ETV Bharat / state

ಕಾಂಗ್ರೆಸ್‌ ಸರ್ಕಾರದಲ್ಲೂ ಅಧಿಕಾರಿಗಳು 40% ಕಮಿಷನ್ ಪಡೆಯುವುದು ಮುಂದುವರೆದಿದೆ: ಕೆಂಪಣ್ಣ

author img

By ETV Bharat Karnataka Team

Published : Feb 8, 2024, 9:30 PM IST

Updated : Feb 8, 2024, 10:44 PM IST

contractors-association-president-kempanna-made-percentage-bomb-against-the-congress-government
ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಪರ್ಸೆಂಟೇಜ್ ಬಾಂಬ್ ಸಿಡಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ರಾಜ್ಯ ಸರ್ಕಾರದಲ್ಲಿಯೂ ಅಧಿಕಾರಿಗಳು 40 ಪರ್ಸೆಂಟ್ ಕಮಿಷನ್ ಪಡೆಯುವುದು ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್​​ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ನಾಯಕರು ದೊಡ್ಡ ಹೋರಾಟವನ್ನೇ ಮಾಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೂ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪರ್ಸೆಂಟೇಜ್ ಬಾಂಬ್ ಸಿಡಿಸಿದ್ದಾರೆ.

ಗುರುವಾರ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಲ್ಲಿ ಮಾತನಾಡಿದ ಅವರು, ''ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದರು. ಬಿಜೆಪಿ ಬಳಿಕ, ಕಾಂಗ್ರೆಸ್ ಸರ್ಕಾರದಲ್ಲೂ 40 ಪರ್ಸೆಂಟ್ ಕಮಿಷನ್ ಮುಂದುವರೆದಿದೆ. ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ನೇರವಾಗಿ ಹಣ ಕೇಳುತ್ತಿದ್ದರು. ಈಗ ಅಧಿಕಾರಿಗಳೇ ನೇರವಾಗಿ ಹಣ ಕೇಳುತ್ತಿದ್ದಾರೆ. ಪ್ರತಿ ಟೆಂಡರ್​​​ನಲ್ಲೂ ಹಣ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ಸದ್ಯದಲ್ಲೇ ಅಧಿಕಾರಿಗಳು ಎಂಜಿನಿಯರ್​​ಗಳ ದಾಖಲೆ ಬಿಡುಗಡೆ ಮಾಡುವುದಾಗಿ'' ತಿಳಿಸಿದರು.

''ರಾಜ್ಯದ ಎಲ್ಲ ಇಲಾಖೆಯಲ್ಲೂ ಅಧಿಕಾರಿಗಳಿಂದಲೇ ಭ್ರಷ್ಟಾಚಾರದ ಬೇರೂರಿದೆ. ಹೆಜ್ಜೆ ಹೆಜ್ಜೆಗೂ ಮಿತಿಮೀರಿದ ಭ್ರಷ್ಟಾಚಾರಿ ಅಧಿಕಾರಿಗಳಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟ ಅಧಿಕಾರಿಗಳಿದ್ದಾರೆ'' ಎಂದು ಕೆಂಪಣ್ಣ ದೂರಿದರು.

''ಪ್ಯಾಕೇಜ್ ಸಿಸ್ಟಂ ಬಂದ್​​ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ. ಬೇರೆ ಜಿಲ್ಲೆಗಳಲ್ಲೂ ಕರೆಯಲಾಗಿದೆ. ಇದರಲ್ಲಿ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ಹಣ ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ, ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್ ಕೂಡಲೇ ಸರ್ಕಾರ ರದ್ದುಗೊಳಿಸಬೇಕು'' ಎಂದು ಒತ್ತಾಯಿಸಿದರು.

''ವಿವಿಧ ಇಲಾಖೆಗಳ ಟೆಂಡರ್ ನೀಡಿರುವ ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷಗಳೇ ಕಳೆದಿವೆ. ಹೀಗಾದರೂ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಶೇ.40 ಕಮಿಷನ್ ಆಸೆಯಲ್ಲಿರುವ ಅಧಿಕಾರಿಗಳ ವಿರುದ್ಧ ಸಮಯ ನೋಡಿ ದೂರು ನೀಡುತ್ತೇನೆ'' ಎಂದು ಹೇಳಿದರು.

