ETV Bharat / state

ಪ್ರಹ್ಲಾದ್ ‌ಜೋಶಿಗೆ ಸೋಲಿನ ಭಯ ಶುರುವಾಗಿದೆ: ದಿಂಗಾಲೇಶ್ವರ ಸ್ವಾಮೀಜಿ - Lok Sabha Election 2024

author img

By ETV Bharat Karnataka Team

Published : Apr 15, 2024, 7:41 PM IST

Updated : Apr 15, 2024, 7:59 PM IST

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ರೈತ ಸಂಘಟನೆ ಬೆಂಬಲಿಸಲು ನಿರ್ಧರಿಸಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ತಿಳಿಸಿದ್ದಾರೆ.

Farmers Association meeting was held in a private hotel in Hubli city.
ಹುಬ್ಬಳ್ಳಿಯ ನಗರದ ಖಾಸಗಿ ಹೊಟೇಲ್‌ನಲ್ಲಿ ರೈತ ಸಂಘದ ಸಭೆ ನಡೆಯಿತು.

ಪಕ್ಷೇತರ ಅಭ್ಯರ್ಥಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು.

ಹುಬ್ಬಳ್ಳಿ: ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ನಮ್ಮ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಗಳು ಹಾಗೆಯೇ ಉಳಿದಿವೆ. ಎಲ್ಲ ವರ್ಗದ ಜನರು ಈಗಿನ ಸಂಸದರಿಂದ ಸಂಕಷ್ಟ ಅನುಭವಿಸಿದ್ದಾರೆ. ಅವರು ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಾಡಿನ ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.

ಈ ಚುನಾವಣೆ ನನ್ನ ಪಾಲಿಗೆ ಧರ್ಮಯುದ್ಧವಾಗಿದ್ದರೆ, ನಿಮ್ಮ ಪಾಲಿಗೆ ಸ್ವಾಭಿಮಾನದ ಯುದ್ಧವಾಗಲಿದೆ. ಕ್ಷೇತ್ರದ ಮತದಾರರು ತಮ್ಮ ಮತವನ್ನು ಹಣ, ಆಮಿಷಗಳಿಗೆ ಮಾರಿಕೊಳ್ಳದೇ ಮತದಾನ ಮಾಡಿ ಎಂದು ಮನವಿ ಮಾಡಿದರು.

ಯಡಿಯೂರಪ್ಪ ಅವರು ಸ್ವಾಮೀಜಿಗಳು ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ಸಾಹಸ ಎಂತಹದು ಎಂಬುದು ಅವರಿಗೆ ಗೊತ್ತಾಗಲಿದೆ. ಯಾರ ಜೊತೆ ಈ ಹಂತದಲ್ಲಿ ಚರ್ಚೆಗೆ ಹೋಗುವ ಅವಶ್ಯಕತೆ ಬಂದಿಲ್ಲ. ನಾವು ಹೋಗುತ್ತಿರುವುದು ಮತದಾರರ ಎದುರಿಗೆ ಮಾತ್ರ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ಟಾಂಗ್ ‌ನೀಡಿದರು.

ಈ ಚುನಾವಣೆಯಲ್ಲಿ ನನ್ನ ಸ್ಪರ್ಧೆಯಿಂದ ಲಿಂಗಾಯತರು ಮಾತ್ರವಲ್ಲ, ಬ್ರಾಹ್ಮಣರನ್ನು ಹಿಡಿದು ಎಲ್ಲರೂ ಖುಷಿಪಟ್ಟಿದ್ದಾರೆ. ಜೋಶಿಯವರು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೂ ಯಾರ್ಯಾರಿಗೆ ಏನೇನು ಕೊಡಬೇಕು ಕೊಡುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಎಲ್ಲ ಸಮುದಾಯದವರನ್ನು ಪ್ರೀತಿ ಮಾಡುತ್ತಿದ್ದಾರೆ. ಈ ಕೆಲಸವನ್ನು ಅವರು ಮೊದಲೇ ಮಾಡಿದ್ದರೆ ನಾವು ಚುನಾವಣೆಗೆ ಬರುತ್ತಿರಲಿಲ್ಲ. ಈಗ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಲೋಕಸಭಾ ಚುನಾವಣೆಯಲ್ಲಿ ರೈತ ಸಂಘಟನೆ ಮೂರನೇ ವ್ಯಕ್ತಿಯಾದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗೆ ಮತದಾನ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.

3 ಕೃಷಿ ಕಾಯ್ದೆಗಳಿಂದ ರೈತರಿಗೆ ಸಂಕಷ್ಟ: ಪ್ರಧಾನಿ ನರೇಂದ್ರ ಮೋದಿ ರೈತರ ಏಳ್ಗೆಗೆ ಶ್ರಮಿಸುವ ಭರವಸೆಯಿಂದ ಕಳೆದ 10 ವರ್ಷಗಳಿಂದ ಅವರನ್ನು ರೈತರು ಬೆಂಬಲಿಸುತ್ತ ಬಂದರು. ಆದರೆ, ಅವರು ನಮ್ಮನ್ನು ಬೆಂಬಲಿಸದೇ ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿತು. ರೈತರ ವಿರೋಧದ ಬಳಿಕ ಇದನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಹಕ್ಕನ್ನು ಆಯಾ ರಾಜ್ಯಗಳಿಗೆ ನೀಡಿ ಕೈ ತೊಳೆದುಕೊಂಡಿತು ಎಂದು ಮೇಟಿ ಟೀಕಿಸಿದರು.

ಕಾಂಗ್ರೆಸ್​ ಸರ್ಕಾರದಿಂದ ರೈತರಿಗೆ ಅನ್ಯಾಯ: ನಂತರ ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಇಂದು ರೈತರಿಗೆ ನ್ಯಾಯ ಒದಗಿಸದೇ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 3 ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯದೇ ಮುಂದುವರೆಸಿರುವುದು ಖಂಡನಾರ್ಹ ಎಂದು ವಾಸುದೇವ ಮೇಟಿ ಹೇಳಿದರು.

ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಸರ್ಕಾರಗಳು ರೈತರಿಗೆ ಮೋಸ ಮಾಡಿರುವ ಹಿನ್ನೆಲೆ ಪರ್ಯಾಯವಾಗಿ ನಾವು ಮೂರನೇ ವ್ಯಕ್ತಿಯನ್ನು ಬೆಂಬಲಿಸಲು ನಿರ್ಧರಿಸಿ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಫಕೀರ ದಿಂಗಾಲೇಶ್ವರ ಶ್ರೀಗಳನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಅವರನ್ನು ಬೆಂಬಲಿಸುವುದರೊಂದಿಗೆ ಮನೆಮನೆಗೆ ತೆರಳಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಇದನ್ನೂಓದಿ:ಧಾರವಾಡದಲ್ಲಿ ಪ್ರಹ್ಲಾದ್​ ಜೋಶಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ, ಜಗದೀಶ್ ಶೆಟ್ಟರ್​ ಸಾಥ್​ - Prahlad Joshi Nomination

Last Updated : Apr 15, 2024, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.