ETV Bharat / state

ಉಳವಿ ಜಾತ್ರೆಗೆ ಭಕ್ತರ ದಂಡು: ಮಳೆ-ಬೆಳೆಗೆ ಪ್ರಾರ್ಥಿಸಿ ಚಕ್ಕಡಿ ಹೊತ್ತು ಸಾಗುತ್ತಿರುವ ಯುವಕ

author img

By ETV Bharat Karnataka Team

Published : Feb 21, 2024, 12:47 PM IST

Etv Bharat
Etv Bharat

ಚನ್ನಬಸವೇಶ್ವರ ಮಹಾರಥೊತ್ಸವದ ಹಿನ್ನೆಲೆಯಲ್ಲಿ ಭಕ್ತರು ಉಳವಿಯತ್ತ ಆಗಮಿಸುತ್ತಿದ್ದಾರೆ. ಬರಗಾಲ ಹಿನ್ನೆಲೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯುವಕನೊಬ್ಬ ಚಕ್ಕಡಿ ಹೊತ್ತು ಸಾಗುತ್ತಿದ್ದಾರೆ.

ಉಳವಿ ಜಾತ್ರೆಗೆ ಭಕ್ತರ ದಂಡು: ಬರಗಾಲ ಹಿನ್ನೆಲೆ ಚಕ್ಕಡಿ ಹೊತ್ತು ಸಾಗುತ್ತಿರುವ ಯುವಕ

ಕಾರವಾರ/ಧಾರವಾಡ: ಉತ್ತರ ಕರ್ನಾಟಕ ಭಾಗದ ವೀರಶೈವರ ಪವಿತ್ರ ಸ್ಥಳ ಉಳವಿ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನೂರಾರು ಕಿಲೋ ಮೀಟರ್ ದೂರದಿಂದ ಕಾಲ್ನಡಿಗೆ ಮೂಲಕ ಚಕ್ಕಡಿಗಾಡಿ ಹಿಡಿದು ಜಾತ್ರೆ ಬರುವುದು ಇಲ್ಲಿನ ವಿಶೇಷವಾಗಿದೆ. ಈ ವಿಭಿನ್ನ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ವರ್ಷವೂ ಕೂಡ ಭಕ್ತರು ಜಾತ್ರೆಗೆ ಚಕ್ಕಡಿ ಗಾಡಿಗಳೊಂದಿಗೆ ಆಗಮಿಸುತ್ತಿದ್ದಾರೆ.

devotees-are-arriving-for-ulavi-channabasaveshwara-fair
ಉಳವಿ ಚನ್ನಬಸವೇಶ್ವರ ಜಾತ್ರೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಕ್ಷೇತ್ರದಲ್ಲಿ ಫೆ.24ರಂದು ಮಹಾರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಈಗಾಗಲೇ ಉಳವಿಯತ್ತ ಭಕ್ತರ ದಂಡು ಹರಿದು ಬರುತ್ತಿದೆ. ಪ್ರತಿ ವರ್ಷ ಭರತ ಹುಣ್ಣಿಮೆ ದಿನ ಉಳವಿ ಜಾತ್ರೆ ಹಾಗೂ ಚನ್ನ ಬಸವಣ್ಣನ ರಥೋತ್ಸವ ನಡೆಯುತ್ತದೆ.

