ETV Bharat / state

ನಮ್ಮದು ಗುಡ್ ಎಕನಾಮಿಕ್ಸ್ , ಸಿದ್ಧ ಎಕನಾಮಿಕ್ಸ್ ಅಲ್ಲ : ಸಿಎಂ ಸಿದ್ದರಾಮಯ್ಯ ತಿರುಗೇಟು

author img

By ETV Bharat Karnataka Team

Published : Feb 20, 2024, 6:58 PM IST

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ರಾಜ್ಯದ ಅರ್ಥಿಕತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಶ್ರೀಮಂತರಿಂದ ತೆರಿಗೆಯನ್ನು ಕಾನೂನು ರೀತಿ ಸಂಗ್ರಹಿಸಿ, ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುತ್ತಿರುವುದು ಗುಡ್ ಎಕನಾಮಿಕ್ಸ್​. ನಾನು ಗುಡ್ ಎಕನಾಮಿಕ್ಸ್​ನಲ್ಲಿ ನಂಬಿಕೆಯಿಟ್ಟಿರುವವನು. ಮುಂದಿನ ವರ್ಷಕ್ಕೆ ಗ್ಯಾರಂಟಗಳಿಗೆ 52,009 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಸಿಎಂ, 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಒಟ್ಟಾರೆ 11495 ಕೋಟಿ ರೂ. ಶಿಫಾರಸ್ಸು ಮಾಡಿದ್ದನ್ನು ರಾಜ್ಯಕ್ಕೆ ಒತ್ತಾಯಿಸಿ ತನ್ನಿ ಎಂದು ಅಂದಿನ ಸರ್ಕಾರಕ್ಕೆ ತಿಳಿಸಿದ್ದೆ. ಕೇಂದ್ರದ ಬಜೆಟ್ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ನೀಡಲಾಗುವುದು ಎಂದು ಹೇಳಿ ಇದಕ್ಕೆ ಯಾವುದೇ ಷರತ್ತುಗಳನ್ನು ಆಗ ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಆ ಸಾಲಿನ ರಾಜ್ಯ ಬಜೆಟ್​ನಲ್ಲಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೂ ಉಲ್ಲೇಖಿಸಿದ್ದಾರೆ. ಆದರೆ ಈವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಹೀಗಾಗಿ ಕೇಂದ್ರದಿಂದ 5300 ಕೋಟಿ ಸಹಾಯಧನವನ್ನು ಬೊಮ್ಮಾಯಿಯವರು ಕೊಡಿಸಲಿ ಎಂದು ಸವಾಲು ಹಾಕಿದರು.

ವಿಶೇಷ ಅನುದಾನ : ಬಜೆಟ್​ನಲ್ಲಿ ಘೋಷಿಸದ ಅನುದಾನ ಕೇಳಿದರೆ ಸಂಘರ್ಷ ಎನ್ನುತ್ತಾರೆ. ರಾಜ್ಯದ ಜನರ ಪರವಾಗಿ, ರಾಜ್ಯಕ್ಕೆ ನ್ಯಾಯ ಕೋರುವುದು ನಮ್ಮ ಧರ್ಮ. ಇಲ್ಲದಿದ್ದರೆ ಅವರಿಗೆ ದ್ರೋಹ ಬಗೆದಂತೆ. ಮಧ್ಯಂತರ ವರದಿಯಲ್ಲಿ 5495 ಕೋಟಿ ಉಲ್ಲೇಖಿಸಲಾಗಿದ್ದು, ಅಂತಿಮ ವರದಿಯಲ್ಲಿ ಇದು ಇಲ್ಲವಾಗಿರುವುದಕ್ಕೆ ಹಣ ನೀಡಿಲ್ಲ ಎಂಬ ವಿವೇಚನೆಯಿಲ್ಲದ ಉತ್ತರವನ್ನು ವಿರೋಧ ಪಕ್ಷದವರು ನೀಡುತ್ತಿದ್ದಾರೆ. ಇದನ್ನು ಡಬಲ್ ಸ್ಟ್ಯಾಂಡರ್ಡ್ಸ್ ಎನ್ನಬೇಕಾಗುತ್ತದೆ ಎಂದರು.

