ETV Bharat / state

ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಳಿಗೆ ಮಾಲೀಕನಿಂದ ಎನ್ಒಸಿಗೆ‌ ಒತ್ತಾಯಿಸುವಂತಿಲ್ಲ: ಹೈಕೋರ್ಟ್ - High Court

author img

By ETV Bharat Karnataka Team

Published : Apr 13, 2024, 7:46 AM IST

high-court
ಹೈಕೋರ್ಟ್

ವ್ಯಾಪಾರ ಪರವಾನಗಿ ನವೀಕರಣ ಮಾಡಲು ನಿರಪೇಕ್ಷಣಾ ಪತ್ರಕ್ಕಾಗಿ ಒತ್ತಡ ಹೇರುವಂತಿಲ್ಲ ಎಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಳಿಗೆ ಬಾಡಿಗೆ ಪಡೆದಿರುವ ಮಾಲೀಕರಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪಡೆಯಲೇಬೇಕೆಂದು ಬಿಬಿಎಂಪಿ ಒತ್ತಡ ಹೇರುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ವೆಲ್‌ವೆಟ್ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿರುವ ಪಂಚರತ್ನ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.

ಬಿಬಿಎಂಪಿ ಕಾಯ್ದೆಯ 2020ರ ಸೆಕ್ಷನ್ 305 ಅಡಿ ಪರವಾನಗಿ ನೀಡಲಾಗಿದೆ. ಆದರೆ, ಆ ನವೀಕರಣ ಕುರಿತ ಪ್ರಕ್ರಿಯೆಗಳನ್ನು ನಿಯಮಗಳಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಬಿಬಿಎಂಪಿ ಯಾವುದೇ ನಿಯಮಗಳನ್ನು ರೂಪಿಸಿಲ್ಲದಿರುವುದರಿಂದ ಸಂವಿಧಾನದ ಕಲಂ 19 (1) (ಜಿ) ಪ್ರಕಾರ ಮೂಲ ಹಕ್ಕುಗಳಿಗೆ ತಡೆಯೊಡ್ಡಲಾಗುವುದಿಲ್ಲ ಎಂದು ಹೇಳಿದೆ.

ಜೊತೆಗೆ, ಹೋಟೆಲ್ ಅನ್ನು ಮುಚ್ಚುವ ಬಿಬಿಎಂಪಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಭೂ ಮಾಲೀಕರಿಗೆ ಎನ್‌ಒಸಿ ಪಡೆಯುವಂತೆ ಒತ್ತಾಯಿಸದೆ, ವ್ಯಾಪಾರ ಪರವಾನಗಿಯನ್ನು ನವೀಕರಣ ಮಾಡಿಕೊಡುವಂತೆ ಆದೇಶ ನೀಡಿದೆ.

ಅಲ್ಲದೇ, ಭೂ ಮಾಲೀಕರು ಮತ್ತು ಅರ್ಜಿದಾರರ ನಡುವಿನ ವ್ಯಾಜ್ಯ ಬಾಕಿ ಇದ್ದು, ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಸಂಸ್ಥೆಯನ್ನು ಬಾಲಾಜಿ ಪೋತರಾಜು ಪ್ರತಿನಿಧಿಸುತ್ತಿದ್ದು, ಲೀಸ್ ಡೀಡ್ ಇದೆ. ಅದು ಇತ್ಯರ್ಥವಾಗುವವರೆಗೆ ಆಸ್ತಿ ಅರ್ಜಿದಾರರ ಸುಪರ್ದಿಯಲ್ಲಿರುತ್ತದೆ. ಹಾಗಾಗಿ, ಮತ್ತೆ ಭೂ ಮಾಲೀಕರಿಂದ ಎನ್‌ಒಸಿ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ : ಪಂಚರತ್ನ ಎಂಟರ್‌ಪ್ರೈಸಸ್ ಆರಂಭದಲ್ಲಿ ಶುಲ್ಕ ಪಾವತಿಸಿ 2019 ರ ಜುಲೈ 31 ರಂದು ವ್ಯಾಪಾರ ಪರವಾನಗಿ ಪಡೆದು ಹೋಟೆಲ್ ಉದ್ಯಮ ನಡೆಸುತ್ತಿತ್ತು. ಆ ಪಾಲುದಾರಿಕೆ ಸಂಸ್ಥೆಯಲ್ಲಿ ಮರುಸ್ಥಾಪನೆಯಾಗಿ, ಬಾಲಾಜಿ ಪೋತರಾಜ್ ಅವರು ಪಾಲುದಾರರಾಗಿ ಸೇರ್ಪಡೆಯಾದರು, ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು 2023ರ ಜನವರಿ 6ರಂದು ವ್ಯಾಪಾರ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಬಿಬಿಎಂಪಿ ಭೂ ಮಾಲೀಕರಿಂದ ಎನ್‌ಒಸಿ ಪಡೆಯಬೇಕೆಂದು ಸೂಚಿಸಿದ್ದರು. ಆದರೆ, ಬಿಬಿಎಂಪಿ 2023 ರ ಮೇ 30 ರಂದು ಹೋಟೆಲ್​ಗೆ ಬೀಗ ಹಾಕಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾಗ ನ್ಯಾಯಾಲಯ, ಅರ್ಜಿದಾರರ ವ್ಯಾಪಾರ ಪರವಾನಗಿ ನವೀಕರಣ ಅರ್ಜಿ ಪರಿಗಣಿಸುವಂತೆ ಆದೇಶ ನೀಡಿತ್ತು. 2023 ರ ಜುಲೈ 5 ರಂದು ಬಿಬಿಎಂಪಿ ಮತ್ತೆ ಭೂ ಮಾಲೀಕರಿಂದ ಎನ್​ಒಸಿ ತರಬೇಕೆಂದು ಸೂಚಿಸಿತ್ತು. ಆಗ ಅರ್ಜಿದಾರರು ಭೂ ಮಾಲೀಕರಿಂದ ಎನ್​ಒಸಿ ಅಗತ್ಯವಿಲ್ಲ, ಜೊತೆಗೆ ಭೂ ಮಾಲೀಕರ ಜೊತೆಗಿನ ವ್ಯಾಜ್ಯ ಬಾಕಿ ಇದೆ ಎಂದು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಅಂಗವೈಕಲ್ಯವಿರುವ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.