ETV Bharat / state

ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ‌ ಸ್ವಾಮೀಜಿ - Dingaleshwar Swamiji

author img

By ETV Bharat Karnataka Team

Published : Apr 18, 2024, 3:15 PM IST

Updated : Apr 18, 2024, 5:41 PM IST

Dingaleshwar Swamiji files nomination papers
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ‌

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿ ಇಂದು ಸಾಂಕೇತಿಕವಾಗಿ ತಮ್ಮ ನಾಮಪತ್ರ ಸಲ್ಲಿಸಿದರು.

ದಿಂಗಾಲೇಶ್ವರ‌ ಸ್ವಾಮೀಜಿ ನಾಮಪತ್ರ ಸಲ್ಲಿಕೆ

ಧಾರವಾಡ: ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಪ್ರಹ್ಲಾದ್​​ ಜೋಶಿ ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಇಂದು ಸಲ್ಲಿಸಿದ್ದಾರೆ. ಯಾವುದೇ ಮೆರವಣಿಗೆ ‌ಇಲ್ಲದೇ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ವಾಮೀಜಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸ್ವಾಮೀಜಿಯಿಂದ ನಗರದ ಟೌನ್​ ಹಾಲ್​ನಿಂದ ಮೆರವಣಿಗೆ ನಡೆಯಬೇಕಿತ್ತು. ಆದರೆ, ಮೆರವಣಿಗೆ ಮಾಡದೆ ಮೊದಲು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರವನ್ನು ಅವರು ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ‌ ಮತ್ತೊಮ್ಮೆ ಚುನಾವಣಾಧಿಕಾರಿಗಳ ಕಚೇರಿಗೆ ಬಂದರು.

ಈ ವೇಳೆ, ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಧರ್ಮ ಸಮನ್ವಯ ಸಾರುವ ಉದ್ದೇಶದಿಂದ ನಾಮಪತ್ರ ಸಲ್ಲಿಸಿದ್ದೇವೆ. ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಯಾರ ವಿರುದ್ಧ ಮಾತನಾಡುತ್ತಿದ್ದೇನೋ, ಅವರು ತೊಂದರೆ ಕೊಡುತ್ತಿದ್ದಾರೆ. ನೂರಾರು ವಿಘ್ನಗಳು ಬಂದಿವೆ. ಬಸವಾದಿ ಪರಂಪರೆ ನಾಡಿನಲ್ಲಿ ನಾಶವಾಗುತ್ತಿದೆ. ಭಸ್ಮ ಮತ್ತು ಭಂಡಾರ ಮಾಯವಾಗಿ ಬೇರೆ ಶಬ್ದಗಳು ಆಕ್ರಮಿಸಿಕೊಳ್ಳುತ್ತಿವೆ. ನಮ್ಮ ನಾಡಿಗೆ ತನ್ನದೇ ಆದ ಸಂಸ್ಕೃತಿ ಇದೆ. ನಮ್ಮ ಕನ್ನಡ ನಾಡಿನ ಇತಿಹಾಸ ಪರಂಪರೆ ತಿರಸ್ಕಾರ ಮಾಡುವವರ ವಿರುದ್ಧ ಸಿಡಿದಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಮುಂದುವರೆದು, ನಾಲ್ಕು ಸಲ ಸಂಸತ್​​ ಭವನ ಪ್ರವೇಶ ಮಾಡಿದವರು ಇದ್ದಾರೆ. ಅವರು ಬಸವಣ್ಣ, ಅಂಬೇಡ್ಕರ ಭಾವಚಿತ್ರ ತಮ್ಮ ಕಚೇರಿಯಿಂದ ತೆಗದು ಹಾಕಿದ್ದಾರೆ. ಮಹರ್ಷಿ ವಾಲ್ಮೀಕಿಗಳ ಭಾವಚಿತ್ರ ಸಹ ತೆಗೆದುಹಾಕಿದ್ದಾರೆ. ನಾಡಿನ ದಾರ್ಶನಿಕರು, ರೈತರು, ಮಹಾತ್ಮರನ್ನು, ಸಾಧು-ಸಂತರ, ಸರ್ವರ ಹಿತ ಬಯಸಬೇಕಿತ್ತು. ಅಧಿಕಾರ, ಹಣದ ಮದದಲ್ಲಿ ಎಲ್ಲರನ್ನೂ ನೋಡುತ್ತೇವೆಂಬ ಇದನ್ನೆಲ್ಲ ಮಾಡುತ್ತಿದ್ದಾರೆ. ಈ ಚುನಾವಣೆಯನ್ನು ನಾವು ಧರ್ಮಯುದ್ಧ ಎಂದು ಭಾವಿಸಿದ್ದೇವೆ. ಕ್ಷೇತ್ರ ಅಭಿವೃದ್ಧಿ ಬಿಟ್ಟು, ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ನಾಡಿಗೆ ಆದರ್ಶವಾಗುವ ಬದಲಿಗೆ ಮಾಡಿಗೆ ಮಾರಕವಾಗಿದ್ದಾರೆ ಎಂದು ದೂರಿದರು.

