ETV Bharat / state

ಕೇಂದ್ರದ ಬರ ಪರಿಹಾರ ಮೊತ್ತ ಬೆಳೆಹಾನಿಯಾದ ರೈತರಿಗೆ ಪಾವತಿಸಲು ರಾಜ್ಯ ಸರ್ಕಾರ ಆದೇಶ - Drought Relief Fund

author img

By ETV Bharat Karnataka Team

Published : May 3, 2024, 9:44 PM IST

crop damage relief
ಸಂಗ್ರಹ ಚಿತ್ರ (Etv Bharat)

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರವನ್ನು ಬೆಳೆಹಾನಿಗೊಳಗಾದ ರೈತರಿಗೆ ಪಾವತಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಬರ ಪರಿಹಾರ ಹಣವನ್ನು ಬೆಳೆಹಾನಿಗಾಗಿ ರೈತರಿಗೆ ಪಾವತಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರದಿಂದ ಬಿಡುಗಡೆಯಾದ ಪರಿಹಾರ ಹಣವನ್ನು ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಪಾವತಿಸಲು ರಾಜ್ಯ ಸರ್ಕಾರ ಸೂಚಿಸಿದೆ.

ಎನ್​​ಡಿಆರ್​ಎಫ್​/ಎಸ್​ಡಿಆರ್​ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯ ಅನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ 2,000 ರೂ.ವರೆಗೆ ಪರಿಹಾರ ನೀಡಲಾಗಿದೆ. ಪಾವತಿಸಿದ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಪಾವತಿಗೆ ಅನುದಾನ ಬಿಡುಗಡೆಗೊಳಿಸಲು ಆದೇಶಿಸಲಾಗಿದೆ.

ಕೇಂದ್ರ ಸರ್ಕಾರ ಕಳೆದ ವಾರ ಎನ್​​ಡಿಆರ್​ಎಫ್​​ನಡಿ 3,454.22 ಕೋಟಿ ರೂ. ಬರ ಪರಿಹಾರ ಬಿಡಗಡೆಗೊಳಿಸಿತ್ತು. ಈ ಮೊತ್ತವನ್ನು ಬೆಳೆಹಾನಿ ಪರಿಹಾರ ಮೊತ್ತವಾಗಿ ರೈತರಿಗೆ ಪಾವತಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಲು ಆದೇಶಿಸಿದೆ‌. ರಾಜ್ಯ ಸರ್ಕಾರ ಇದಕ್ಕೂ ಮೊದಲು ಎಸ್​​ಡಿಆರ್​​ಎಫ್ ಅಡಿ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಪ್ರತಿ ಅರ್ಹ ರೈತರಿಗೆ ಗರಿಷ್ಠ 2,000 ರೂ.ವರೆಗೆ, ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪಾವತಿ ಮಾಡಿತ್ತು.

ಅದರಂತೆ ರಾಜ್ಯದಲ್ಲಿ ಬರ ಪೀಡಿತ ಎಂದು ಘೋಷಿಸಿರುವ 223 ತಾಲೂಕುಗಳಲ್ಲಿ ನಿಯಮಾನುಸಾರ ಅರ್ಹವಿರುವ 33,55,599 ಫಲಾನುಭವಿ ರೈತರುಗಳಿಗೆ ಅರ್ಹತೆಯನುಸಾರ ರಾಜ್ಯ ಸರ್ಕಾರದಿಂದ ಈಗಾಗಲೇ ಒಟ್ಟು 636.44 ಕೋಟಿ ರೂ.ಗಳನ್ನು ಬೆಳೆಹಾನಿ ಪರಿಹಾರವಾಗಿ ಪಾವತಿಸಲಾಗಿದೆ.

ಬೆಳೆಹಾನಿ ಪರಿಹಾರ ಪಾವತಿ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ, ಉಪ ವಿಭಾಗಾಧಿಕಾರಿಗಳ ಕಛೇರಿ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ರೈತರಿಗೆ ಮಾಹಿತಿ ನೀಡಲು ಹೆಲ್ಪ್​ ಡೆಸ್ಕ್​​ಗಳನ್ನು ಕೂಡಲೇ ತೆರೆಯಬೇಕು. ಅರ್ಹ ಫಲಾನುಭವಿ ರೈತರಿಗೆ ಈಗಾಗಲೇ ಪಾವತಿಯಾಗಿರುವ ಬೆಳೆ ಹಾನಿ ಪರಿಹಾರದ ವಿವರ ಹಾಗೂ ಅರ್ಹತೆಗನುಗುಣವಾಗಿ ನಿಯಮಾನುಸಾರ ಪ್ರಸ್ತುತ ಪಾವತಿಸಲಾಗುತ್ತಿರುವ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತದ ಬಗ್ಗೆಯೂ ವಿವರಿಸಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ್​​ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳು ಹಾಗೂ ಜಿಲ್ಲಾಧಿಕಾರಿಗಳ ಅಧಿಕೃತ ಜಾಲತಾಣಗಳಲ್ಲಿ ಸಾರ್ವಜನಿಕರು/ರೈತರಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ: ರಾಜ್ಯ ಸರ್ಕಾರಕ್ಕೆ ಒಲಿದ ಜಯ - Drought Relief fund to Karnataka

ETV Bharat Logo

Copyright © 2024 Ushodaya Enterprises Pvt. Ltd., All Rights Reserved.