ETV Bharat / state

ರಾಜ್ಯವನ್ನು ಮತಾಂಧರ ಯುದ್ಧಭೂಮಿಯಾಗಿ ಪರಿವರ್ತಿಸಿದ ಕಾಂಗ್ರೆಸ್: ಬಿ.ಎಸ್.ಯಡಿಯೂರಪ್ಪ - Yediyurappa

author img

By ETV Bharat Karnataka Team

Published : Apr 21, 2024, 1:17 PM IST

ಹುಬ್ಬಳ್ಳಿಯಲ್ಲಿ ನಡೆದ ಯುವತಿ ಹತ್ಯೆ, ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

Congress govt  Former CM BS Yediyurappa  Bengaluru  Congress Vs Bjp
ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ರಾಜ್ಯವನ್ನು ಮತಾಂಧರ ಯುದ್ಧ ಭೂಮಿಯಾಗಿ ಪರಿವರ್ತಿಸಿದೆ: ಬಿಎಸ್​ವೈ ಗರಂ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.

ಬೆಂಗಳೂರು: ''ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ರಾಜ್ಯವನ್ನು ಮತಾಂಧರ ಯುದ್ದ ಭೂಮಿಯನ್ನಾಗಿ ಪರಿವರ್ತಿಸಿದೆ'' ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

''ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ‌ ಗ್ಯಾರಂಟಿ ಕಳೆದುಕೊಂಡಿದ್ದಾರೆ.‌ ಹುಬ್ಬಳ್ಳಿಯಲ್ಲಿ ನೇಹಾ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.‌ ತನ್ನದೇ ಪಕ್ಷದ ನಾಯಕನ ಮಗಳ ಹತ್ಯೆಗೆ ನ್ಯಾಯ ಒದಗಿಸಲು ಆಗಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಮತಾಂಧರು ಕಾರು ಹರಿಸಿದ್ದಾರೆ. ರಾಮ ನವಮಿ ದಿನದಂದು ರಾಮಭಕ್ತರ ಮೇಲೆ ಹಲ್ಲೆ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಉಡುಪಿಯಲ್ಲಿ ಹಾಸ್ಟೆಲ್​ನಲ್ಲಿ ಹೆಣ್ಣುಮಗಳ ಚಿತ್ರೀಕರಣ ಪ್ರಕರಣ, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣಗಳಿಂದ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.

''ಮಂಡ್ಯದಲ್ಲಿ ಪೊಲೀಸರು ಒತ್ತಾಯಪೂರ್ವಕವಾಗಿ ಕೇಸರಿ ಧ್ವಜವನ್ನು ಕೆಳಗಿಳಿಸಿದ್ದಾರೆ. ವಿಧಾನಸೌಧದಲ್ಲಿ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಮಹಿಳೆಯರಿಗೆ ಭದ್ರತೆ, ನೀರಿಗೆ ಇಲ್ಲ ಗ್ಯಾರಂಟಿ.‌ ಗಲಭೆಕೋರರಿಗೆ, ಉಗ್ರರಿಗೆ ರಕ್ಷಣೆ ಗ್ಯಾರಂಟಿ, ವಿದ್ಯುತ್ ದರ ಹೆಚ್ಚಳದ ಗ್ಯಾರಂಟಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಯನ್ನು ಪ್ರೋತ್ಸಾಹಿಸುತ್ತಿದೆ'' ಎಂದು ಕಿಡಿಕಾರಿದರು.

''700ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕ್ರೂರ, ಕಲ್ಲು ಬಂಡೆ ಹೃದಯದ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಒಂದು ಕಿ.ಮೀ. ರಸ್ತೆ ಮಾಡಲು ಆಗಿಲ್ಲ‌. ನಾನೇ ಬೇಕಾದರೆ ತೋರಿಸುತ್ತೇನೆ. ತುಘಲಕ್ ಸರ್ಕಾರ ಇದು. ಜನರೇ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ'' ಎಂದರು.

ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳ ಹೆಸರು ಹೇಳಲಿ: ''ರಾಜ್ಯದ 28 ಕ್ಷೇತ್ರಗಳನ್ನೂ ಮೋದಿ ಆಶೀರ್ವಾದದಿಂದ ಗೆದ್ದು ಬರುತ್ತೇವೆ. ಕಾಂಗ್ರೆಸ್ ಮೂರು ನಾಲ್ಕು ಕ್ಷೇತ್ರದ ಹೆಸರು ಹೇಳಲಿ. ಅಧಿಕಾರ ಇದೆ ಎಂಬ ದರ್ಪ ಇದೆ ಅವರಿಗೆ. ಜಾಹೀರಾತು ಮೂಲಕ ಜನರ ದಾರಿ ತಪ್ಪಿಸುವ ಭ್ರಮೆಯಲ್ಲಿದ್ದಾರೆ. ಜನ ವಿರೋಧಿ ಆಡಳಿತ ಇರುವ ಸರ್ಕಾರಕ್ಕೆ ಯಾವುದೇ ಜನಮನ್ನಣೆ ಸಿಗಲ್ಲ.‌ ಲೋಕಸಭೆ ಗೆಲ್ಲುವ ಐದು ಕ್ಷೇತ್ರಗಳ ಹೆಸರು ಹೇಳಲಿ. ರಾಜಕೀಯ ಡೊಂಬರಾಟದಿಂದ ಏನೂ ಆಗಲ್ಲ'' ಎಂದು ಹೇಳಿದರು.

''ಕಳೆದ ಬಾರಿ ಕಾಂಗ್ರೆಸ್ ದೇಶದಲ್ಲಿ ಕೇವಲ 53 ಸೀಟ್ ಗೆಲ್ಲಲಷ್ಟೇ ಸಾಧ್ಯವಾಗಿದೆ. ಈ ಬಾರಿ 50 ಸ್ಥಾನ ಗೆಲ್ಲಲಾಗಲ್ಲ. ಕರ್ನಾಟಕದಲ್ಲಿ ಒಂದೂ ಸೀಟು ಗೆಲ್ಲುವುದಕ್ಕೆ ಆಗುವುದಿಲ್ಲ. ತೆರಿಗೆ ಅನ್ಯಾಯದ ಬಗ್ಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ಪದೇ ಪದೇ ಅದನ್ನೇ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ'' ಎಂದು ಗರಂ ಆದರು.

ಇದನ್ನೂ ಓದಿ: 25 ಸ್ಥಾನ ಗೆಲ್ಲಿಸಿದ ಕರ್ನಾಟಕಕ್ಕೆ ಒಂದೇ ಸಂಪುಟ ಸ್ಥಾನ ನೀಡಿದ್ದು ರಾಜ್ಯಕ್ಕೆ ಮಾಡಿದ ಅವಮಾನ: ತೆಲಂಗಾಣ ಸಿಎಂ - Revanta Reddy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.