ETV Bharat / state

ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲಿ ಕೂಡಲೇ ದೂರು ದಾಖಲಿಸಬೇಕು: ತುಷಾರ್ ಗಿರಿನಾಥ್ - Lok Sabha Election

author img

By ETV Bharat Karnataka Team

Published : Mar 22, 2024, 10:16 PM IST

Coordination meeting
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಯಿತು.

ಲೋಕಸಭಾ ಚುನಾವಣೆಯ ಹಿನ್ನೆಲೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಯಿತು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾವಹಿಸಿ, ಉಲ್ಲಂಘಿಸಿದ್ದಲ್ಲಿ ಕೂಡಲೇ ದೂರು ದಾಖಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣೆಯ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಬೇಕು. ಯಾವುದೇ ದಾಖಲಾತಿಗಳಿಲ್ಲದೇ ಹಣ ಸಾಗಿಸುವುದು ಅಥವಾ ಇನ್ನಿತರ ವಸ್ತುಗಳನ್ನು ಸಾಗಿಸುತ್ತಿದ್ದರೆ ಅದನ್ನು ವಶಕ್ಕೆ ಪಡೆದು ಕೂಡಲೇ ದೂರು ದಾಖಲಿಸಬೇಕು ಎಂದು ತಿಳಿಸಿದರು.

ಹತ್ತು ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕಿದ್ದಲ್ಲಿ ಕೂಡಲೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಬೇಕು. ವಶಪಡಿಸಿಕೊಂಡಿರುವ ಹಣಕ್ಕೆ ಸಂಬಂಧಪಟ್ಟವರು ಸರಿಯಾದ ದಾಖಲೆಗಳನ್ನು ಸಲ್ಲಿಸಿದಲ್ಲಿ ಹಣವನ್ನು ಜಿಲ್ಲಾಮಟ್ಟದ ದೂರು ಸಮಿತಿಯ ಆದೇಶದ ಮೇರೆಗೆ ಬಿಡುಗಡೆಗೊಳಿಸಬೇಕು ಎಂದು ಹೇಳಿದರು.

ಬೆಂಗಳೂರು ಜಿಲ್ಲೆಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಿರುವ ಎಫ್‌ಎಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಿ ಆಚಾರ ಸಂಹಿತೆ ಉಲ್ಲಂಘನೆ ಹಾಗೂ ಬೇರೆ ಬೇರೆ ಕಾಯ್ದೆ ಅಡಿ ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಆಯಾ ಪೊಲೀಸ್ ಠಾಣೆಗೆ ನೀಡಬೇಕು. ಪೊಲೀಸ್ ಅಧಿಕಾರಿಗಳು ದೂರಿನ ಮೇಲೆ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್) ಅಥವಾ ಗಂಭೀರ ಸ್ವರೂಪವಲ್ಲದ ವರದಿ(ಎನ್‌ಸಿಆರ್) ದಾಖಲಿಸಿ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.

ಎನ್‌ಸಿಆರ್​​​​ಗಳಿಗೆ ಸಂಬಂಧಿಸಿದಂತೆ ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿಗಳು ಸಂಬಂಧಿತ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅಗತ್ಯ ಎಲ್ಲ ಸಹಾಯವನ್ನು ಪೊಲೀಸ್ ಅಧಿಕಾರಿಗಳು ನೀಡಬೇಕು. ವಿಎಸ್‌ಟಿ ಹಾಗೂ ವಿವಿಟಿ ತಂಡಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಿ ಉಲ್ಲಂಘನೆಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಎಫ್‌ಎಸ್‌ಟಿ ಅಥವಾ ಎಸ್‌ಎಸ್‌ಟಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಮಾದರಿ ನೀತಿ ಸಂಹಿತಿ ಅಧಿಕಾರಿಯನ್ನು ನಿಯೋಜನೆ ಮಾಡಿರುವುದರಿಂದ ಅವರ ಕಡೆಯಿಂದ ಮಾಧ್ಯಮ ಪ್ರಮಾಣೀಕರ ಮತ್ತು ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ಉಲ್ಲಂಘನೆ ಪ್ರಕರಣ ದೂರುಗಳನ್ನು ನೀಡಲು ಕ್ರಮ ಕೈಗೊಳ್ಳುಬೇಕು ಎಂದು ಸೂಚನೆ ನೀಡಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, ಲೋಕಸಬಾ ಚುನಾವಣಾ ಕೆಲಸ-ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಿಸಬೇಕು. ಜೊತೆಗೆ ಚುನಾವಣಾಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್, ಡಾ. ದಯಾನಂದ್, ವಿನೋತ್ ಪ್ರಿಯಾ, ಹಣ ಬಿಡುಗಡೆಗೊಳಿಸುವ ಸಮಿತಿ ಮುಖ್ಯಸ್ಥ ಸ್ನೇಹಲ್, ಡಿಸಿಪಿಗಳು, ಪೊಲೀಸ್ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸರ್ಕಾರಿ ಬಸ್​​ನಲ್ಲಿ ದಾಖಲೆ ಇಲ್ಲದ ಚಿನ್ನಾಭರಣಗಳ ಸಾಗಾಟ: ಅಧಿಕಾರಿಗಳಿಂದ ಸೀಜ್ - Gold Seized

ETV Bharat Logo

Copyright © 2024 Ushodaya Enterprises Pvt. Ltd., All Rights Reserved.