ETV Bharat / state

ರಾಜ್ಯದಲ್ಲಿ‌ ನಾವು 20 ಸ್ಥಾನ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ - CM Siddaramaiah

author img

By ETV Bharat Karnataka Team

Published : Apr 30, 2024, 9:30 PM IST

Updated : Apr 30, 2024, 9:35 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೂ ಪ್ರತಿಕ್ರಿಯಿಸಿದರು.

ಸಿಎಂ ಸಿದ್ದರಾಮಯ್ಯ ವಿಶ್ವಾಸ

ಬೆಳಗಾವಿ: ನಾವು ಭರವಸೆ ನೀಡಿದಂತೆ‌ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ಆದರೆ, ಮೋದಿಯವರು 2014 ಹಾಗೂ 2019ರಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ, ಕಾಂಗ್ರೆಸ್ ಪರ ಬೆಂಬಲ ನಿರೀಕ್ಷೆಗೆ ಮೀರಿ ಕಂಡುಬರುತ್ತಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿಯವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗೋಕಾಕಿನಲ್ಲಿ ಪ್ರತಿಕ್ರಿಯಿಸುತ್ತಾ, ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಮಣಿಪುರ ಹಿಂಸಾಚಾರದಲ್ಲಿ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ?. 30 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 4% ಮೀಸಲಾತಿಯನ್ನು ರದ್ದು ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಹೋದಾಗ, ಇರುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಬೊಮ್ಮಾಯಿ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿತು ಎಂದು ತಿರುಗೇಟು ಕೊಟ್ಟರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ವೇ ಮಾಡಿಸಿ, ಮಹಿಳೆಯರ ಬಂಗಾರವನ್ನೂ ಕಿತ್ತುಕೊಳ್ಳುತ್ತಾರೆ ಎಂಬ ಮೋದಿ ಹೇಳಿಕೆಗೆ, ಕೇವಲ ರಾಜಕಾರಣಕ್ಕಾಗಿ ಹಾಗೂ ಮತಗಳಿಗಾಗಿ ಇಂತಹ ಹಸಿ ಸುಳ್ಳುಗಳನ್ನು ಮೋದಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಕಳೆದ ಐದು ದಶಕಗಳಿಂದ ದೇಶದಲ್ಲಿ ಅಧಿಕಾರದಲ್ಲಿತ್ತು, ಎಂದಾದರೂ ಮಹಿಳೆಯರ ತಾಳಿಗಳನ್ನು ಕಸಿದುಕೊಂಡಿದ್ದಾರೆಯೇ?. ದೇಶದ ಜವಾಬ್ದಾರಿಯುತ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನು ಏಕೆ ನೀಡುತ್ತಿದ್ದಾರೆ?. ವಿದೇಶದಿಂದ ಕಪ್ಪು ಹಣ ತಂದು ಖಾತೆಗಳಿಗೆ ಜಮೆ ಮಾಡುವ ಬಗ್ಗೆ, ರೈತರ ಆದಾಯ ದುಪ್ಪಟ್ಟು, 2 ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಹಣದುಬ್ಬರು ಕಡಿಮೆ ಮಾಡುವ ಯಾವುದೇ ಭರವಸೆಗಳನ್ನು ಮೋದಿ ಈಡೇರಿಸಲಿಲ್ಲ ಎಂದರು.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ, ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿದೆ. ಆ ತಂಡ ತಮ್ಮ ಪಾಡಿಗೆ ಕೆಲಸ ಮಾಡುತ್ತಿದೆ. ಎಸ್ಐಟಿ ಸಾಂವಿಧಾನಿಕವಾಗಿ ರೂಪಗೊಂಡ ಸಂಸ್ಥೆ. ವೈಯಕ್ತಿಕವಾಗಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ತನಿಖಾ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪೆನ್​ ಡ್ರೈವ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ಇದೇ ವೇಳೆ ನಿರಾಕರಿಸಿದರು.

ಪ್ರಧಾನಿ ಮೋದಿ, ಸಿದ್ದರಾಮಯ್ಯನವರ ಮನೆತನದ ಮರ್ಯಾದೆ ಉಳಿಸಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ, ಕುಮಾರಸ್ವಾಮಿ ಹೇಳುತ್ತಿರುವುದು ಎಲ್ಲವೂ ಸುಳ್ಳು. ನನ್ನ ಪುತ್ರನ ಸಾವು ವಿದೇಶದಲ್ಲಿ ಸಂಭವಿಸಿದ್ದು, ದೇಶಕ್ಕೆ ಪಾರ್ಥಿವ ಶರೀರವನ್ನು ಕರೆತರಲಾಯಿತು. ಇದರಲ್ಲಿ ನರೇಂದ್ರ ಮೋದಿ ಅಥವಾ ಇತರರ ಸಹಾಯ ನಾನು ಕೇಳಿರಲಿಲ್ಲ. ಕುಮಾರಸ್ವಾಮಿ ಆರೋಪ ಎಲ್ಲವೂ ಸುಳ್ಳೆಂದರು.

ಇದನ್ನೂ ಓದಿ: ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಮಾನತು: ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - HASSAN PENDRIVE CASE

Last Updated :Apr 30, 2024, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.