ಜಾತ್ರೆಗೆ ಲಕ್ಷಾಂತರ ಭಕ್ತರು ಬಸ್​​ ಸೇರಿದಂತೆ ಇತರ ವಾಹನಗಳಲ್ಲಿ ಬರುತ್ತಾರೆ. ಆದರೆ, ಉತ್ತರ ಕರ್ನಾಟಕದ ಮಂದಿ ಚಕ್ಕಡಿಗಳನ್ನು ತೆಗೆದುಕೊಂಡು ಕಾಲ್ನಡಿಗೆಯಲ್ಲಿ ಬಂದು ದೇವರ ಸೇವೆ ಮಾಡುವುದೇ ಇಲ್ಲಿನ ವಿಶೇಷವಾಗಿದೆ. ಸುಮಾರು 200 ಕಿಲೋ ಮೀಟರ್​​ಗೂ ಅಧಿಕ ದೂರದಿಂದಲೂ ಭಕ್ತರು ಚಕ್ಕಡಿಯೊಂದಿಗೆ ಆಗಮಿಸುತ್ತಾರೆ. ಎತ್ತುಗಳನ್ನು ಬಸವಣ್ಣ ಎಂದು ನಂಬುವ ಭಕ್ತರು, ಚನ್ನಬಸವಣ್ಣನ ಜಾತ್ರೆಯಲ್ಲಿ ತಮ್ಮ ಎತ್ತುಗಳನ್ನು ಕಟ್ಟಿಕೊಂಡು ಜಾತ್ರೆಗೆ ಆಗಮಿಸಿ, ರಾಸುಗಳಿಗೆ ಪೂಜೆ ಸಲ್ಲಿಸುತ್ತಾರೆ.

devotees-are-arriving-for-ulavi-channabasaveshwara-fair
ಉಳವಿ ಚನ್ನಬಸವೇಶ್ವರ ಜಾತ್ರೆ

ಭಕ್ತರು ತಾವು ತಂಗುವಷ್ಟು ದಿನಕ್ಕೂ ಅಡುಗೆ ವಸ್ತುಗಳನ್ನೆಲ್ಲ ಚಕ್ಕಡಿಯಲ್ಲಿ ತುಂಬಿಕೊಂಡು ಸಾಗುತ್ತಾರೆ. ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಚಕ್ಕಡಿಯನ್ನು ನಿಲ್ಲಿಸಿ, ದಾರಿ ಮಧ್ಯದಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಮರುದಿನ ಬೆಳಗ್ಗೆ ಮತ್ತೆ ಪಯಣ ಆರಂಭಿಸುತ್ತಾರೆ. ವಿಶ್ರಾಂತಿ ಪಡೆಯುವ ಸಮಯದಲ್ಲಿ ದಿನಕ್ಕಾಗುವಷ್ಟು ಅಡುಗೆ ಸಿದ್ಧಪಡಿಸಿಕೊಂಡು, ಊಟ ಮಾಡುತ್ತ ಸಾಗುತ್ತಾರೆ ಎನ್ನುತ್ತಾರೆ ಬೆಳಗಾವಿ ಭಾಗದ ರೈತ ಮಂಜುನಾಥ ಅವರು.

ಜಾತ್ರೆಗೆ ವಿವಿಧೆಡೆಗಳಿಂದ ಭಕ್ತರು ಸುಮಾರು 500ಕ್ಕೂ ಅಧಿಕ ಚಕ್ಕಡಿಗಳನ್ನು ತೆಗೆದುಕೊಂಡು ಆಗಮಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಉಳವಿಯು ಕಾಡಿನ ಮಧ್ಯ ಇದ್ದುದ್ದರಿಂದ ಈ ಹಿಂದೆ ರಸ್ತೆ ಸಂಪರ್ಕ ಇಲ್ಲದೇ ಜಾತ್ರೆಗೆ ಎಲ್ಲರೂ ಚಕ್ಕಡಿ ತೆಗೆದುಕೊಂಡೇ ಬರುತ್ತಿದ್ದರಂತೆ. ಆದರೆ, ಇತ್ತೀಚೆಗೆ ರಸ್ತೆ, ಬಸ್​​ ಸೌಲಭ್ಯ ಇರುವುದರಿಂದ ಹಲವರು ವಾಹನಗಳಲ್ಲಿ ಬಂದರೆ, ಇನ್ನೂ ಹಲವರು ಸಂಪ್ರದಾಯದಂತೆ ಚಕ್ಕಡಿಯೊಂದಿಗೆ ಆಗಮಿಸುತ್ತಾರೆ.