ತನಿಖೆಗೆ ಅಶ್ವತ್ಥನಾರಾಯಣ ಆಗ್ರಹ: ಕೆಂಪಣ್ಣ ಆರೋಪದ ಕುರಿತಂತೆ ಜಸ್ಟಿಸ್ ನಾಗಮೋಹನದಾಸ್ ಸಮಿತಿಯು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವ್ಯವಹಾರದ ಕುರಿತು ನ್ಯಾಯಮೂರ್ತಿ ನಾಗಮೋಹನ್‍ದಾಸ್ ಸಮಿತಿ ಮೂಲಕ ತನಿಖೆ ಮಾಡಿಸುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು. ನ್ಯಾ. ನಾಗಮೋಹನ್‍ದಾಸ್ ಅವರು ಕೆಂಪಣ್ಣ ಮಾಡಿದ ಆರೋಪಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೆಂಪಣ್ಣರನ್ನು ಉಪಯೋಗಿಸಿಕೊಂಡು ನಮ್ಮ ಸರ್ಕಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆಸಿದ್ದರು. ಪೇ ಸಿಎಂ ಪೋಸ್ಟರ್ ಹಾಕಿಸಿದ್ದರು. ಅದೇ ಕೆಂಪಣ್ಣ ಇವತ್ತು ಈ ಸರ್ಕಾರ, ಸರ್ಕಾರದ ಆಡಳಿತಶಾಹಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ಸರ್ಕಾರದ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ ಎಂದು ಅಶ್ವತ್ಥನಾರಾಯಣ ಆರೋಪಿಸಿದರು.

ಅಧಿಕಾರಿಗಳ ಬಹಿರಂಗಪಡಿಸಲು ಮುನಿರತ್ನ ಒತ್ತಾಯ: ''ಕಾಂಗ್ರೆಸ್ ಪರ ಇದ್ದಂತಹ ವ್ಯಕ್ತಿ ಅವರ ವಿರುದ್ಧವೇ 40% ಕಮೀಷನ್ ಆರೋಪ‌ ಮಾಡುತ್ತಿದ್ದಾರೆ. ಅಧಿಕಾರಿಗಳೇ ಕಮಿಷನ್ ಸಂಗ್ರಹ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ ಅಂತ ಕೆಂಪಣ್ಣ ಆರೋಪಿಸಿದ್ದು, ಯಾವೆಲ್ಲ ಅಧಿಕಾರಿಗಳು ಕಮೀಷನ್ ಏಜೆಂಟ್‌ಗಳಾಗಿದ್ದಾರೆ ಅಂತ ಬಹಿರಂಗಪಡಿಸಬೇಕು'' ಎಂದು ಮಾಜಿ ಸಚಿವ ಮುನಿರತ್ನ ಆಗ್ರಹಿಸಿದ್ದಾರೆ.

''ನಮ್ಮ ಅವಧಿಯಲ್ಲಿ ಕೆಂಪಣ್ಣ ಕಮೀಷನ್ ಆರೋಪ ಮಾತ್ರ ಮಾಡಿದ್ದರು. ಆದರೆ ಅದರಲ್ಲಿ ಸ್ಪಷ್ಟತೆ ಇರಲಿಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದಾಗಲೂ ಅವರು ದಾಖಲೆ ಕೊಟ್ಟಿರಲಿಲ್ಲ. ಈಗ ಕೆಂಪಣ್ಣ ಸತ್ಯ ಹೇಳಿದ್ದಾರೆ. ಆ ಅಧಿಕಾರಿಗಳು ಯಾರು ಅಂತ ಹೇಳಲಿ'' ಎಂದು ಮುನಿರತ್ನ ಒತ್ತಾಯ ಮಾಡಿದರು.

ಇದನ್ನೂ ಓದಿ: ಇಂದು ಸಲ್ಲಿಕೆಯಾದ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು: ಸಿಎಂ ಸಿದ್ದರಾಮಯ್ಯ

Last Updated :Feb 8, 2024, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.