ETV Bharat / state

ಸುತ್ತೂರು ಜಾತ್ರೆಯಲ್ಲಿ ಗಮನ ಸೆಳೆದ ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ: ವಿಶೇಷತೆಗಳೇನು?

author img

By ETV Bharat Karnataka Team

Published : Feb 12, 2024, 2:16 PM IST

Updated : Feb 12, 2024, 3:28 PM IST

ಹಳ್ಳಿಕಾರ್ ಹೋರಿ ಕೃಷ್ಣ
ಹಳ್ಳಿಕಾರ್ ಹೋರಿ ಕೃಷ್ಣ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಹೆಸರು ಮಾಡಿರುವ ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಳ್ಳಿಕಾರ್ ಹೋರಿ ಕೃಷ್ಣನ ಬಗ್ಗೆ ಮಾಹಿತಿ

ಮೈಸೂರು: ಸುತ್ತೂರು ಜಾತ್ರೆಯ ದೇಶಿಯ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ಹೋರಿ ಕೃಷ್ಣ ಜಾತ್ರೆಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ. ಕೋಟಿ ಬೆಲೆ ಬಾಳುವ ಹಳ್ಳಿಕಾರ್ ಕೃಷ್ಣನ ವೀರ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಹಾಗಾಗಿ ಎಲ್ಲರ ಗಮನ ಸೆಳೆಯುತ್ತಿರುವ ಗಟ್ಟಿಮುಟ್ಟಾದ ಕೃಷ್ಣನ ವಿಶೇಷತೆಗಳ ಬಗ್ಗೆ ಹೋರಿಯ ಮಾಲೀಕ ಬೋರೇಗೌಡ ಈಟಿವಿ ಭಾರತದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ ಬೋರೇಗೌಡ ಎಂಬುವವರು ಈ ಹಳ್ಳಿಕಾರ್ ತಳಿಯ ಹೋರಿ ಕೃಷ್ಣನನ್ನು ಸಾಕುತ್ತಿದ್ದಾರೆ. ಈತ ಯಾವುದೇ ಜಾತ್ರೆಗೆ ಹೋದರೂ ಕಟ್ಟುಮಸ್ತಾದ ಮೈಕಟ್ಟು, ವಿಭಿನ್ನ ಶೈಲಿಯಿಂದ ಎಲ್ಲರನ್ನೂ ಆಕರ್ಷಿಸುತ್ತಾನೆ. ಅಲ್ಲದೇ ಈತನ ಸೆಮೆನ್ (ವೀರ್ಯ)ಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದೀಗ ಸುತ್ತೂರು ಜಾತ್ರೆಯ ದೇಶಿಯ ಜಾನುವಾರುಗಳ ಜಾತ್ರೆಯಲ್ಲೂ ಸಹ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ.

ಹಳ್ಳಿಕಾರ್ ಕೃಷ್ಣ ಹೋರಿ ಸಿಕ್ಕಿದ್ದು ಹೇಗೆ ? : ಈ ಕರು ರಾಮನಗರದ ಅಂಜನಾಪುರದಲ್ಲಿ ಹುಟ್ಟಿತ್ತು. ಅಲ್ಲಿ ಅದಕ್ಕೆ ಕೃಷ್ಣ ಎಂದು ನಾಮಕರಣ ಮಾಡಲಾಯಿತು. ಆ ಕರು ಎರಡು ತಿಂಗಳಿದ್ದಾಗ ಮಂಡ್ಯದ ರೈತರೊಬ್ಬರು ಹಸು- ಕರು ಎರಡನ್ನೂ ಮಾರಾಟ ಮಾಡಿದ್ದರು. ನಂತರ ಮಂಡ್ಯದ ರೈತನಿಂದ ಮುತ್ತಪ್ಪ ರೈ ಅವರು ಕರುವನ್ನು ಖರೀದಿಸಿದ್ದರು. ಆಗ ಕೃಷ್ಣನಿಗೆ ಮೂರು ತಿಂಗಳಾಗಿತ್ತು. ಜೊತೆಗೆ ಅಲ್ಲಿದ್ದ ಸಂದರ್ಭದಲ್ಲಿ ಸ್ವಲ್ಪ ವೀಕ್ ಸಹ ಆಗಿತ್ತು. ಅಲ್ಲಿಂದ ನಾವು 2.75 ಲಕ್ಷ ರೂಪಾಯಿಗೆ ಖರೀದಿ ಮಾಡಿಕೊಂಡು ಬಂದೆವು. ನಾನು ತೆಗೆದುಕೊಂಡು ಬಂದು ಇಲ್ಲಿಗೆ 4 ರಿಂದ 5 ಐದು ವರ್ಷ ಆಗಿದೆ. ಸಾಕಷ್ಟು ದೊಡ್ಡ ಮೊತ್ತಕ್ಕೆಲ್ಲ ಹೋರಿಯನ್ನು ಕೇಳಿದ್ದಾರೆ. ಆದರೆ ಹೋರಿಯನ್ನು ಮಾರಾಟ ಮಾಡಿಲ್ಲ ಎಂದರು.

ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ ಕೃಷ್ಣ
ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ ಕೃಷ್ಣ

ಲಿಮ್ಕಾ ರೆಕಾರ್ಡ್, ಗಿನ್ನೆಸ್​ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಯಾವುದಕ್ಕಾದರೂ ಈ ಹೋರಿಯನ್ನು ಸೇರಿಸಬೇಕು ಎಂಬುದು ನನ್ನದೊಂದು ಆಸೆ ಮತ್ತು ಗುರಿ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. 6 ಲಕ್ಷ ರೂಪಾಯಿಯಿಂದ 1 ಕೋಟಿಯವರೆಗೆ ಖರೀದಿಗೆ ಕೇಳಿದ್ದಾರೆ. ಇದು ಸತ್ತ ನಂತರ ಒಂದು ದೇವಸ್ಥಾನ ಕಟ್ಟಿಸುತ್ತೇನೆ ಎಂದು ಹೋರಿ ಬಗ್ಗೆ ಬೋರೇಗೌಡ ವಿವರಿಸಿದರು.

ಹೋರಿಯ ವಿಶೇಷತೆಗಳು : 6 ವರ್ಷ ವಯಸ್ಸಿನ ಈ ಕೃಷ್ಣ ಸಾಮಾನ್ಯ ಹೋರಿಗಳಿಗಿಂತ ಎತ್ತರವಾಗಿದ್ದು, ಸುಮಾರು 6 ಅಡಿ ಎತ್ತರ, 9 ಅಡಿಗೂ ಹೆಚ್ಚು ಉದ್ದವಿದೆ. 900 ರಿಂದ ಸಾವಿರ ಕೆಜಿ ತೂಕ ಇರುವ ಹಳ್ಳಿಕಾರ್ ಕೃಷ್ಣ ಒಂದು ಕೋಟಿಯವರೆಗೆ ಬೆಲೆ ಬಾಳುತ್ತಿದ್ದಾನೆ. ಈತ ಯಾವುದೇ ಜಾತ್ರೆಗೆ ಹೋದರೂ ಪ್ರಥಮ ಬಹುಮಾನವನ್ನು ಪಡೆಯದೇ ವಾಪಸ್ ಬರುವುದಿಲ್ಲ. ಮಂಡ್ಯ ಭಾಗದಲ್ಲಿ ಸೋಲಿಲ್ಲದ ಸರದಾರ ಎಂಬ ಹೆಸರನ್ನು ಪಡೆದಿದೆ ಎಂದು ಬೋರೇಗೌಡ ಸಂತಸ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರದ ಶಾಸಕರು ಪಕ್ಕದ ಕ್ಷೇತ್ರಕ್ಕೆ ಹೋದರೆ ಈತ ಯಾರು ಎಂದು ಕೇಳುತ್ತಾರೆ. ಹೀಗಿರುವಾಗ ನಾನು ಎಲ್ಲೆ ಹೋದರೂ ನನ್ನನ್ನು ಜನರು ಗುರುತು ಹಿಡಿಯುತ್ತಾರೆ. ತಮಿಳುನಾಡಿಗೆ ಹೋದರೂ ಕೃಷ್ಣ ಹೋರಿ ಓನರ್​ ಎಂದು ಅವರೇ ನನ್ನ ಬಳಿ ಬಂದು ಮಾತನಾಡಿಸುತ್ತಾರೆ. ಹಳ್ಳಿಕಾರ್ ಕೃಷ್ಣ ಎಂದು ಹೇಳಿ ಎರಡು-ಮೂರು ವಾಟ್ಸ್​ಆ್ಯಪ್​ ಗ್ರೂಪ್​ಗಳಿವೆ. "ಸೋಲಿಲ್ಲದ ಸರದಾರ ಹಳ್ಳಿಕಾರ್ ಕೃಷ್ಣ" ಎಂಬ ಗ್ರೂಪ್​ಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಚಿಸಿಕೊಂಡಿದ್ದು, 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ.

