ETV Bharat / state

ಲೋಕಸಭಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ: ನಾಮಪತ್ರ ವಾಪಸ್ - Dingaleshwar Swamiji

author img

By ETV Bharat Karnataka Team

Published : Apr 22, 2024, 3:01 PM IST

Updated : Apr 22, 2024, 5:46 PM IST

dingaleshwar-swamiji
ಲೋಕಸಭಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ: ನಾಮಪತ್ರ ವಾಪಸ್

ಧಾರವಾಡ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆಗಿಳಿದಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಸಚಿನ್ ಪಾಟೀಲ್

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ವಿರುದ್ಧ ಸಿಡಿದೆದ್ದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

ಸ್ವಾಮೀಜಿಯವರ ಏಜೆಂಟರ್ ಆದ ಸಚಿನ್ ಪಾಟೀಲ್, ವಕೀಲ ಅಮೃತ ಬಳ್ಳೊಳ್ಳಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ವಾಪಸ್ ಪಡೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿನ್ ಪಾಟೀಲ್, "ಗುರುಗಳ ಆದೇಶದ ಪ್ರಕಾರ ನಾಮಪತ್ರ ವಾಪಸ್ ಪಡೆದುಕೊಳ್ಳಲಾಗಿದೆ. ಯಾವ ಕಾರಣಕ್ಕೆ ವಾಪಸ್ ಪಡೆದಿದ್ದಾರೋ ಗೊತ್ತಿಲ್ಲ. ಅವರ ಸೂಚನೆ ಪ್ರಕಾರ ನಾವು ನಾಮಪತ್ರ ವಾಪಸ್ ತೆಗೆದುಕೊಂಡಿದ್ದೇವೆ" ಎಂದು ಹೇಳಿದರು.

ಕಳೆದ ಏಪ್ರಿಲ್​ 8 ರಂದು ಬೆಂಗಳೂರಿನ ವೀರಶೈವ ಲಿಂಗಾಯತ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚರ್ಚೆ ಮಾಡಲಾಗಿದ್ದು, ಎಲ್ಲರೂ ಸೇರಿ ಒಂದು ತೀರ್ಮಾನ ಮಾಡಲಾಗಿದೆ. ನಾನು ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಎಲ್ಲರೂ ತಿಳಿಸಿದ್ದಾರೆ. ಹೀಗಾಗಿ ಕಣಕ್ಕಿಳಿಯುತ್ತಿರುವುದಾಗಿ ಶ್ರೀಗಳು ತಿಳಿಸಿದ್ದರು.

ಆ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದ್ದರು. ಲಿಂಗಾಯತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಯಾವುದೇ ಒತ್ತಡ ಹಾಗೂ ಆಮಿಷಕ್ಕೆ ಮಣಿಯುವುದಿಲ್ಲ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದರು.

ತದನಂತರ ಏಪ್ರಿಲ್​ 18 ರಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಮೀಜಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದರು. ಯಾವುದೇ ಮೆರವಣಿಗೆ ‌ಇಲ್ಲದೇ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ವಾಮೀಜಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಧರ್ಮ ಸಮನ್ವಯ ಸಾರುವ ಉದ್ದೇಶದಿಂದ ನಾಮಪತ್ರ ಸಲ್ಲಿಸಿದ್ದೇವೆ. ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ಹೇಳಿದ್ದೇನೆ. ನಮ್ಮ ಕನ್ನಡ ನಾಡಿಗೆ ತನ್ನದೇ ಆದ ಸಂಸ್ಕೃತಿ ಇದೆ. ನಾಡಿನ ಇತಿಹಾಸ ಪರಂಪರೆ ತಿರಸ್ಕಾರ ಮಾಡುವವರ ವಿರುದ್ಧ ಸಿಡಿದಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದರು.

ಇದೀಗ ದಿಂಗಾಲೇಶ್ವರ ಶ್ರೀಗಳು ಲೋಕ ಕದನದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದು, ನಾಮಪತ್ರ ವಾಪಸ್​ ಪಡೆದಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಸಂದರ್ಶನ: ನನ್ನ ತಾಯಿಯೇ ನನಗೆ ಸ್ಟಾರ್ ಪ್ರಚಾರಕಿ ಎಂದ ಮೃಣಾಲ್ ಹೆಬ್ಬಾಳ್ಕರ್ - MRINAL HEBBALKAR

Last Updated :Apr 22, 2024, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.