ಫೆರಿಫೆರಲ್ ರಿಂಗ್ ರೋಡ್ ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಘೋಷಿಸಿದ್ದ 6000 ಕೋಟಿ ರೂ.ಗಳನ್ನೂ ನೀಡಿಲ್ಲ. ಎಸ್​ಸಿಪಿ-ಟಿಎಸ್​ಪಿ ಕಾನೂನು ತಂದಿದ್ದು ಕಾಂಗ್ರೆಸ್ ನವರು. ಈ ಬಾರಿ ಎಸ್​ಸಿಎಸ್​ಟಿ ಗೆ 39 ಸಾವಿರ ಕೋಟಿ ರೂ. ನೀಡಿದ್ದು, ಎಸ್​ಸಿಪಿ-ಟಿಎಸ್​ಪಿ ಕಾನೂನನ್ನು ಕೇಂದ್ರದವರು ರಾಷ್ಟ್ರ ಮಟ್ಟದಲ್ಲಿ ಜಾರಿ ಮಾಡಲಿ ನೋಡೋಣ ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ ನಾವು ಮುಂಬಡ್ತಿಯಲ್ಲಿ ಮೀಸಲಾತಿ, ಗುತ್ತಿಗೆದಾರರಿಗೆ ಮೀಸಲಾತಿ ಕಾನೂನು ತಂದಿರುವುದು. ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ , ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದೆ ಅದರಂತೆ ನಡೆದುಕೊಳ್ಳಲಿ. ಕೇಂದ್ರ ಸರ್ಕಾರ ರೈತರ, ದಲಿತರ, ಬಡವರ, ಅಲ್ಪಸಂಖ್ಯಾತರ, ಮಹಿಳೆಯರ, ಕಾರ್ಮಿಕರ, ಸಂವಿಧಾನದ ವಿರೋಧಿಯಾಗಿದೆ. ಅದ್ದರಿಂದ ನಾವು ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ. ನಾವು ಮನುವಾದದಲ್ಲಿ ನಂಬಿಕೆ ಇಟ್ಟಿಲ್ಲ. ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವವರು ನಾವು. ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತಲ್ಲಿ ನಾವು ನಂಬಿಕೆಯಿರಿಸಿದ್ದೇವೆ. ಅದ್ದರಿಂದ ಎಲ್ಲ ವರ್ಗಗಳಿಗೆ ಶಕ್ತಿ ನೀಡಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ವಿವರಿಸಿದರು.

ಸುಳ್ಳುಗಳ ಬಗ್ಗೆ ಜಟಾಪಟಿ : ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಸುಳ್ಳು ಮತ್ತು ಸತ್ಯ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಪಕ್ಷಗಳು ರಾಜ್ಯಪಾಲರ ಭಾಷಣ ಸುಳ್ಳು ಎಂದು ಆರೋಪಿಸಿವೆ. ಆದರೆ ಯಾವ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಏನೋ ಹೇಳಿಕೆ ನೀಡಬೇಕು ಎಂದು ಟೀಕೆ ಮಾಡುತ್ತಿದ್ದಾರೆ. ವಿರೋಧಪಕ್ಷಗಳು ಸರ್ಕಾರವನ್ನು ಹೊಗಳಬೇಕು ಎಂದು ಬಯಸುವುದಿಲ್ಲ. ಆದರೆ ಆಧಾರ ರಹಿತವಾದ ಸುಳ್ಳು ಹೇಳುವುದು ಸರಿಯಲ್ಲ. ಬಿಜೆಪಿಯವರಿಗೆ ಸುಳ್ಳೇ ಮನೆದೇವರು. ಅವರಿಗೆ ಸತ್ಯ ಹೇಳುವುದು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರತಿಪಕ್ಷಗಳಿಂದ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ತಿರುಗೇಟು ನೀಡಿ ರಾಜ್ಯಪಾಲರ ಭಾಷಣದಲ್ಲಿ ಎಲ್ಲವೂ ಸುಳ್ಳೇ ಆಗಿದೆ. ಸತ್ಯ ಯಾವುದು ಎಂದು ಹುಡುಕಬೇಕಾಗಿದೆ ಎಂದರು.