ಕರ್ನಾಟಕದ ಪ್ರತಿಯೊಂದು ತಾಲೂಕಿನಲ್ಲೂ ಅಭಿಮಾನಿಳಿದ್ದಾರೆ. ನಾನು ಒಂದೂವರೆ ಕೋಟಿ ಖರ್ಚು ಮಾಡಿ ಫಂಕ್ಷನ್ ಮಾಡಿದರೂ ಈ ರೀತಿಯ ಅಭಿಮಾನಿಗಳು ಆಗುವುದಿಲ್ಲ. ನಮ್ಮ ತಾತ, ಮುತ್ತಾತ ಮತ್ತು ನಮ್ಮ ಪೂರ್ವಜರು ಬಸಪ್ಪನನ್ನು ಪೂಜೆ ಮಾಡಿಕೊಂಡು ಬಂದಿದ್ದಾರೆ. ಅದರ ಫಲವನ್ನು ನಾನು ಈಗ ಅನುಭವಿಸುತ್ತಿದ್ದೇನೆ. ನಾನು ಇರುವ ತನಕ ಈ ಹಳ್ಳಿಕಾರ್ ಸೇವೆಯನ್ನು ಮಾಡುತ್ತೇನೆ ಎಂದು ಹಳ್ಳಿಕಾರ್ ಕೃಷ್ಣನ ಮಾಲೀಕ ಬೋರೇಗೌಡ ಈಟಿವಿ ಭಾರತದ ಜೊತೆ ಕೃಷ್ಣನ ಬಗೆಗಿನ ಹಲವು ವಿಚಾರಗಳನ್ನು ಹಂಚಿಕೊಂಡರು.

ಒಂದು ನಳಿಕೆ ವೀರ್ಯಕ್ಕೆ ಒಂದು ಸಾವಿರ ರೂಪಾಯಿ : ಸೆಮೆನ್ (ವೀರ್ಯ) ಕಲೆಕ್ಟ್ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದಾಗ ತುಂಬಾ ಅಡಚಣೆ ಇತ್ತು. ನಿನ್ನ ಕೈಲಿ ಆಗುವುದಿಲ್ಲ, ಜೀವಮಾನದಲ್ಲೂ ಆಗಲ್ಲ ಎಂದಿದ್ದರು. ಹರಿಯಾಣದ ಕರ್ಮವೀರ್ ಸಿಂಗ್ ಅವರ ಬಳಿ ಸೆಮೆನ್ ಹೇಗೆ ಕಲೆಕ್ಟ್ ಮಾಡುವುದು ಎಂಬುದನ್ನು ನಮ್ಮ ಡಾಕ್ಟರ್ ತಿಳಿದುಕೊಂಡು ಬಂದರು. ಆದರೆ, ಆ ಸಮಯದಲ್ಲಿ ಅದು ಆಗಲಿಲ್ಲ. ಜೊತೆಗೆ ಅದಕ್ಕೆ ದೊಡ್ಡ ಮಷಿನ್​ಗಳು ಬೇಕಾಗಿದ್ದವು. ಆದ್ದರಿಂದ ಆ ಪ್ರಯತ್ನ ಅಲ್ಲಿಗೆ ನಿಂತಿತು.

