ETV Bharat / state

ಎಕ್ಸ್ ಖಾತೆಗಳ ನಿರ್ಬಂಧ ಸಂಬಂಧದ ದಾಖಲೆಗಳನ್ನು ಅರ್ಜಿದಾರರಿಗೆ ನೀಡಲಾಗದು : ಕೇಂದ್ರ ಸರ್ಕಾರ

author img

By ETV Bharat Karnataka Team

Published : Feb 20, 2024, 5:45 PM IST

ಎಕ್ಸ್ ಖಾತೆಗಳ ನಿರ್ಬಂಧ ಸಂಬಂಧದ ದಾಖಲೆಗಳನ್ನು ಅರ್ಜಿದಾರರಿಗೆ ನೀಡಲಾಗದು ಎಂದು ಹೈಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಹೈಕೋರ್ಟ್‌
ಹೈಕೋರ್ಟ್‌

ಬೆಂಗಳೂರು : ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡಿದ ಖಾತೆಗಳನ್ನು ನಿರ್ಬಂಧಿಸುವಂತೆ (2009ರ ಖಾತೆಗಳ ನಿರ್ಬಂಧ ನಿಯಮಗಳ ಅಡಿಯಲ್ಲಿ) ನೇಮಕಗೊಂಡ ನಿಯೋಜಿತ ಅಧಿಕಾರಿ ನೀಡಿದ ಆದೇಶವನ್ನು ಪಡೆಯುವುದಕ್ಕೆ ಎಕ್ಸ್ ಕಾರ್ಪ್(ಟ್ವಿಟ್ಟರ್)ಗೆ ಅಧಿಕಾರವಿಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕೆಲವು ಖಾತೆಗಳನ್ನು ಬ್ಲಾಕ್ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 50 ಲಕ್ಷ ದಂಡ ವಿಧಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ, ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠಕ್ಕೆ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ವಿಭಾಗೀಯ ಪೀಠಕ್ಕೆ ಕೇಂದ್ರದ ಪರ ವಕೀಲರು ಈ ಮಾಹಿತಿ ನೀಡಿದರು.

ಅಲ್ಲದೆ, ಪರಿಶೀಲನಾ ಸಮಿತಿಯಿಂದ ಆದ ತೊಂದರೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಆದರೆ, ದಾಖಲೆಗಳನ್ನು ನೀಡುವಂತೆ ಕೋರುವುದಕ್ಕೆ ಅವಕಾಶವಿಲ್ಲ. ನಿಯಮ 14ರ ಅಡಿಯಲ್ಲಿ ನಡೆಯುವ ಪ್ರಕ್ರಿಯೆ ಆಂತರಿಕ ಮತ್ತು ಅತ್ಯಂತ ಸುರಕ್ಷಿತವಾಗಿರಲಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ತಿಳಿಸಿರುವಂತೆ ಪರಿಶೀಲನಾ ಸಮಿತಿ ಎಲ್ಲ ದಾಖಲೆಗಳ ಕುರಿತು ಶೋಧ ಮಾಡಿ ವರದಿಯನ್ನು ದಾಖಲಿಸಬಹುದಾಗಿದೆ.

ಈ ವಿಚಾರದಲ್ಲಿ ಸಮಿತಿ ಯಾವುದೇ ಪಕ್ಷಗಾರರನ್ನು ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ಕೇಂದ್ರದ ಪರ ವಕೀಲರು ವಿವರಿಸಿದರು. ಅಲ್ಲದೆ, ಪರಿಶೀಲನಾ ಸಮಿತಿಯ ನಿರ್ಧಾರದಿಂದ ತೊಂದರೆಗೊಳಗಾದ ಪಕ್ಷಗಾರರು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಆದರೆ, ಸಮಿತಿಯ ಕಾರ್ಯಕಲಾಪಗಳ ಮಧ್ಯಪ್ರವೇಶಕ್ಕೆ ಯಾವುದೇ ಪಕ್ಷಗಾರರಿಗೂ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಕೆಲವು ಖಾತೆಗಳನ್ನು ತುರ್ತಾಗಿ ನಿರ್ಬಂಧ ವಿಧಿಸಿ ಆದೇಶಿಸಿದ್ದರೂ, ಪರಿಶೀಲನಾ ಸಮಿತಿ 10 ಪ್ರಕರಣಗಳನ್ನು ಹಿಂಪಡೆದು, ಆ ಹತ್ತೂ ಖಾತೆಗಳ ಮರು ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟಿತ್ತು ಎಂದು ಸ್ವತಃ ಅರ್ಜಿದಾರರೇ ತಿಳಿಸಿದ್ದಾರೆ. ಆದರೆ, ಅದಕ್ಕೆ ಕಾರಣಗಳನ್ನು ಬಹಿರಂಗ ಪಡಿಸಿಲ್ಲ ಎಂದು ವಿವರಿಸಿದರು.

ಎಕ್ಸ್‌ಕಾರ್ಪ್‌ಗೆ ನೇರವಾಗಿ ಯಾವುದೇ ತೊಂದರೆಯಾಗಿಲ್ಲ: ಏಕ ಸದಸ್ಯ ಪೀಠದ ಮುಂದೆ ವಾದಿಸಿದ್ದ ಎಕ್ಸ್ ತನ್ನ ವೇದಿಕೆಯಲ್ಲಿ ಯಾವುದೇ ಖಾತೆ ಅಥವಾ ಟ್ವಿಟ್‌ಗಳನ್ನು ಹೊಂದಿಲ್ಲ. ಯಾವುದಾದರೂ ಖಾತೆದಾರರ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಎಕ್ಸ್​ಗೆ ಅಧಿಕಾರವಿಲ್ಲ. ಅಲ್ಲದೆ, ಎಕ್ಸ್‌ಕಾರ್ಪ್‌ಗೆ ನೇರವಾಗಿ ಯಾವುದೇ ತೊಂದರೆಯಾಗಿಲ್ಲ. ಮೂರನೇ ವ್ಯಕ್ತಿಯ ಆಕ್ಷೇಪಾರ್ಹ ಖಾತೆಗಳನ್ನು ನಿರ್ಬಂಧಿಸುವುದರಿಂದ ಯಾವ ರೀತಿಯಲ್ಲಿ ತೊಂದರೆ ಆಗಿದೆ ಎಂಬುದು ತಿಳಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ವಿವರಿಸಿದರು. ಕೇಂದ್ರದ ವಾದವನ್ನು ದಾಖಲಿಸಿಕೊಂಡಿರುವ ನ್ಯಾಯಪೀಠ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

ಇದನ್ನೂ ಓದಿ : ನಿವೃತ್ತರು, ಹಿರಿಯ ನಾಗರಿಕರನ್ನು ಆಯಾಸಗೊಳ್ಳುವಂತೆ ಮಾಡಬಾರದು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.