ETV Bharat / state

ಶಿವಮೊಗ್ಗದಲ್ಲಿ ಡಬಲ್ ಮರ್ಡರ್: ಕೊಲೆ ಮಾಡಲು ಬಂದವರೇ ಕೊಲೆಯಾದ್ರಾ? - Double Murder

author img

By ETV Bharat Karnataka Team

Published : May 8, 2024, 8:24 PM IST

Updated : May 8, 2024, 9:21 PM IST

ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

double murder
ಘಟನಾ ಸ್ಥಳ (ETV Bharat)

ಎಸ್​ಪಿ ಮಿಥುನ್ ಕುಮಾರ್ (ETV Bharat)

ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಬುಧವಾರ ಡಬಲ್ ಮರ್ಡರ್ ನಡೆದಿದೆ. ಕೊಲೆಯಾದವರನ್ನು ಸುಹೇಲ್ ಅಲಿಯಾಸ್ ಕಲಂದರ್ ಅಲಿಯಾಸ್ ಸೇಬು (32) ಹಾಗೂ ಗೌಸ್ (30) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಲು ಬಂದವರೇ ಕೊಲೆಗೀಡಾದ ಶಂಕೆ ವ್ಯಕ್ತವಾಗಿದೆ.

ಕೊಲೆಯಾದವರಲ್ಲಿ ಓರ್ವ ನಗರದ ಕೆ.ಆರ್.ಪುರಂ ಹಾಗೂ ಇನ್ನೊಬ್ಬ ಅಣ್ಣಾ ನಗರದ ನಿವಾಸಿಗಳೆಂದು ಗುರುತಿಸಲಾಗಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಸುಹೇಲ್ ಹಾಗೂ ಗೌಸ್ ಎಂಬುವರ ಕೊಲೆ ನಡೆದಿದೆ.

ಯಾಸೀನ್ ಖುರೇಷಿ ಗುಂಪು ಹಾಗೂ ಸುಹೇಲ್​ ಗುಂಪುಗಳ ನಡುವೆ ಜಗಳವಾಗಿದೆ. ಈ ಎರಡು ಗುಂಪುಗಳ ನಡುವೆ ಮೊದಲು ಅಣ್ಣನಗರದಲ್ಲಿ ಜಗಳ ಪ್ರಾರಂಭವಾಗಿದ್ದು, ಒಂದು ಗುಂಪನ್ನು ಇನ್ನೊಂದು ಗುಂಪು ಬೈಕ್​ನಲ್ಲಿ‌ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ದಾಳಿ ಮಾಡಿದೆ. ಈ ವೇಳೆ ಯಾಸೀನ್ ಖುರೇಷಿ ಹಾಗೂ ಆತನ ಗುಂಪು ಸುಹೇಲ್​ ಹಾಗೂ ಗೌಸ್​​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಶಿವಮೊಗ್ಗ ಎಸ್​​ಪಿ ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಐದಾರು ಬೈಕ್​ಗಳು ಸಿಕ್ಕಿವೆ. ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಎಸ್​ಪಿ ಪ್ರತಿಕ್ರಿಯೆ: ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್​ಪಿ ಮಿಥುನ್ ಕುಮಾರ್, ''ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಡಬಲ್ ಮರ್ಡರ್ ನಡೆದಿದೆ‌. ಗೌಸ್ ಹಾಗೂ ಸುಹೇಲ್ ಎಂಬುವರು ಕೊಲೆಗೀಡಾಗಿದ್ದಾರೆ. ಯಾಸೀನ್ ಖುರೇಷಿ ಗುಂಪು ಹಾಗೂ ಸುಹೇಲ್ ಗುಂಪುಗಳ ನಡುವೆ ಜಗಳವಾಗಿದ್ದು, ಸುಹೇಲ್ ಹಾಗೂ ಗೌಸ್ ಗುಂಪು ಕಟ್ಟಿಕೊಂಡು ಖುರೇಷಿ ಇರುವ ಜಾಗಕ್ಕೆ ಬಂದು ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. ಆಗ ಯಾಸೀನ್ ಖುರೇಷಿ ಹಾಗೂ ಆತನ ಗುಂಪು ಸುಹೇಲ್ ಮತ್ತು ಗೌಸ್​​ ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಅಪ್ರಾಪ್ತ ಮಗಳೊಂದಿಗೆ ಮದುವೆಗೆ ಒತ್ತಾಯ, ಅಣ್ಣ - ತಮ್ಮನ ಹತ್ಯೆ ಮಾಡಿದ ಬಾಲಕಿಯ ತಂದೆ - Double Murder

Last Updated :May 8, 2024, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.