ಮುಂದೆ ಈ ಬಗ್ಗೆ ಹುಡುಕುತ್ತಾ ಹೋದಾಗ ಹೋರಿ ಎಲ್ಲಿರುತ್ತದೋ ಅಲ್ಲಿಗೆ ಬಂದು ಸೆಮೆನ್ ಕಲೆಕ್ಟ್ ಮಾಡಿ ಸರ್ವೀಸ್ ನೀಡುತ್ತಿದ್ದ ಗುಜರಾತ್​ನ ಮನೀಷ್ ಎಂಬ ಪಶುವೈದ್ಯರ ಬಗ್ಗೆ ತಿಳಿಯಿತು. ಅವರನ್ನು ನಾವು ಸಂಪರ್ಕ ಮಾಡಿ ಇಲ್ಲಿಗೆ ಕರೆಸಿ ಸೆಮೆನ್ ತೆಗೆಸಿದ್ದೆವು. ಹೀಗೆ ತೆಗೆದ ಸೆಮೆನ್ ಅನ್ನು 35 ಲೀಟರ್ ಸಾಮರ್ಥ್ಯದ ನೈಟ್ರೋಜನ್ ಕಂಟೇನರ್​ನಲ್ಲಿ ಇಡಲಾಗುತ್ತದೆ. ಹೋರಿಯ ವೀರ್ಯವನ್ನು ಒಂದು ಹಸುಗೆ ಒಂದು ಸಾವಿರ ರೂ.ಗಳಂತೆ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಹಲವಾರು ಭಾಗಗಳಿಗೆ ಕೃಷ್ಣನ ಸೆಮೆನ್ ಹೋಗಿದೆ. ಬೇಡಿಕೆ ಸಹ ಹೆಚ್ಚು ಬರುತ್ತಿದ್ದು, ಮತ್ತೆ ಮತ್ತೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ಹಲವು ಜನರು ದಂಧೆ ಮಾಡುತ್ತಿದ್ದಾನೆ ಎಂದಿದ್ದರು. ಹಳ್ಳಿಕಾರ್ ತಳಿ ದೇಶದಲ್ಲಿ ಇರುವ ಎಲ್ಲ ದೇಶಿ ತಳಿಗಳಿಗೆ ತಾಯಿ ತಳಿ, ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಲು ನಾ‌ನು ಪ್ರಯತ್ನ ಮಾಡುತ್ತಿದ್ದೇನೆ. ದಂಧೆ ಮಾಡುತ್ತಿಲ್ಲ ಎಂದು ಬೋರೇಗೌಡ ಸ್ಪಷ್ಟಪಡಿಸಿದರು.

ವಿಶೇಷ ಆಹಾರ : ಕೇವಲ ತಳಿ ಅಭಿವೃದ್ಧಿಗಾಗಿ ಮಾತ್ರ ಉಪಯೋಗಿಸುವ ಹಳ್ಳಿಕಾರ್ ಕೃಷ್ಣನಿಗೆ ಪ್ರತಿನಿತ್ಯ ವಿಶೇಷ ಆಹಾರ ನೀಡಲಾಗುತ್ತದೆ. ಮೇವಿನ ಜೊತೆಗೆ ಕುದುರೆ ಮಸಾಲ, ಮೆಂತ್ಯ, ಹಸಿರಿನ ಸೊಪ್ಪು, ಭತ್ತದ ಹುಲ್ಲು, ರಾಗಿ ಹುಲ್ಲು, ಜೋಳದ ನುಚ್ಚು, ರವೆ, ಪೀಡ್ಸ್ , ಗೋಧಿ ಬೂಸಾ, ಚಕ್ಕೆ ಬೂಸಾ ಸೇರಿದಂತೆ ವಿಶಿಷ್ಟವಾದ ಆಹಾರಗಳನ್ನು ನೀಡಲಾಗುತ್ತದೆ. ಜೊತೆಗೆ ಸೌತೆಕಾಯಿ ಹಾಗೂ ಪಪ್ಪಾಯಿಯನ್ನ ನೀಡಲಾಗುತ್ತದೆ. ಇದನ್ನು ಕೇವಲ ತಳಿ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತಿದ್ದು. ಯಾವುದೇ ರೀತಿಯ ವ್ಯವಸಾಯಕ್ಕೆ ಈ ಹೋರಿಯನ್ನ ಬಳಸುವುದಿಲ್ಲ. ತಳಿ ಅಭಿವೃದ್ಧಿ ಜೊತೆಗೆ ಜಾತ್ರೆಗಳಿಗೆ ಪ್ರದರ್ಶನಕ್ಕೆ ಕಳುಹಿಸಲಾಗುತ್ತದೆ ಎಂದರು.

ಇದನ್ನೂ ಓದಿ : ದೊಡ್ಡಬಳ್ಳಾಪುರ: ಮಾ.8ರಂದು ರಾಜ್ಯಮಟ್ಟದ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ

Last Updated :Feb 12, 2024, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.