ETV Bharat / state

ಸರ್ಕಾರಿ ಬಸ್​​ನಲ್ಲಿ ದಾಖಲೆ ಇಲ್ಲದ ಚಿನ್ನಾಭರಣಗಳ ಸಾಗಾಟ: ಅಧಿಕಾರಿಗಳಿಂದ ಸೀಜ್ - Gold Seized

author img

By ETV Bharat Karnataka Team

Published : Mar 22, 2024, 7:43 PM IST

ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಯಲ್ಲಿ ದಾಖಲೆ ಇಲ್ಲದ ಚಿನ್ನಾಭರಣಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ದಾಖಲೆ ಇಲ್ಲದ ಚಿನ್ನಾಭರಣ
ದಾಖಲೆ ಇಲ್ಲದ ಚಿನ್ನಾಭರಣ

ಚಿಕ್ಕಮಗಳೂರು: ತಾಲೂಕಿನ ಮಾಗಡಿ ಚೆಕ್‍ ಪೋಸ್ಟ್​​ನಲ್ಲಿ ಸರ್ಕಾರಿ ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಸುಮಾರು ಅರ್ಧ ಕೆಜಿ ಬಂಗಾರವನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜಿಲ್ಲೆಯ ಅಜ್ಜಂಪುರ, ಮೂಡಿಗೆರೆ ತಾಲೂಕಿನಲ್ಲೂ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 4 ಲಕ್ಷಕ್ಕೂ ಹೆಚ್ಚು ನಗದನ್ನು ಅಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾಖಲೆ ಇಲ್ಲದ ಚಿನ್ನಾಭರಣ
ದಾಖಲೆ ಇಲ್ಲದ ಚಿನ್ನಾಭರಣ

ಮಾಗಡಿ ಚೆಕ್‍ ಪೋಸ್ಟ್​​ನಲ್ಲಿ ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಚಿನ್ನದ ತಾಳಿ, ನೆಕ್ಲೇಸ್, ಬ್ರಾಸ್ಲೈಟ್, ಬಳೆ, ಸರ, ಉಂಗುರಗಳುಳ್ಳ ಅರ್ಧ ಕೆಜಿಯಷ್ಟು ಚಿನ್ನಾಭರಣಗಳನ್ನ ಸೀಜ್ ಮಾಡಲಾಗಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡದ ಹಿನ್ನೆಲೆ ಆಭರಣಗಳನ್ನು ಸೀಜ್ ಮಾಡಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಲಕ್ಷಾಂತರ ಮೌಲ್ಯದ್ದು ಎಂದು ಅಧಿಕಾರಿಗಳ ತಂಡ ಅಂದಾಜಿಸಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ದಾಖಲೆ ಇಲ್ಲದ ಚಿನ್ನಾಭರಣ
ದಾಖಲೆ ಇಲ್ಲದ ಚಿನ್ನಾಭರಣ

ಇನ್ನು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ಕೆಬೈಲ್ ಚೆಕ್‍ ಪೋಸ್ಟ್​ನಲ್ಲಿ ಸಹ ವಾಹನವೊಂದರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3 ಲಕ್ಷದ 62,750 ರೂ. ನಗದು, ಕೊಟ್ಟಿಗೆಹಾರ ಚೆಕ್‍ ಪೋಸ್ಟ್​​ನಲ್ಲಿ 1 ಲಕ್ಷ ರೂ., ಹಾಗೂ ಅಹ್ಮದ್​​ ನಗರದ ಚೆಕ್‍ ಪೋಸ್ಟ್​​ನಲ್ಲಿ 1.30 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಧಾರವಾಡದ ತೇಗೂರು ಚೆಕ್ ಪೋಸ್ಟ್​​ನಲ್ಲಿ ಗುರುವಾರ ರಾತ್ರಿ ತಪಾಸಣೆಯಲ್ಲಿ ಸಾರಿಗೆ (ನಿಪ್ಪಾಣಿ-ಗಂಗಾವತಿ) ಬಸ್​​ನಲ್ಲಿ ಸರಿಯಾದ ದಾಖಲೆ ಇಲ್ಲದ ರೂ. 38,50,000 ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿವೆ. ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ. 21 ರಂದು ರಾತ್ರಿ 11:35 ಗಂಟೆಗೆ ತೇಗೂರ ಚೆಕ್ ಪೋಸ್ಟ್​​ನಲ್ಲಿ ಕೊಲ್ಲಾಪುರ ಮೂಲದ ಪ್ರಕಾಶ್​ ಕುಮಾರ (47) ಎಂಬಾತ 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೇಟ್​ ಇರುವ ರೂ. 38,50,000 ಮೌಲ್ಯದ ಬಂಗಾರದ ಆಭರಣಗಳನ್ನು ಕೊಲ್ಲಾಪುರದಿಂದ ಸಿಂದನೂರು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದ. ಜಪ್ತಿ ವೇಳೆ ಬಿಲ್​​ನಲ್ಲಿರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಕಂಡು ಬಂದಿದೆ. ಸರಿಯಾದ ಮಾಹಿತಿ ನಮೂದಿಸದೇ ಮರೆಮಾಚಿ ಯಾವುದೋ ಅಪರಾಧ ಕೃತ್ಯ ಎಸಗುವ ಸಲುವಾಗಿ ತೆಗೆದುಕೊಂಡು ಹೊರಟಿರುವ ಸಂಶಯ ಬಲವಾಗಿ ಕಂಡು ಬಂದಿದೆ. ಹಾಗಾಗಿ ಮಾಲನ್ನು ಜಪ್ತಿ ಮಾಡಿ ಆರೋಪಿ ವಿರುದ್ಧ ಗರಗ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ನೀತಿ ಸಂಹಿತೆಗಳ ಉಲ್ಲಂಘನೆ : ಈವರೆಗೆ 323 ಕೋಟಿ ಮೌಲ್ಯದ ವಸ್ತುಗಳು ವಶ, ಸಿಆರ್‌ಪಿಸಿ ಅಡಿ 5,583 ಕೇಸ್​ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.