿದ್ದ ಪಾದರಕ್ಷೆಗಳನ್ನು ದೇವಾಲಯಕ್ಕೆ ಹಸ್ತಾಂತರ ಮಾಡ್ತಿದ್ದರು. ಇದೀಗ ಮೆಟಲ್​ನಲ್ಲಿ ಮಾಡಲಾಗುತ್ತಿದೆ. ಹಳೇ ಪಾದುಕೆಗಳನ್ನು ಹೊಳೆಯಲ್ಲಿ ಬಿಡುವ ಪದ್ಧತಿ ಇತ್ತು. ಜಾನಪದ ತಜ್ಞ ಡಾ. ತಿಪ್ಪೇಸ್ವಾಮಿಯವರು ಭೇಟಿ ನೀಡಿ ಐತಿಹಾಸಿಕ ಪಾದುಕೆಗಳನ್ನು ಸರ್ಕಾರದ ಮೂಲಕ ಲಂಡನ್​ಗೆ ಕೊಂಡೊಯ್ದು ಪ್ರದರ್ಶನಕ್ಕಿಟ್ಟಿದ್ದರು. ಚರ್ಮದ ಪಾದುಕೆಗಳನ್ನು ಮಾಡಲಾಗುತ್ತಿತ್ತು. ಅದನ್ನು ಆಂಜನೇಯ ಮೆಟ್ಟಿಕೊಂಡು ಹೋಗುತ್ತಿದ್ದು, ಅದರಲ್ಲಿ ಮುಳ್ಳು ಇದ್ದುದನ್ನು ನೋಡಿದ್ದೇನೆ, ಪಾದುಕೆಗಳು ಸವಿಯುತ್ತಿದ್ದುದನ್ನು ಕಂಡಿದ್ದೇವೆ" ಎಂದರು.

ಇನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್​ ಮಾತನಾಡಿ, "ಮೈಸೂರು ಅರಮನೆಯಲ್ಲಿ ಪ್ರದರ್ಶನಕ್ಕೆ ಪಾದುಕೆಗಳು ಇರಿಸಲಾಗಿತ್ತು, ಬಳಿಕ ಐವತ್ತು ವರ್ಷಗಳ ಹಿಂದೆ ಲಂಡನ್​ನಲ್ಲಿ ನಡೆದ ಭಾರತ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿದೆ. ವಸ್ತು ಸಂಗ್ರಹಾಲಯದಲ್ಲಿ ಇಂದಿಗು ಪಾದುಕೆಗಳನ್ನು ನೋಡಬಹುದಾಗಿದೆ. ಒಟ್ಟು ಮೂರು ಜೊತೆ ಪಾದುಕೆಗಳಿವೆ. ಲಂಡನ್, ಧರ್ಮಸ್ಥಳ, ಕುಂದೂರಿನಲ್ಲಿ ಒಟ್ಟು ಮೂರು ಜತೆ ಪಾದುಕೆಗಳಿವೆ. ಕುಂದೂರು ಕುಂದುಕೊರತೆ ಇರದ ಊರು ಎಂದು ಖ್ಯಾತಿ ಪಡೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದಾವಣಗೆರೆಯ ಹರಿಹರೇಶ್ವರ ದೇವಾಲಯ ನಿರ್ಮಾಣವಾಗಿ 800 ವರ್ಷ!

Last Updated :Apr 17, 2024, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.