ETV Bharat / state

ಮಹಿಳಾ ವಿರೋಧಿ ಹೇಳಿಕೆ ನೀಡಿರುವ ಹೆಚ್​ಡಿಕೆ ಕೂಡಲೇ ಕ್ಷಮೆ ಕೋರಬೇಕು: ವಿ.ಎಸ್. ಉಗ್ರಪ್ಪ - V S Ugrappa

author img

By ETV Bharat Karnataka Team

Published : Apr 14, 2024, 3:49 PM IST

Etv Bharatformer-mp-v-s-ugrappa-reaction-on-h-d-kumaraswamy-statement
ಮಹಿಳಾ ವಿರೋಧಿ ಹೇಳಿಕೆಗೆ ನೀಡಿರುವ ಹೆಚ್​ಡಿಕೆ ಕೂಡಲೇ ಕ್ಷಮೆ ಕೋರಬೇಕು: ವಿ.ಎಸ್.ಉಗ್ರಪ್ಪ

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ಬೆಂಗಳೂರು: ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಆದರೂ ಮಹಿಳೆಯರಿಗೆ ಗೌರವ ನೀಡುವಂತಹ ಕನಿಷ್ಠ ಜ್ಞಾನ ಅವರಿಗೆ ಇಲ್ಲವೇ?. ಮಹಿಳೆಯರಿಗೆ ಗೌರವ ನೀಡಬೇಕು ಎನ್ನುವುದು ಸಂವಿಧಾನದ ಆಶಯ. ಈ ಆಶಯದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹೆಚ್​ಡಿಕೆ ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವಾಗ ಮಹಿಳೆಯರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ‘ಹಳ್ಳಿಯ ಮಹಿಳೆಯರು ಗ್ಯಾರಂಟಿ ಯೊಜನೆಗಳಿಂದ ದಾರಿ ತಪ್ಪಿದ್ದಾರೆ. ಕೌಟುಂಬಿಕ ಜೀವನ ಏನಾಗಿದೆ ಎಂದು ನೋಡಬೇಕು’ ಎಂದು ಹೇಳಿದ್ದಾರೆ. ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ?. ನಿಮ್ಮ ಕುಟುಂಬದಲ್ಲಿಯೂ ಸಹ ಅನೇಕ ಜನ ಹೆಣ್ಣು ಮಕ್ಕಳಿದ್ದಾರೆ. ಈ ಪದ ಬಳಕೆಯ ಮೂಲಕ ಬಿಜೆಪಿ ಸೇರಿ ಮನುವಾದಿಯಾಗಿದ್ದೀರಿ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಈ ಮಹಿಳಾ ವಿರೋಧಿ ಹೇಳಿಕೆಗೆ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಹೆಚ್​ಡಿಕೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು: ಕಷ್ಟದಲ್ಲಿ ಇರುವ ಮಹಿಳೆಯರಿಗೆ ಹಣ ಕೊಡುವುದು ತಪ್ಪೇ?. ಉಚಿತವಾಗಿ ಅಕ್ಕಿ ನೀಡುವುದು ತಪ್ಪೇ?. ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದು ತಪ್ಪೇ?. ಯಾವ ರೀತಿಯಲ್ಲಿ ಮಹಿಳೆಯರು ದಾರಿ ತಪ್ಪಿದ್ದಾರೆ?. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಜೆಡಿಎಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೆ ಕುಮಾರಸ್ವಾಮಿ ಅವರ ವಿರುದ್ಧ ಮಹಿಳೆಯರಿಗೆ ಅಪಮಾನ ಮಾಡಲಾಗಿದೆ ಎಂದು ದೂರು ನೀಡಲಾಗುವುದು ಎಂದರು.

ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆ ವೇಳೆ 28 ಬಾರಿ ಬಂದು ಹೋದರು. ಎಷ್ಟು ಸಲ ಬೇಕಾದರೂ ಬರುವ ಸ್ವಾತಂತ್ರ್ಯ ನಿಮಗೆ ಇದೆ. ಆದ್ರೆ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ?. ಒಂದೇ ಒಂದು ನೀರಾವರಿ ಯೋಜನೆ ಕೊಟ್ಟಿಲ್ಲ. ರೈತರಿಗೆ ಅನುಕೂಲ ಮಾಡಿಲ್ಲ, ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಎಲ್ಲಿ ಹೋದಿರಿ?. ಎಚ್‌‌ಎಎಲ್, ಫುಡ್ ಪಾರ್ಕ್ ಎರಡೇ ಎರಡು ಕೊಟ್ಟು ಅದಕ್ಕೂ ಹಣ ಕೊಡದೆ ತೆವಳುವಂತೆ ಮಾಡಿದ್ದೀರಿ?. ಎಚ್‌ಎಎಲ್​ಗೆ ವಿಮಾನ ತಯಾರಿಕೆಗೆ ನೀಡುವುದು ಬಿಟ್ಟು ಅದಾನಿ ಕಂಪನಿಗೆ ನೀಡಿ ಕರ್ನಾಟಕಕ್ಕೆ ಮೋಸ ಮಾಡಿದ್ದು ನೀವೆ ಅಲ್ಲವೇ? ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ದೇಶದ ದೊಡ್ಡ ವಚನಭ್ರಷ್ಟ ಮೋದಿ: ಮೋದಿ ಎಂದರೆ ಸುಳ್ಳಿನ ಮಾತು. 2014ರಲ್ಲಿ ಕೊಟ್ಟ ಆಶ್ವಾಸನೆಗಳನ್ನೇ ಮತ್ತೆ ಈಗಲೂ ಕೊಟ್ಟಿದ್ದಾರೆ. ರೈತರ ಆದಾಯ ಡಬಲ್ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಈ ದೇಶದ ದೊಡ್ಡ ವಚನ ಭ್ರಷ್ಟರು ಎಂದರೆ ಮೋದಿ ಅವರು. ಏನೂ ಅಭಿವೃದ್ಧಿ ಮಾಡದೆ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತೀರಾ?. ಪಾಕಿಸ್ತಾನ, ಚೀನಾ ಗಡಿಗಳಲ್ಲಿ ದೇಶವನ್ನು ಕಾಪಾಡಿಲ್ಲ, ವಿದೇಶಿ ನೀತಿಯಲ್ಲಿ ವಿಫಲ ಇಷ್ಟು ಆಗಿದ್ದರೂ ಸಹ ಯಾವ ಮುಖ ಇಟ್ಟುಕೊಂಡು 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತೀರಿ? ಎಂದು ಟೀಕಿಸಿದರು.

4,463 ಕೋಟಿ ಬರ ಪರಿಹಾರ ಕೊಡದೆ ಕರ್ನಾಟಕದ ರೈತರನ್ನು ಕಡೆಗಣಿಸಿದ್ದೀರಿ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಬರ ಪರಿಹಾರ ಬಿಡುಗಡೆಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಗೊತ್ತಿದ್ದರೂ ನಾಟಕ ಮಾಡುತ್ತಿದ್ದಾರೆ. ಕಾನೂನು ಗೊತ್ತಿಲ್ಲದ, ಜನರ ಬಗ್ಗೆ ಕಾಳಜಿ ಗೊತ್ತಿಲ್ಲದ, ಆಡಳಿತ ಗೊತ್ತಿಲ್ಲದವರು ದೇಶದ ಪ್ರಧಾನಿ ಆಗಿರುವುದು ದುರಂತ. ಕೂಡಲೇ ಬರ ಪರಿಹಾರ ನೀಡದೆ ಇದ್ದರೆ ಕನ್ನಡಿಗರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಉಗ್ರಪ್ಪ ಕಿಡಿಕಾರಿದರು.

ಇದನ್ನೂ ಓದಿ: ಯಾವ ಆರ್​​ಎಸ್ಎಸ್ ನಾಯಕರು ಹೇಳಿದರೂ ಸಂವಿಧಾನ ಬದಲಾಯಿಸಲು ಸಾಧ್ಯ ಇಲ್ಲವೆಂದು ಮೋದಿ ಹೇಳಬೇಕಾಗಿತ್ತು: ಸಿದ್ದರಾಮಯ್ಯ - Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.