ಇದಕ್ಕೆ ಪ್ರತ್ಯುತ್ತರಿಸಿದ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕರು ಅಂಕಿ ಅಂಶಗಳ ಸಮೇತ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಬಸವರಾಜು ಬೊಮ್ಮಾಯಿಯವರು ಆ ರೀತಿ ಮಾತನಾಡಿಲ್ಲ. ಅವರು ಹೊರಗಡೆ ನಿಜ ಹೇಳುತ್ತಾರೆ. ಸದನದ ಒಳಗಡೆ ರಾಜಕೀಯಕ್ಕಾಗಿ ಟೀಕೆ ಮಾಡುತ್ತಾರೆ ಎಂದು ಕಿಚಾಯಿಸಿದರು. ಅದಕ್ಕೆ ತಿರುಗೇಟು ನೀಡಿದ ಬಸವರಾಜು ಬೊಮ್ಮಾಯಿ, ನಾವು-ನೀವು ಜೊತೆಯಲ್ಲೇ ಇದ್ದವರು. ಹೀಗಾಗಿ ನೀವು ಏನು ಮಾಡುತ್ತೀರೋ ನಾವೂ ಅದನ್ನೇ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ಥಳಕು ಹಾಕಿಕೊಳ್ಳಲು ಯತ್ನಿಸಿದರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಬಿಜೆಪಿಯವರು ಪ್ರತಿಬಾರಿಯೂ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಒಂದಂಶವನ್ನಾದರೂ ನೀವು ಸುಳ್ಳು ಎಂದು ತೋರಿಸಿ ಎಂದು ಸವಾಲು ಹಾಕಿದರು.

ಅದಕ್ಕೆ ಬೊಮ್ಮಾಯಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ ಒಂದು ಬಸ್​ನ್ನೂ ಖರೀದಿಸಲಿಲ್ಲ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದು ಸುಳ್ಳು. ಬಿಎಂಟಿಸಿಗೆ 1311 ಬಸ್‍ಗಳನ್ನು ಕೆಎಸ್‍ಆರ್​ಟಿಸಿಗೆ 70 ಕ್ಕೂ ಹೆಚ್ಚು ಬಸ್​ಗಳನ್ನು ಖರೀದಿಸಿ ನೀಡಲಾಗಿತ್ತು. ಗ್ಯಾರಂಟಿಗಳ ಜೊತೆಗೆ ಶೇ.97 ರಷ್ಟು ಬಜೆಟ್ ಘೋಷಣೆಗೆ ಅಧಿಸೂಚನೆ ಹೊರಡಿಸಿದ್ದೇವೆ ಎಂದು ರಾಜ್ಯಪಾಲರ ಮೂಲಕ ತಿಳಿಸಿದ್ದಾರೆ. ಆದರೆ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಶೇ.55 ರಷ್ಟು ಪ್ರಗತಿಯಾಗಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದರು.

ನಿಮ್ಮ ಎಲ್ಲಾ ಪ್ರಶ್ನೆಗೂ ಹಂತಹಂತವಾಗಿ ಉತ್ತರ ಕೊಡುತ್ತೇನೆ ಎಂದ ಸಿದ್ದರಾಮಯ್ಯ, ಗಲಾಟೆ ಮಾಡುವುದೇ ಪ್ರತಿಪಕ್ಷಗಳ ಕೆಲಸವಾಗಬಾರದು. ಉತ್ತರ ಕೇಳಲು ಇಷ್ಟವಿಲ್ಲ ಎಂದರೆ ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಯವರ ಪ್ರತಿಯೊಂದು ಮಾತಿಗೂ ಅಡ್ಡಿಪಡಿಸುವ ಪ್ರಯತ್ನ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : ಆನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯದಿಂದ ಪರಿಹಾರ: ಬಿ.ವೈ ವಿಜಯೇಂದ್ರ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.