ETV Bharat / state

ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

author img

By ETV Bharat Karnataka Team

Published : Feb 20, 2024, 8:38 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ದಲಿತರನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು ಕೇಂದ್ರ ಸರ್ಕಾರ ದೇಶಾದ್ಯಂತ ಅನ್ಯಯವಾಗುವಂತೆ ಉಪಯೋಜನೆ ಕಾಯ್ದೆಗೆ ತರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರದ್ದು 2019 ರಿಂದ 2023ರ ವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ. ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಗಾಳಿ ಇಲ್ಲದೆ ಕೆಟ್ಟು ನಿಂತಿರುವ ಬಸ್ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ನೀಡಿದ್ದ ಹೇಳಿಕೆಗೆ ಇಂದು ವಿಧಾನಸಭೆಯಲ್ಲಿ ಉತ್ತರ ನೀಡಿ ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023-24 ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದರು.

ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನಕ್ಕಾಗಿ 2019 ರಿಂದ ಇಲ್ಲಿಯವರೆಗೆ 1178 ಕೋಟಿ ರೂ. ಬಿಡುಗಡೆಯಾಗಿದೆ. ಈ ವರ್ಷ 1172 ಕೋಟಿ ರೂ.ಗಳಲ್ಲಿ 971 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರೈತರಿಗೆ 3.00 ರೂ.ಗಳಿಂದ 5. ರೂ.ಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

ಸರ್ಕಾರದ ನೀತಿ, ಮುನ್ನೋಟವನ್ನು ಜನತೆಯ ಮುಂದಿಟ್ಟಿದ್ದಾರೆ: ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು.

ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಉಪಯೋಜನೆಯ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂಬ ಪ್ರತಿಪಕ್ಷ ಮಾಡಿದ ಗಂಭೀರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ದೇಶ ಹಾಗೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿಗೆ ತರುವಂತೆ ಸವಾಲು ಹಾಕಿದರು. ಐದು ಗ್ಯಾರಂಟಿ ಯೋಜನೆಗಳಿಂದ ಬಡವರ ಜೀವನ ಮಟ್ಟ ಸುಧಾರಿಸಿವೆ ಎಂದು ಸಮರ್ಥಿಸಿಕೊಂಡರು.

ಆ ವೇಳೆ ಬಿಜೆಪಿಯ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅರವಿಂದ ಬೆಲ್ಲದ್ ಸೇರಿದಂತೆ ಅನೇಕರು ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 12 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ ರಹಿತವಾಗಿ ಜಾರಿಗೊಳಿಸಲಾಗಿದೆ. ಯೋಜನೆಯ ಫಲಾನುಭವಿಗಳಲ್ಲಿ ದಲಿತರು ಇದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿಗಾಗಿ ಉಪಯೋಜನೆ ಕಾಯ್ದೆ ರೂಪಿಸಿದ್ದೇ ನಮ್ಮ ಸರ್ಕಾರ. ದಲಿತರ ಬಗ್ಗೆ ಕಾಳಜಿ ತೋರಿಸುವ ಬಿಜೆಪಿ ತನ್ನ ಆಡಳಿತ ಇರುವ ರಾಜ್ಯಗಳಲ್ಲಿ ಇಂತಹ ಕಾಯ್ದೆಯನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು.

ವಾಗ್ದಾಳಿ: ದಲಿತರನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು ಕೇಂದ್ರ ಸರ್ಕಾರ ದೇಶಾದ್ಯಂತ ಅನ್ಯಯವಾಗುವಂತೆ ಉಪಯೋಜನೆ ಕಾಯ್ದೆಗೆ ತರಲಿ ಎಂದು ಸವಾಲು ಹಾಕಿದರು. ಈ ವೇಳೆ ಆಡಳಿತ ಪಕ್ಷದ ಸಚಿವರು, ಶಾಸಕರು ಬಿಜೆಪಿ ವಿರುದ್ಧ ಮುಗಿಬಿದ್ದರು. ಬಿಜೆಪಿ ಕಡೆಯಲ್ಲೂ ಶಾಸಕರು ಎದ್ದು ನಿಂತು ಪ್ರತಿ ವಾಗ್ದಾಳಿ ನಡೆಸಿದರು.

ಬಿಜೆಪಿ-ಜೆಡಿಎಸ್ ಸದಸ್ಯರ ಸಭಾತ್ಯಾಗ: ಸಿಎಂ ಸಿದ್ದರಾಮಯ್ಯ ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಮಾತು ಮುಂದುವರೆಸಿದ ಸಿಎಂ, ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯುವ ಯಾವುದೇ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು‌. ಕೇಂದ್ರದ ನೆರವು ಕೋರಿ ಇದುವರೆಗೆ 17 ಪತ್ರಗಳನ್ನು ಬರೆಯಲಾಗಿದೆ. ಒಂದು ಪತ್ರಕ್ಕೆ ಮಾತ್ರ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು.

ನರೇಗಾ ಯೋಜನೆಯಡಿ ದುಡಿಯುವ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂಬ ಉದ್ದೇಶದಿಂದ ಕೇಳಲಾಗಿತ್ತು ಎಂದು ಹೇಳಿದರು. ರಾಜ್ಯಪಾಲರ ಭಾಷಣದಲ್ಲಿನ ಹೇಳಿರುವ ಅಂಶಗಳನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಸುಳ್ಳುಗಳಿದ್ದರೆ ಬೊಟ್ಟು ಮಾಡಿ ಪ್ರತಿ ಪಕ್ಷಗಳು ತೋರಿಸಬೇಕು ಎಂದರು.

ಇದನ್ನೂ ಓದಿ: ನಮ್ಮದು ಗುಡ್ ಎಕನಾಮಿಕ್ಸ್ , ಸಿದ್ಧ ಎಕನಾಮಿಕ್ಸ್ ಅಲ್ಲ : ಸಿಎಂ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.