devotees-are-arriving-for-ulavi-channabasaveshwara-fair
ಉಳವಿ ಚನ್ನಬಸವೇಶ್ವರ ಜಾತ್ರೆ

ಚಕ್ಕಡಿ ಗಾಡಿಯನ್ನೇ ಹೊತ್ತು ಹೊರಟ ಯುವಕ: ಬರಗಾಲ ಹಿನ್ನೆಲೆಯಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಯುವಕನೊಬ್ಬ ಚಕ್ಕಡಿ ಹೊತ್ತು ಉಳವಿ ಚನ್ನಬಸವೇಶ್ವರ ಜಾತ್ರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಈರಣ್ಣ ಕರಿಕಟ್ಟಿ ಪಾದಯಾತ್ರೆ ಹೊರಟವರು. ಹೆಬ್ಬಳ್ಳಿ ಗ್ರಾಮದಿಂದ ಮಂಗಳವಾರ ಬೆಳಗ್ಗೆ ಪಾದಯಾತ್ರೆ ಪ್ರಾರಂಭಿಸಿದ್ದು, ಮೂರು ದಿನಗಳಲ್ಲಿ ಯುವಕರು ಉಳವಿಗೆ ತಲುಪಲಿದ್ದಾರೆ.

ಪ್ರತಿ ವರ್ಷ ಎತ್ತುಗಳೊಂದಿಗೆ ಚಕ್ಕಡಿ ಸಮೇತ ಉಳವಿಗೆ ಹೋಗುತ್ತಿದ್ದರು. ಆದರೆ, ಈ ಸಲ ಬರಗಾಲದ ಕಾರಣ ಎತ್ತುಗಳ ಸಮೇತ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ವಿನೂತನವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕಳೆದ ವರ್ಷ ಚಕ್ಕಡಿ ಗಾಲಿ ಉರುಳಿಸುತ್ತ ಪಾದಯಾತ್ರೆ ಮಾಡಿದ್ದ ಯುವಕ, ಈ ಸಲ ಚಕ್ಕಡಿ ಗಾಡಿಯನ್ನೇ ಎಳೆದುಕೊಂಡು ಹೊರಟಿದ್ದಾರೆ. ಸುಮಾರು 80 ಕೆ.ಜಿ ತೂಕವುಳ್ಳ ಚಕ್ಕಡಿಯನ್ನು ಹೊತ್ತಿದ್ದಾರೆ. ಯುವಕನಿಗೆ ಗ್ರಾಮದ ಇತರ ಯುವಕರು ಸಾಥ್ ನೀಡಿದ್ದಾರೆ.

devotees-are-arriving-for-ulavi-channabasaveshwara-fair
ಉಳವಿ ಚನ್ನಬಸವೇಶ್ವರ ಜಾತ್ರೆ

ಕಳೆದ 10 ವರ್ಷಗಳಿಂದ ಪಾದಯಾತ್ರೆ ಮಾಡುತ್ತಾ ಬಂದಿರುವ ಈರಣ್ಣ ಹುಬ್ಬಳ್ಳಿ ಸಿದ್ದಾರೂಢ ಮಠ ಹಾಗೂ ಸವದತ್ತಿ ಯಲ್ಲಮ್ಮನ ಜಾತ್ರೆಗೂ ಸಹ ಚಕ್ಕಡಿ ಹೊತ್ತು ಹೋಗಿದ್ದರು. ಅಲ್ಲದೇ, ವಿವಿಧ ಧಾರ್ಮಿಕ ಸ್ಥಳಗಳಿಗೆ ಪಾದಯಾತ್ರೆ ಮಾಡಿರುವುದರಿಂದ ಕುಟುಂಬಕ್ಕೆ ಒಳ್ಳೆಯದಾಗಿದೆ. ದೇವರ ದಯೆಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೇಡಾರಂ ಸಮ್ಮಕ್ಕ ಸರಳಮ್ಮ ಜಾತ್ರೆ: ಗಿರಿಜನರ ಬೃಹತ್ ಜಾತ್ರೆಗೆ ಸಕಲ ಸಿದ್ಧತೆ - ವಿಶೇಷತೆ ಏನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.