ನಮ್ಮ ಯಾವ ಪ್ರಶ್ನೆಗೂ ಅವರಿಗೆ ಉತ್ತರ ಕೊಡುವ ಮನಸ್ಥಿತಿ ಇಲ್ಲ. ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಇವರು ನಾಡಿಗೆ ಕಂಟಕವಾಗಿದ್ದಾರೆ. ಇವರ ಬದಲಾವಣೆಯೇ ನಮ್ಮ ಮೂಲ ಉದ್ದೇಶ. ಜನ ಹಣ ಭಯಕ್ಕೆ ಮತ ಚಲಾಯಿಸದೇ ಸ್ವಾಭಿಮಾನಕ್ಕಾಗಿ ಮತ ಚಲಾಯಿಸಬೇಕು. ನಮ್ಮ ಬಲ ಕ್ಷೀಣಿಸಿಲ್ಲ. ಯಾವ ಮಠಾಧೀಶರು ಬರಬೇಡಿ ಎಂದಿದ್ದೇನೆ. ಮಠಾಧೀಶರನ್ನು ನಾನು ಚುನಾವಣೆಗೆ ಬಳಸಿಕೊಳ್ಳುವುದಿಲ್ಲ. ಕೇವಲ ಸಲಹೆ ಪಡೆಯಲು ಮಾತ್ರ ಮಠಾಧೀಶರ ಸಾಥ್ ತೆಗೆದುಕೊಂಡಿದ್ದೇವೆ. ಮಠ ಬಿಡಿಸುವಷ್ಟು ತೊಂದರೆ ಕೊಡುತ್ತಿದ್ದಾರೆ. ನಮ್ಮ ಜೊತೆ ಇದ್ದ ಮಠಾಧೀಶರನ್ನು ದೂರ ಮಾಡುತ್ತಿದ್ದಾರೆ. ಬ್ರಿಟಿಷರ ಕಾಲದ ವ್ಯವಸ್ಥೆ ಧಾರವಾಡದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಸಿಎಂ ಆಗಿದ್ದವರು ಎಂಎಲ್‌ಎ ಟಿಕೆಟ್​ಗಾಗಿ ಹೋರಾಡಬೇಕಿತ್ತು. ಅವರಿಗೆ ತೊಂದರೆ ಕೊಟ್ಟು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಹ್ವಾನ ಕೊಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸಹ ಕರೆಯಿಸಿಕೊಂಡಿದ್ದರು. ನನ್ನ ಬಾಯಲ್ಲಿ ಅವರ ಹೆಸರು ಪದೇ ಪದೇ ಬರುವುದು ಬೇಡ. ನಿನ್ನೆ ರಾತ್ರಿ 20 ಜನ ಹೋಗಿ ನಮ್ಮ ಹಿರಿಯ ಗುರುಗಳಿಗೆ ಮಾನಸಿಕ ತೊಂದರೆ ಕೊಟ್ಟಿದ್ದಾರೆ. ಕೊನೆಗೆ ಅಲ್ಲಿನ ಭಕ್ತರು ಅವರನ್ನು ಹೊರಗೆ ಕಳುಹಿಸಿದ್ದಾರೆ. ನೀವು ಯಾವುದೇ ಪ್ರಯತ್ನ ಮಾಡಿದರೂ ಚುನಾವಣೆ ಕಣದಿಂದ ಹಿಂದೆ ಸರಿಯಲ್ಲ. ಕರ್ನಾಟಕದ ಬಹುತೇಕ ಎಲ್ಲ ಸ್ವಾಮೀಜಿಗಳು ನಮ್ಮ ವಿಚಾರ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇತ್ತು. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆಯ ಸ್ಥಿತಿ ನಿರ್ಮಾಣವಾಗಿದೆ. ಹಾಲಿ ಸಂಸದರಾದ ಪ್ರಲ್ಹಾದ್​​ ಜೋಶಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಸ್ವಾಮೀಜಿ, ''ಎಲ್ಲ ವರ್ಗದ ಜನರು ಈಗಿನ ಸಂಸದರಿಂದ ಸಂಕಷ್ಟ ಅನುಭವಿಸಿದ್ದಾರೆ. ಅವರು ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಾಡಿನ ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ'' ಎಂದು ಈ ಹಿಂದೆ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಹ್ಲಾದ್ ‌ಜೋಶಿಗೆ ಸೋಲಿನ ಭಯ ಶುರುವಾಗಿದೆ: ದಿಂಗಾಲೇಶ್ವರ ಸ್ವಾಮೀಜಿ

Last Updated :Apr 18, 2024, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.