ETV Bharat / state

ಗಂಗಾವತಿ: ವಿಚ್ಛೇದನದ ಹಾದಿ ಹಿಡಿದಿದ್ದ ದಂಪತಿಗೆ ಜಡ್ಜ್​ಗಳಿಂದ ಮರು ಬೆಸುಗೆ

author img

By ETV Bharat Karnataka Team

Published : Mar 16, 2024, 9:04 PM IST

ದಂಪತಿಗೆ ಜಡ್ಜ್​ಗಳಿಂದ ಮರು ಬೆಸುಗೆ
ದಂಪತಿಗೆ ಜಡ್ಜ್​ಗಳಿಂದ ಮರು ಬೆಸುಗೆ

ಗಂಗಾವತಿಯಲ್ಲಿ ನಾನಾ ಕಾರಣದಿಂದಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದ ದಂಪತಿಗಳನ್ನು ನ್ಯಾಯಾಧೀಶರು ಮತ್ತೆ ಒಂದಾಗಿಸಿದ್ದಾರೆ.

ಗಂಗಾವತಿ : ಮದುವೆ ಎಂಬುದು ಗಂಡು ಮತ್ತು ಹೆಣ್ಣಿನ ಜೀವನದಲ್ಲಿ ಒಂದು ಮಹತ್ತರವಾದ ಘಟ್ಟವಾಗಿದೆ. ಆದರೆ ಇತ್ತೀಚೆಗೆ ಮದುವೆ ನಂತರ ಸಂಸಾರ ಎಂಬ ಸಾಗರದಲ್ಲಿ ಪರಸ್ಪರ ಅಪನಂಬಿಕೆ, ಹೊಂದಾಣಿಕೆ ಕೊರತೆ ಸೇರಿದಂತೆ ನಾನಾ ಕಾರಣಕ್ಕೆ ಉಂಟಾಗುವ ಬಿರುಗಾಳಿಗೆ ತತ್ತರಿಸಿ ವಿಚ್ಛೇದನದ ಹಾದಿಯನ್ನು ಜೋಡಿಗಳು ಹಿಡಿಯುತ್ತಿದ್ದಾರೆ. ಇಂತಹ ಆರು ಜೋಡಿಗಳಿಗೆ ಗಂಗಾವತಿಯ ನ್ಯಾಯಾಧೀಶರು ಮರು ಬೆಸುಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ನಾನೊಂದು ತೀರ, ನೀನೊಂದು ತೀರ ಎಂಬಂತೆ ಕವಲು ಹಾದಿಯಲ್ಲಿ ಪಯಣಿಸುತ್ತಿದ್ದ ದಂಪತಿಗಳೊಂದಿಗೆ ಆಪ್ತ ಸಮಾಲೋಚನೆ ಮಾಡಿ ಮತ್ತೆ ಒಂದಾಗಿಸುವ ಮೂಲಕ ನ್ಯಾಯಾಧೀಶರು ಸಮಾಜದ ಗಮನ ಸೆಳೆದಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ದಂಪತಿಗಳು ಸಿಹಿ ತಿನಿಸಿ ಮತ್ತೆ ಸಂಸಾರ ನೌಕೆಯಲ್ಲಿ ಒಂದಾಗಿ ಸಾಗಲು ನಿರ್ಧರಿಸಿರುವುದಾಗಿ ತಿಳಿಸಿದರು.

ಕನಕಗಿರಿಯ ಅಂಬಿಕಾ - ಭರಮಣ್ಣ, ಕನಕಗಿರಿ ಹೊಸಗುಡ್ಡದ ಶಿವಲಿಂಗಮ್ಮ- ಮುತ್ತಣ್ಣ, ಜಂಗಮರ ಕಲ್ಗುಡಿಯ ಶಿವಮ್ಮ- ಗೂಳ್ಳಪ್ಪ, ಸಿದ್ದಾಪುರದ ಎಂ. ತ್ರಿವೇಣಿ - ರಾಘವೇಂದ್ರ, ವಡ್ಡರಹಟ್ಟಿಯ ಜ್ಯೋತಿ - ರಾಜೇಶ್ ಅಸಂಗಿ, ಹಾಗೂ ಚಿಕ್ಕಡಂಕನಕಲ್ನ ಬಸವರಾಜ - ಲಕ್ಷ್ಮಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ, ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್​ನಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಗೌರಮ್ಮ, ಶ್ರೀದೇವಿ, ರಮೇಶ ಗಾಣಿಗೇರ ಹಾಗೂ ಸದಾನಂದ ನಾಯಕ್ ವಿಚ್ಛೇದನ ಕೋರಿ ಸಲ್ಲಿಸಿದ ದಂಪತಿಗಳ ಮಧ್ಯೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.
ದಂಪತಿಗಳೆಂದರೇನು? ಸಂಸಾರದ ಸಾರವೇನು? ಎಂದು ತಿಳಿ ಹೇಳಿದ ನ್ಯಾಯಾಧೀಶರು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ಅನುಭವಿಸಿದ ಮಾನಸಿಕ ವೇದನೆ, ಕಳೆದಕೊಂಡ ಹಣ, ಅಮೂಲ್ಯ ಸಮಯದ ಬಗ್ಗೆ ಮನವರಿಕೆ ಮಾಡಿದ ಬಳಿಕ ದಂಪತಿಗಳು ಮತ್ತೆ ಒಂದಾಗಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ ಎನ್ನಲಾಗದು - ಪತ್ನಿಗೆ ಜೀವನಾಂಶ ನೀಡಲಾಗದು ಎನ್ನುವಂತಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.